ನೆರೆದ ಜನರ ಮೈ ನವಿರೇಳಿಸಿದ ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆ ರೂಪಕ- ಶಾಲೆಯ 120 ವಿದ್ಯಾರ್ಥಿಗಳಿಂದ ಪಾತ್ರಾಭಿನಯ

ವಿಜಯಪುರ: ಕಿತ್ತೂರು ರಾಣಿ ಎಂದರೆ ಸಾಕು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ಮಹಿಳೆ ವೀರ ರಾಣಿ ಎಂದೇ ಎಲ್ಲರೂ ಸ್ಮರಿಸುತ್ತಾರೆ.  ಅಲ್ಲದೇ, ಕಿತ್ತೂರು ಚೆನ್ನಮ್ಮಳನ್ನು ಎಲ್ಲ ಮಹಿಳೆಯರು ಆರಾಧಿಸುವುದು ಉಂಟು.  ಇಂಥ ವೀರ ರಾಣಿ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಯಶೋಗಾಥೆಯನ್ನು ಗೊತ್ತಿಲ್ಲದವರು ಬಹಳ ಕಡಿಮೆ.  ಪುಸ್ತಕಗಳಲ್ಲಿ ಸಿನೇಮಾಗಳಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಹೋರಾಟದ ಜೀವನವನ್ನು ನೋಡಿರಬಹುದು.

ಆದರೆ, ಅಂದಿನ ಹೋರಾಟದ ರೋಚಕತೆಯನ್ನು ಮಕ್ಕಳು ರೂಪಕ ರೂಪದಲ್ಲಿ ನಡೆಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.  ಬಸವ ನಾಡು ವಿಜಯಪುರ ನಗರದ ಹೊರವಲಯದಲ್ಲಿರುವ ಎ ಆರ್. ಜೆ ಶಾಲೆಯಲ್ಲಿ ಬರೊಬ್ಬರಿ 120 ಮಕ್ಕಳು ರಾಣಿ ಚೆನ್ನಮ್ಮಳ ಕಾಲದಲ್ಲಿದ್ದ ವೇಷಭೂಷ ತೊಟ್ಟು, ಅಂದಿನ ಸ್ವಾತಂತ್ರ್ಯ ಹೋರಾಟದ ಘಟನೆಯ ಪಾತ್ರಧಾರಿಗಳಾಗಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.

 

ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ದೇಶವನ್ನೇ ಆಕ್ರಮಿಸಿಕೊಂಡಿದ್ದ ಆಂಗ್ಲರು ಎಲ್ಲರನ್ನು ಸದೆಬಡಿಯುತ್ತ ಒಂದೊಂದೆ ರಾಜ್ಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಮುಂದುವರೆದಿದ್ದಾಗ ಅವರಿಗೆ ಸಿಂಹಸ್ವಪ್ನಳಾಗಿ ಕಂಡಿದ್ದು ಬೆಳಗಾವಿ ಜಿಲ್ಲೆಯ ಕಿತ್ತೂರಿನ ವೀರರಾಣಿ ಕಿತ್ತೂರ ಚೆನ್ನಮ್ಮ.  ತನ್ನ ರಾಜ್ಯ ಕಿತ್ತೂರಿನ ರಕ್ಷಣೆಗಾಗಿ ಹೋರಾಡಿ ವಿಶ್ವವಿಖ್ಯಾತಿಯಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರ.  ಈ ವೀರರಾಣಿ ಕಿತ್ತೂರ ಚೆನ್ನಮ್ಮಳ ಸಾಮರ್ಥ್ಯದ ಕಥೆಯನ್ನು ಸ್ಫೂರ್ತಿದಾಯಕವಾಗುವಂತೆ ನೃತ್ಯ ರೂಪಕದಲ್ಲಿ ಎ ಆರ್ ಜೆ ಇಂಟರ್ ನ್ಯಾಷನಲ್ ಫ್ಯೂಚರಿಸ್ಟಿಕ್ ಶಾಲೆಯ 120 ವಿದ್ಯಾರ್ಥಿಗಳ ನಡೆಸಿಕೊಟ್ಟಿದ್ದಾರೆ.

 

ಕಪ್ಪ.. ಕಪ್ಪ… ಕಪ್ಪ ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು! ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ,  ಭೂಮಿ ಬೆಳೆ ನೀಡುತ್ತದೆ.  ನಿನಗೇಕೆ ಕೊಡಬೇಕು ಕಪ್ಪ? ನೀವೇನು ನೆಂಟರೆ? ಸಹೋದರರೇ? ಇಲ್ಲ ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಉತ್ತಿರಾ? ಬಿತ್ತಿರಾ? ಬೆಳೆದಿರಾ? ನೀರು ಹಾಯಿಸಿ ಕಳೆ ಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ? ಎನ್ನುವ ರಾಣಿ ಚೆನ್ನಮ್ಮ ಪಾತ್ರಧಾರಿಯ ಅಭಿನಯಕ್ಕೆ ಅಲ್ಲಿ ನೆರೆದ ಪ್ರೇಕ್ಷಕರಿಂದ ನಿರಂತರವಾಗಿ ಚಪ್ಪಾಳೆ ಬಾರಿಸುತ್ತ ಪ್ರೋತ್ಸಾಹಿಸುತ್ತಿದ್ದ ದೃಶ್ಯಗಳು ಅಲ್ಲಿ ಗತೈವಭವದ ವಾತಾವರಣವನ್ನು ಮರುಕಳಿಸುವಂತೆ ಮಾಡಿತ್ತು.  ಸುಮಾರು 36 ನಿಮಿಷಗಳ ಈ ನೃತ್ಯ ರೂಪಕದಲ್ಲಿ ವಿದ್ಯಾರ್ಥಿಗಳು ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸುವ ಮೂಲಕ ವಾವ್ ಎನಿಸಿಕೊಂಡರು.  ಈ ರೂಪಕ ತನಗೆ ಬಲು ಇಷ್ಟವಾಗಿದ್ದು, ಕಿತ್ತೂರು ಚೆನ್ನಮ್ಮಳ ಪಾತ್ರ ತುಂಬಾ ಹಿಡಿಸಿದೆ ಎನ್ನುತ್ತಾಳೆ ಕಿತ್ತೂರ ಚೆನ್ನಮ್ಮಳ ಪಾತ್ರಧಾರಿ ವಿದ್ಯಾರ್ಥಿನಿ ಶ್ರೀನಿಧಿ ಪಾಟೀಲ.

ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಪಾತ್ರದಾರಿ ವಿದ್ಯಾರ್ಥಿಯ ಅಮೋಘ ಅಭಿನಯ ಕೂಡ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಯಿತು.  120 ವಿದ್ಯಾರ್ಥಿಗಳು ಸೈನಿಕರು, ಬ್ರಿಟಿಷ್ ಅಧಿಕಾರಿಗಳು, ಬ್ರಿಟಿಷ್ ಸೈನಿಕರು ಹಾಗೂ ಕಿತ್ತೂರು ಸಂಸ್ಥಾನದ ನಾಗರಿಕರಾಗಿ ಕಾಣಿಸಿಕೊಂಡರು.  ವೀರಾವೇಷದಿಂದ ಹೊರಾಡುವ ದೃಶ್ಯ ಮನೋಹರವಾಗಿತ್ತು.  ಪ್ರತಿ ನಿಮಿಷಕ್ಕೆ ಬದಲಾಗುತ್ತಿದ್ದ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಧಾರಿ ವಿದ್ಯಾರ್ಥಿಗಳು ಹಾಕುತ್ತಿದ್ದ ಹೆಜ್ಜೆಗಳು ನಯನ ಮನೋಹರವಾಗಿದ್ದವು.  ಬ್ರಿಟಿಷರ ವಿರುದ್ದ ಹೊರಾಟ ಮಾಡಿ ಜಯ ಸಾಧನೆ ಬಳಿಕ ರಾಣಿ ಚೆನ್ನಮ್ಮ ಕುದುರೆ ಮೇಲೆ ಏರಿ ಬರುವ ದೃಶ್ಯವಂತೂ ನೆರೆದವರ ಜನರಿಂದ ಬಹುಪರಾಕ್ ಎನ್ನುವಂತೆ ಮಾಡಿತು.  ಈ ನೃತ್ಯ ರೂಪಕಕ್ಕೆ ಶಾಲೆಯ ಚೇರ್ಮನ್ ಪ್ರದೀಪ ಜೈನ್ ಬೇಕಾದ ಸಕಲ ವ್ಯವಸ್ಥೆ ಮಾಡಿದ್ದರು.  ಶಾಲೆಯ ನೃತ್ಯ ಶಿಕ್ಷಕ ಸಾಗರ ಈ ನೃತ್ಯ ಸಂಯೋಜಿಸಿದ್ದರು.  ‌ಈ ರೂಪಕ ಎಲ್ಲರಿಗೂ ಮುದ ನೀಡಿತು ಎಂದು ಪೋಷಕರಾದ ಮಾಲಿನಿ ಪ್ರಭುಗೌಡ ಪಾಟೀಲ, ಪೋಷಕರು ಶಾಲೆಯ ಈ ಸಾಂಸ್ಕೃತಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವ ನಾಡಿನ ಗುಮ್ಮಟನಗರಿಯ ಅಂತರರಾಷ್ಟ್ರೀಯ ಮಟ್ಟದ ಶಾಲೆಯಾಗಿರುವ ಎ ಆರ್ ಜೆ ಆಂಗ್ಲ ಮಾಧ್ಯಮ ಶಾಲೆಯಾಗಿದ್ದರೂ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದು ಅಲ್ಲಿ ನೆರೆದವರ ಮನ ಗೆದ್ದಿತು.  ಅಷ್ಟೇ ಅಲ್ಲ, ಶಾಲೆಯ ಆಡಳಿತ ಮಂಡಳಿಯ ಈ ಕಾರ್ಯಕ್ಕೆ ಶ್ಲಾಘನೀಯಕ್ಕೂ ಕಾರಣವಾಯಿತು.

Leave a Reply

ಹೊಸ ಪೋಸ್ಟ್‌