ನವದೆಹಲಿ: ಎಸ್ಕಾಂ ಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್. ಕೆ. ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎಸ್ಕಾಂ ಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್ ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂ ಗಳಿಗೆ ಬ್ಯಾಂಕ್ ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ. ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮದು ಅತಿ ಹೆಚ್ವು ಇಂಧನ ಸಹಾಯ ಧನ ನೀಡುವ ರಾಜ್ಯ. ರೂ. 15000 ಕೋ. ಗಳ ಸಹಾಯ ಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಇಂಧನ ಕ್ಷೇತ್ರದಲ್ಲಿ ಶೇ. 4 ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, ಶೇ. 0.5 ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.