ವಿಜಯಪುರ: ಗೃಹ ಖಾತೆ ನೀಡಿದರೆ ಹಿಜಾಬ್ ಮತ್ತು ಕೇಸರಿ ಶಾಲು ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿ ಶಾಲ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ದೇಶ ತಮಗೆ ವಾಸಿಸಲು ಯೋಗ್ಯ ಇಲ್ಲ ಎನ್ನುವವರು ಜನ್ನತ್ ಗಾದರೂ ಹೋಗಲಿ, ಪಾಕಿಸ್ತಾನ ಕಾದರೂ ಹೋಗಲಿ ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ಅನ್ನ ತಿಂದು ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ಎರಡು ಆಯ್ಕೆಗಳಿವೆ. ಜನ್ನತ್ ಗಾದರೂ ಹೋಗಲಿ. ಪಾಕಿಸ್ತಾನ ಕಾದರೂ ಹೋಗಲಿ. ಇದು ಒಳ್ಳೆಯ ಮುಸ್ಲಿಮರ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ
ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವುದು ನಿಜ. ಇದು ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ. ಇದು ಶಾಲೆಗಳ ಸಮವಸ್ತ್ರದ ವಿಚಾರ. ನಿಯಮ ಉಲ್ಲಂಗಿಸಿ ಉಲ್ಲಂಘಿಸಿ ನಮ್ಮ ಧರ್ಮ ಹೀಗೆ ಹೇಳುತ್ತದೆ ಎಂದು ಹೇಳಬಾರದು. ಜಾತ್ಯತೀತ ರಾಷ್ಟ್ರ ಎಂದು ನಾವು ಹೇಳುತ್ತೇವೆ. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಎಲ್ಲರಿಗೂ ನಮ್ಮ ಧರ್ಮ ಎಂದರೆ ಇದೇ ಎಂದು ಅನಿಸಿದ ಮೇಲೆ ಹಿಂದೂಗಳಿಗೂ ನಾವ್ಯಾಕೆ ಕೇಸರಿ ಶಾಲು ಹಾಕಿಕೊಳ್ಳಬಾರದು ಅನಿಸುತ್ತೆ. ನಾವೇಕೆ ಕೇಸರಿ ತಿಲಕ ಹಾಕಿಕೊಳ್ಳಬಾರದು ಎನಿಸುತ್ತದೆ ಎಂದು ಅವರು ಹೇಳಿದರು.
ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ
ಸಿದ್ದರಾಮಯ್ಯ ಅವರಂಥ ಬೇಜವಾಬ್ದಾರಿ ನಾಗರಿಕರು ಈ ದೇಶದಲ್ಲಿ ಇಲ್ಲ. ಸಿದ್ದರಾಮಯ್ಯ ತಿಲಕ್ ಕಚ್ಚಿ ಕೊಳ್ಳುವುದಿಲ್ಲ. ಹಾಲುಮತದವರು ಪೇಟ ಸುತ್ತಲು ಬಂದರೆ ಕಿತ್ತೆಸೆಯುತ್ತಾರೆ. ಆದರೆ ಅದೇ ಟಿಪ್ಪು ಸುಲ್ತಾನ್ ಟೋಪಿ ಹಾಕಿಕೊಳ್ಳಲು ಇವರಿಗೆ ಬರುತ್ತೆ. ಆದರೆ ಅದೇ ಬೀರಪ್ಪ ದೇವರ ಪೇಟ ಸುತ್ತಿಕೊಳ್ಳಲು ಅವರಿಗೆ ನಾಚಿಕೆ ಬರುತ್ತೆ. ಇದು ಎಂಥ ಜಾತ್ಯತೀತತೆ. ಇದು ಓವರ್ ಡೋಸ್ ಆಗುತ್ತಿದೆ. ನಾನು ದಿನಗಳಿಂದ ಹೇಳುತ್ತಿದ್ದೇನೆ. ಕಾಂಗ್ರೆಸ್ ಇದರಲ್ಲಿ ನಾಶವಾಗುತ್ತಿದೆ. ಕಾಂಗ್ರೆಸ್ ಪಾಕಿಸ್ತಾನ ಪಾರ್ಟಿ ಆಗುತ್ತಿದೆ. ಕಾಂಗ್ರೆಸ್ಸಿಗೆ ನಮ್ಮ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ. ದೇಶದ ಬಗ್ಗೆ ಅಭಿಮಾನವಿಲ್ಲ. ರಾಹುಲ ಗಾಂಧಿ ಚೀನಾ ಏಜೆಂಟರಂತೆ, ಪಾಕಿಸ್ತಾನ ಏಜೆಂಟರಂತೆ ಮಾತನಾಡುತ್ತಾರೆ. ಇದು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಇದರಿಂದ ಸಹಜವಾಗಿ ಎಲ್ಲ ಯುವಕರಲ್ಲಿ ಕೇಸರಿ ಶಾಲು ಹಾಕಿಕೊಂಡು ಬರಲು ಕಾರಣವಾಗುತ್ತಿದೆ. ಇದನ್ನು ನಾನು ಸಮ್ಮತಿಸುತ್ತೇನೆ. ಸಮವಸ್ತ್ರದ ಬಗ್ಗೆ ಬಗ್ಗೆ ಹೈಕೋರ್ಟ್ ನೀಡುವ ತೀರ್ಪಿಗೆ ಬದ್ಧ ಇರುತ್ತವೆ. ಈ ದೇಶದಲ್ಲಿರುವ ಎಲ್ಲರೂ ಹೈಕೋರ್ಟ್ ತೀರ್ಪಿಗೆ ಬದ್ಧರಾಗಿರಬೇಕು ಎಂದು ಯತ್ನಾಳ ತಿಳಿಸಿದರು.
ಕಾಂಗ್ರೆಸ್ ಮುಸ್ಲಿಮರಿಗೆ 50 ವರ್ಷಗಳಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಿ ತಲೆಮೇಲೆ ಕೂಡಿಸಿಕೊಂಡಿದೆ. ಇದನ್ನು ಮುಸ್ಲಿಮರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಹಾಗೆ ನಡೆಯುವುದಿಲ್ಲ. ದೇಶದಲ್ಲಿ ನರೇಂದ್ರ ಮೋದಿ ಸರಕಾರವಿದೆ. ದೇಶ ಮಕ್ಕಳನ್ನು ತಯಾರು ಮಾಡುವ ಫ್ಯಾಕ್ಟರಿಯಲ್ಲ. ಬೇಕಾದಷ್ಟು ಮದುವೆಯಾಗುವುದು ಬೇಕಾದಷ್ಟು ಮಕ್ಕಳನ್ನು ಹೇರುವುದನ್ನು ತಡೆಯಲು ತ್ರಿವಳಿ ತಲಾಕ್ ಜಾರಿಗೆ ತಂದಿದ್ದಾರೆ. ಯಾರು ಬೇಕಾದರೂ ಬಂದು ಮಜಾ ಮಾಡಲು ಈ ದೇಶ ಅನ್ನ ಛತ್ರವಲ್ಲ. ಆ ಕಾಲ ಹೋಯಿತು. ಈಗ ಯುವಜನಾಂಗ ಜಾಗೃತರಾಗಿದ್ದಾರೆ. ದೇಶಭಕ್ತರಾಗಿದ್ದಾರೆ. ಅಂದಿನ ಕಾಲ ಬೇರೆ. ಇಂದಿನ ಕಾಲ ಬೇರೆ. ಕೇಸರಿ ಶಾಲು ಹಾಕಿಕೊಂಡಿದ್ದು ಒಳ್ಳೆಯ ಸಂಕೇತ. ಶಾಲೆಯಲ್ಲಿ ಸಮವಸ್ತ್ರಗಳ ಬಗ್ಗೆ ರೂಪಿಸಲಾಗುವ ನೀತಿಗೆ ಎಲ್ಲರೂ ಬದ್ಧರಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ. ಮುಸ್ಲಿಮರಿಗೆ ಒಂದು, ಹಿಂದೂಗಳಿಗೆ ಒಂದು ಇರಲ್ಲ. ಎಲ್ಲ ಮಕ್ಕಳು ಶಾಲೆಗೆ ಹೋಗುವುದು ಶಾಲೆ ಕಲಿಯಲು. ಇಸ್ಲಾಂ ಧರ್ಮದ ಬೋಧನೆಗಾಗಿ ಅಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ನಮ್ಮ ಯುವ ಜನಾಂಗ ಕೇಸರಿ ಶಾಲು ಹಾಕಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ
ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಮಾಡಲಿ. ನಮಗೇನು ಗಡಿಬಿಡಿ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ನನಗೇನು ಅರ್ಜೆಂಟಿಲ್ಲ. ನಾನೇನು ನವದೆಹಲಿಗೆ ಹೋಗಿಲ್ಲ. ನಾನೇನು ಲಾಬಿ ಮಾಡಿಲ್ಲ. ನಾನು ಯಾವ ಮುಖ್ಯಮಂತ್ರಿ ಅಥವಾ ಮಂತ್ರಿಯವರ ಜೊತೆ ಮಾತಾಡಿಲ್ಲ. ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ತಮ್ಮ ಜೊತೆ ಕೂಡಿಸಿಕೊಂಡು ಅರ್ಧ ಗಂಟೆ ಮಾತನಾಡಿದ್ದಾರೆ. ಸಚಿವ ಸಂಪುಟದ ಬಗ್ಗೆ ಮಾತನಾಡಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚೆಸಿದ್ದಾರೆ. ಕರ್ನಾಟಕದಲ್ಲಿ ಮುಂದಿನ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಯಾವಾಗ ನಿರ್ಧರಿಸಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೋ ಮಾಡಲಿ. ನಾನೇನು ಗಡಿಬಿಡಿಯಲ್ಲಿ ಇಲ್ಲ. ಕಂಗಾಲು ಕೂಡ ಆಗಿಲ್ಲ. ಉತ್ಸುಕತೆಯಿಂದ ದೆಹಲಿಯಲ್ಲಿ ಕುಳಿತು ಯಾವುದೇ ರೀತಿಯಿಂದ ಅಂಗಲಾಚುತ್ತಿಲ್ಲ. ಯಾರ ಕಾಲು ಮುಗಿಯುವುದಿಲ್ಲ. ಕೈ ಮುಗಿಯುವುದಿಲ್ಲ. ನಾನು ಸಚಿವ ಸ್ಥಾನವನ್ನೇ ಕೇಳಿಲ್ಲ. ಗೃಹಖಾತೆ ಕೇಳಿಲ್ಲ. ಕಂದಾಯ ಬೇಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಕೊಡಿ ಎಂದಿಲ್ಲ ಎಂದು ಸ್ಪಷ್ಟಪಡಿಸಿದರುಮ
ಬಿಜೆಪಿ ಟಿಕೆಟ್ ವಿಚಾರ
ಬಿಜೆಪಿ ಟಿಕೆಟ್ ಕೇಳುವವರು ಕೇಳಲಿ. ನಮ್ಮ ಪಕ್ಷದಲ್ಲಿ ಎಲ್ಲೂ ಅರ್ಜಿ ಇಟ್ಟುಕೊಂಡು ಟಿಕೆಟ್ ನೀಡುವ ಪದ್ಧತಿಯಿಲ್ಲ. ಯಾರಾರು ಟಿಕೆಟ್ ಕೇಳುತ್ತಾರೆ ಕೇಳಲಿ. ಕೇಳುವವರಿಗೆ ತಿರುಗಾಡುವವರಿಗೆ ನಾನೇಕೆ ಬೇಡ ಎನ್ನಲಿ? ನಿರಾಣಿ ಯಾರಿಗೋ ದುಡ್ಡುಕೊಟ್ಟು ಪ್ರೆಸ್ ಮೀಟ್ ಮಾಡಿಸಿರುತ್ತಾರೆ. ಪ್ರೆಸ್ ಮೀಟ್ ಮಾಡಿ ನಿರಾಣಿ ಎನ್ನುತ್ತಾರೆ. ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಸಕ್ಕರೆ ತಂದು ತಿಂಡಿ ಮಾಡಿ ಟೀ ನೀಡಿ ಮಾಧ್ಯಮಗಳಿಗೆ ಕೊಡುತ್ತಿದ್ದಾರೆ. ನಿಮಗೆ ಉಚಿತವಾಗಿ ತಿಂಡಿ ತಿನ್ನಿಸುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಟಾಕಿ ಹಾರಿಸಿದರು.