ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಅನುಮೋದನೆ ನೀಡಲು ರಕ್ಷಣಾ ಸಚಿವ ರಾಜನಾಥಸಿಂಗ್ ಗೆ ಸಿಎಂ ಮನವಿ

ನವದೆಹಲಿ: ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ನಾನಾ ವಿಷಯಗಳ ಕುರಿತು ಚರ್ಚಿಸಿದರು.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ

ಸಂಗೊಳ್ಳಿಯಲ್ಲಿ ರೂ. 189 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮುಕ್ತಾಯದ ಹಂತದಲ್ಲಿದ್ದು ಈ ಶಾಲೆಯನ್ನು ಸೈನಿಕ ಸ್ಕೂಲ್ ಸೊಸೈಟಿಗೆ ಹಸ್ತಾಂತರಿಸಲು ಅನುವು ಮಾಡಿ ಕೊಡುವಂತೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.

 

ಸೈನಿಕ್ ಸ್ಕೂಲ್ ಸೊಸೈಟಿಯ ಅಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  ಸೈನಿಕ ಸ್ಕೂಲ್ ಮಾನದಂಡಗಳ ಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ.  ಈ ಹಿನ್ನೆಲೆಯಲ್ಲಿ ಶೀಘ್ರವೇ ಈ ಶಾಲೆಯನ್ನು ಸೈನಿಕ್ ಸ್ಕೂಲ್ ಸೊಸೈಟಿಯ ಅಧೀನಕ್ಕೆ ಒಳಪಡಿಸಲು ಅನುಮೋದನೆ ನೀಡುವಂತೆ ಮುಖ್ಟಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಇತರ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ರಕ್ಷಣಾ ಸಚಿವರಿಗೆ ಸರಕಾರದ ಆರು ತಿಂಗಳ ವರದಿ ನೀಡಿದ ಸಿಎಂ

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರಕಾರ ಮಾಡಿರುವ ಸಾಧನೆಯ ಕಿರುಹೊತ್ತಿಗೆ ಹಾಗೂ ತಮ್ಮ ಸರಕಾರದ ಯೋಜನೆಗಳಿಂದ ಬಡವರು ಹಾಗೂ ದೀನ-ದಲಿತರಿಗೆ ಮುಂದಿನ ದಿನಗಳಲ್ಲಿ ಆಗುವ ಲಾಭ ಹಾಗೂ ಬದಲಾವಣೆ ಕುರಿತು ಐಸೆಕ್ ಸಂಸ್ಥೆ ನೀಡಿರುವ ಅಧ್ಯಯನ ವರದಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ, ಹಾವೇರಿ ಸಂಸದ ಶಿವಕುಮಾರ ಉದಾಸಿ ಮತ್ತು ಗುಲ್ಬರ್ಗಾ ಸಂಸದ ಉಮೇಶ್ ಜಾದವ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌