ಇಂದಿನ ದಿನಗಳಲ್ಲಿ ಆತ್ಮರಕ್ಷಣೆ ಕಲೆಯು ಹೆಣ್ಣು ಮಕ್ಕಳಿಗೆ ಬಹಳ ಅತ್ಯವಶ್ಯಕ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಹೆಣ್ಣು ಮಕ್ಕಳಿಗೆ ಇಂದಿನ ದಿನಗಳಲ್ಲಿ ಆತ್ಮರಕ್ಷಣೆ ಕಲೆ ಬಹಳ ಅವಶ್ಯವಾಗಿದ್ದು, ಇದರಿಂದ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು.

ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಂಯುಕ್ತಾಶ್ರಯದಲ್ಲಿ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನುರಿತ ತರಬೇತುದಾರರಿಂದ ಶಾಲೆಗಳಲ್ಲಿ ಆತ್ಮರಕ್ಷಣೆ ಕಲೆಯ ಕೌಶಲ್ಯ ತರಬೇತಿ ಆಯೋಜಿಸಲು ಯೋಜನೆ ರೂಪಿಸಲಾಗಿದ್ದು, ಎಲ್ಲ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು.  ವಿದ್ಯಾರ್ಥಿಗಳು ಓದಿನೊಂದಿಗೆ ಇಂಥ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು.  ಈ ಕಲೆಗಳನ್ನು ಕಲಿತರೆ ಜೀವನದ ಕೆಲವು ಕೆಟ್ಟ ಸನ್ನಿವೇಶಗಳನ್ನು ಹೆಣ್ಣುಮಕ್ಕಳು ಸುಲಭವಾಗಿ ಎದುರಿಸಬಹುದು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಇಂಥ ಸಕಲೆಗಳನ್ನು ರೂಢಿಸಿಕೊಂಡು, ಕಾಲೇಜು ಹಂತದಲ್ಲಿಯೂ ಇದನ್ನು ಮುಂದುವರೆಸಿಕೊಂಡು ಹೋಗಬೇಕು.  ಟಿವಿ, ಮೊಬೈಲ್ ಬಳಕೆಗಿಂತ ಆತ್ಮರಕ್ಷಣೆಯಂಥ  ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿ, ಸದೃಢತೆಯ ವ್ಯಕಿತ್ವ ಹೊಂದಿದವರಿಂದ ಸದೃಢ ದೇಶ ನಿರ್ಮಾಣ ಸಾಧ್ಯ.  ಇದಕ್ಕಾಗಿ ಆತ್ಮರಕ್ಷಣೆ ಕಲೆಯು ಪೂರಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತರಬೇತುದಾರ ವಿಜಯಕುಮಾರ ರಾಠೋಡ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಸಿಪಾಲಿ ರಾಠೋಡ, ಶ್ರೀನಿಧಿ ಅವರು ಆತ್ಮರಕ್ಷಣೆ ಕಲೆಯ ಪ್ರದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸತೀಶ ಸಜ್ಜನ, ಶಿಕ್ಷಕಿಯರಾದ ಹೀನಾಕೌಸರ ಕಡಕೋಳ, ದಾನಮ್ಮ ಪಾಟೀಲ, ಸಂದಲಬಿ ಮುಜಾವರ, ಶಿಕ್ಷಕರಾದ ಪ್ರಶಾಂತ ಸಿಂಧೆ, ವಾರ್ಡನ್ ಕವಿತಾ ಹೂಗಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌