ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ರೈತರಿಂದ ಆರೋಗ್ಯ ಸಚಿವರಿಗೆ ಮನವಿ

ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ ಅವರಿಗೆ ಇಂಗಳೇಶ್ವರ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಬೆಂಗಳೂರಿನಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಅರವಿಂದ ಕೃಷ್ಣಾಜಿ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕೃಷ್ಣಾಜಿ ಕುಲಕರ್ಣಿ, ಇಂಗಳೇಶ್ವರ ಗ್ರಾಮವು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆಯಿರುವ ಗ್ರಾಮವಾಗಿದೆ. ವಿಶ್ವಗುರು ಬಸವಣ್ಣನವರು ಜನ್ಮಸ್ಥಳವೂ ಆಗಿದೆ. ಇಲ್ಲಿ 15 ಸಾವಿರ ಜನಸಂಖ್ಯೆಯಿದೆ. ಹಲವಾರು ವರ್ಷಗಳಿಂದ ಗ್ರಾಮದ ಜನತೆಯ ಆರೋಗ್ಯ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಹೋರಾಟ ಮಾಡಲಾಗುತ್ತಿದೆ. ಬಸವನ ಬಾಗೇವಾಡಿ ಆಸ್ಪತ್ರೆ ಹಾಗೂ ಕುದರಿ ಸಾಲವಾಡಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತು ಪಡಿಸಿದರೆ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಆರೋಗ್ಯಕೇಂದ್ರಗಳು ಇಲ್ಲ. ಇಂಗಳೇಶ್ವರದ ಸುತ್ತಮುತ್ತಲು ಬರುವ ಗ್ರಾಮಗಳು ಇಂಗಳೇಶ್ವರ ಮೇಲೆ ಅವಲಂಬಿತವಾಗಿವೆ. ಮಸಬಿನಾಳ, ಡೋಣೂರ, ಯಂಭತ್ನಾಳ, ನೇಗಿನಾಳ, ಹುಲ್ಲಾಳ, ಬಳ್ಳಾಊರ, ಅರಳಿಚಂಡಿ, ಬಿಸನಾಳ, ಬೊಮ್ಮನಳ್ಳಿ , ಮಾರ್ಕಪ್ಪನಳ್ಳಿ, ಸಾತಿಹಾಳ, ರೆಬಿನಾಳ, ಉತ್ನಾಳ ಹಾಗೂ ದಿಂಡವಾರ ಸೇರಿದಂತೆ ಇನ್ನು ಹಲವಾರು ಈ ಹಳ್ಳಿಗಳು ಈ ಗ್ರಾಮಕ್ಕೆ ಹತ್ತಿರದಲ್ಲಿವೆ ಎಂದು ಹೇಳಿದರು.

ಇಂಗಳೇಶ್ವರ ಗ್ರಾಮವು ಈ ಗ್ರಾಮಗಳಿಗೆ ಮಧ್ಯವರ್ತಿ ಸ್ಥಳವಾಗಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದು ಸೂಕ್ತವಾಗಿದೆ. ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗೆ ಇಂಗಳೇಶ್ವರಕ್ಕೆ ಬರಲು ಅನುಕೂಲವಿದೆ. ರಾತ್ರಿ ಸಮಯದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತಿದೆ. ಮಧ್ಯರಾತ್ರಿಯಲ್ಲಿ ರೋಗಿಗಳನ್ನು ಬಸವನ ಬಾಗೇವಾಡಿ ಅಥವಾ ವಿಜಯಪುರಕ್ಕೆ ಕರೆದುಕೊಂಡು ಹೋಗಬೇಕು. ಇದರಿಂದ ಜನತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕೆಂದು ಮನವಿ ಅವರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವ ಡಾ. ಕೆ. ಸುಧಾಕರ, ರಾಜ್ಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಾಗ ಇಂಗಳೇಶ್ವರ ಗ್ರಾಮಕ್ಕೂ ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತರಾದ ಅಪ್ಪು ಪತಂಗೆ, ದುಂಡಪ್ಪ ಐಗಳಿ, ರೇವಣಸಿದ್ದ ದಳವಾಯಿ, ಮಲ್ಲಪ್ಪ ಯಾಳವಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌