ಬೆಂಗಳೂರು: ಫೆ. 14 ರಿಂದ ಪ್ರೌಢ ಶಾಲೆಗಳನ್ನು ಪುನಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಗೃಹ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಶುಕ್ರವಾರ ಉನ್ನತ ಮಟ್ಟದ ಸಭೆ
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರಕಾರದ್ದಾಗಿದೆ. ಶುಕ್ರವಾರ ಸಂಜೆ ಎಲ್ಲ ಸಚಿವರು, ಡಿಸಿ, ಎಸ್‍ಪಿ, ಸಿಇಓಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು. ನಾನು, ಶಿಕ್ಷಣ ಹಾಗೂ ಗೃಹ ಸಚಿವರು ನಿರಂತರ ಸಂಪರ್ಕದಲ್ಲಿರದ್ದೇವೆ. ಹಿರಿಯ ಅಧಿಕಾರಿಗಳು ಕೂಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಹೈಕೋರ್ಟ್ ಆದೇಶ ಬರುವವರೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಶಿಕ್ಷಣವನ್ನು ಮುಂದುವರೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಬಾರಿ ಶಾಲೆಗಳು ಪ್ರಾರಂಭವಾದಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು
ಶಾಲೆಗಳ ವಸ್ತ್ರ ಸಂಹಿತೆಯ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದವು ಹೈಕೋರ್ಟ್ ಮೆಟ್ಟಿಲು ಏರಿದೆ. ಎಲ್ಲರೂ ಶಾಂತಿ ಕಾಪಾಡಿ ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮಕ್ಕಳಲ್ಲಿ ಗೊಂದಲ ಕಡಿಮೆಯಾಗಿದೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೆಲವು ದೃಶ್ಯಾವಳಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ. ಹೊರಗಡೆಯಿಂದ ಆಗುವ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ತ್ರ್ರಿಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿ ಪ್ರತಿದಿನ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಶಾಂತಿ ಕಾಪಾಡಲು ಕಾಲೇಜಿನಲ್ಲಿ ಯಾವುದೇ ಧಾರ್ಮಿಕವಾದ ಬಟ್ಟೆಯನ್ನು ಹಾಕಿಕೊಳ್ಳುವುದು ಬೇಡ ಎಂಬ ಸೂಚನೆ ನೀಡಿದ್ದಾರೆ. ಶಾಲೆಗಳು ಪ್ರಾರಂಭಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಿದೆ ಎಂದು ಸಿಎಂ ತಿಳಿಸಿದರು.
ವಿದ್ಯಾರ್ಥಿಗಳಿಗೆ ಧನ್ಯವಾದ
ವಿದ್ಯಾರ್ಥಿಗಳು ಒಗ್ಗಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಶಾಲೆಗಳ ಹಾಗೂ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ. ಸಿ. ನಾಗೇಶ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಮುಂತಾದವರು ಉಪಸ್ಥಿತರಿದ್ದರು.