ಹರಿಹರ ಪೀಠವೇ ಪಂಚಮಸಾಲಿಗಳಿಗೆ ಮೂಲಪೀಠ- ಫೆ. 12, 13 ರಂದು ನೂತನ ಪೀಠದ ಕಾರ್ಯಕ್ರಮದ ಮಾಹಿತಿ ನೀಡಿದ ಶ್ರೀ ಸಂಗನಬಸವ ಶಿವಾಚಾರ್ಯರು

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ ಹೊರತು ಬೇರೆ ಪೀಠಗಳು ಮೂಲಪೀಠವಲ್ಲ ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ.  10 ಲಕ್ಷ ಭಕ್ತರ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಡಾ. ಮಹಾಂತ ಸ್ವಾಮೀಜಿಗಳನ್ನು ಮೊದಲ ಜಗದ್ಗುರಗಳನ್ನಾಗಿ ಮಾಡಲಾಗಿತ್ತು ಎಂದು ಶ್ರೀ ಅಭಿನವ ಸಂಗನಬಸವ ಮಹಾಸ್ವಾಮೀಜಿ ಅವರು ಯತ್ನಾಳ ಮತ್ತು ಕೂಡಲ ಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಹೇಳಿಕೆಯನ್ನು ಈ ಮೂಲಕ ಅಲ್ಲಗಳೆದಿದ್ದಾರೆ.

ಈಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಬಳಿ ಸ್ಥಾಪಿಸಲಾಗುತ್ತಿರುವ ಪಂಚಮಸಾಲಿ ಪೀಠ ಮೂರನೇ ಪೀಠ ಎಂಬುದನ್ನು ಒಪ್ಪದ ಅವರು, ಇದು ಪಂಚಮಸಾಲಿಗಳ ಪೀಠ ಎಂದು ಮಾರ್ಮಿಕವಾಗಿ ಹೇಳಿದರು.

ಆಲಗೂರ-ಜಮಖಂಡಿ ನೂತನ ಪೀಠದ ಜಗದ್ಗುರುಗಳಾಗಿ ನೇಮಕ ಮಾಡಲಾಗಿರುವ ಡಾ. ಮಹಾದೇವ ಶಿವಾಚಾರ್ಯ ಶ್ರೀಗಳು ಸಿದ್ಧಾಂತ ಶಿಖಾಣಣಿ ಪುಸ್ತಕ ಬರೆಯುವಾಗ ಅಳಿಲು ಸೇವೆ ಮಾಡಿದ್ದಾರೆ.  ಸಂಸ್ಕೃತದಲ್ಲಿ 10 ರಿಂದ 15 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಪೂಜಾ ನಿಷ್ಠರು ಸಿಕ್ಕಿದ್ದು ಸಮಾಜಕ್ಕೆ ಒಳಿತಾಗಲಿದೆ.  ಫೆ. 12 ರಂದು ನೂತನ ಗುರುಗಳ ಪುರಪ್ರವೇಶ ಆಗಲಿದೆ. ಗಿರೀಶ ಅವರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.  ರಾತ್ರಿ 8 ರಿಂದ 12ರ ವರೆಗೆ ವೈದಿಕ ಬಳಕ ಪೂಜ್ಯರ ಸಮ್ಮುಖದಲ್ಲಿ ಎಲ್ಲ ಪೂಜೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.  ಫೆ. 12ರ ಮಧ್ಯರಾತ್ರಿ 12 ರಿಂದ ಫೆ. 13ರ ಬೆ. 2ರ ವರೆಗೆ ವಿಶ್ರಾಂತ್ರಿ, ಬೆ. 3ರ ವರೆಗೆ ಬೆಳಗಿನ ನಿತ್ಯ ಕಾರ್ಯಗಳು ನಡೆಯಲಿವೆ ಎಂದು ಶ್ರೀಗಳು ಮಾಹಿತಿ ನೀಡಿದರು.

 

 

ಫೆ. 13 ರಂದು ಬೆ. 3 ರಿಂದ ಪೂಜಾ ಕಾರ್ಯಗಳು ನಡೆಯಲಿವೆ.  ಬೆ. 4.15ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರನ್ನು ಗಿರೀಶ ಅವರ ಮನೆಯಿಂದ ಮಠದ ಪೀಠಾರೋಹಣ ಆವರಣಕ್ಕೆ ಕುಂಭ, ವಾದ್ಯಮೇಳದೊಂದಿಗೆ ಸ್ವಾಗತ ಮಾಡಲಾಗುವುದು.  ಬೆ. 4.48ಕ್ಕೆ ಪೀಠಾಧೀಶರ ಅಭಿಷೇಕ ನಡೆಯಲಿದೆ.  ಸುಮಾರು 10ಕ್ಕೂ ಹೆಚ್ಚು ಸ್ವಾಮೀಜಿಗಳು ಸೇರಲಿದ್ದಾರೆ.  ಬೆ. 6.18ಕ್ಕೆ ಪೂಜ್ಯರ ಸಮ್ಮುಖದಲ್ಲಿ ನೂತನ ಜಗದ್ಗುರುಗಳ ರುದ್ರಾಭಿಷೇಕ ಕಿರೀಟಧಾರಣೆ ನಡೆಯಲಿದೆ.  ಸ್ವಾಮೀಜಿಗಳ ಪಾದಕ್ಕೆ ಸಹಸ್ರ ಪತ್ರಿ ಪೂಜೆ ಸಲ್ಲಿಸಿ ನಾಮಾವಳಿ ಕಾರ್ಯಕ್ರಮ ನಡೆಯಲಿದೆ.  ಅಲ್ಲದೇ, ಬೆ. 8ಕ್ಕೆ ಕಾವೇರಿ, ತುಂಗಭದ್ರ, ಕಾಶಿ ಮಾದರಿಯಲ್ಲಿ ಆಲಗೂರು ಪಕ್ಕದಲ್ಲಿರುವ ಕೃಷ್ಣಾ ನದಿಗೆ ಆರತಿ ಹಾಗೂ ತೆಪ್ಪ ಬಿಡುವ ಕಾರ್ಯ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

ಫೆ. 13 ರಂದು ಬೆ. 10.30ರಕ್ಕೆ ಪೂಜ್ಯರ ಸಮ್ಮುಖದಲ್ಲಿ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.  ಈ ಕಾರ್ಯಕ್ರಮದಲ್ಲಿ ರಾಜ್ಯ ಎಲ್ಲ ಪೂಜ್ಯರ ಸಮ್ಮುಖದಲ್ಲಿ ರವಿಶಂಕರ ಗುರೂಜಿ, ಆರೂಢ ಭಾರತಿ ಪೂಜ್ಯರು, ಕನ್ನೇರಿ ಮಠಾಧೀಶರು ಸೇರಿದಂತೆ ನಾನಾ ಎಲ್ಲ ಸಮಾಜಗಳ 350 ರಿಂದ 370 ಮಠಾಧೀಶರು ಪಾಲ್ಗೋಳ್ಳಲಿದ್ದಾರೆ.  ನೆರೆಯ ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಶ್ರೀಗಳು ಭಾಗವಹಿಸಲಿದ್ದಾರೆ.  ಪಂಚಮಸಾಲಿ ಮಠಾಧೀಶರ ಒಕ್ಕೂಟದ ಎಲ್ಲ ಸ್ವಾಮೀಜಿಗಳು ಪಾಲ್ಗೋಳ್ಳಲಿದ್ದಾರೆ.  ಈಗಾಗಲೇ ಸಮಾಜದ ಎಲ್ಲ ಜನರನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತಾಗಲು ಬಸವ ಜೋಳಿಗೆ ಕಾರ್ಯಕ್ರಮ ಮಾಡಿ ರೂ. 10 ಮೇಲ್ಪಟ್ಟು ಹಣ ಮತ್ತು ಅವರ ಕೈಲಾದಷ್ಟು ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದೇವೆ.  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯದಲ್ಲಿ ಇದನ್ನು ಒಂದು ಮಾದರಿ ಪೀಠವನ್ನಾಗಿ ಮಾಡುತ್ತೇವೆ ಎಂದು ಮನಗೂಳಿ ಸ್ವಾಮೀಜಿ ತಿಳಿಸಿದರು.

ಕೂಡಲ ಸಂಗಮ ಸ್ವಾಮೀಜಿ, ಯತ್ನಾಳ ಆಹ್ವಾನ ವಿಚಾರ

ಫೆ. 13ರ ದಂದು ನಡೆಯಲಿರುವ ನೂತನ ಪೀಠದ ಕಾರ್ಯಕ್ರಮಕ್ಕೆ ಕೂಡಲ ಸಂಗಮ ಸ್ವಾಮೀಜಿ ಮತ್ತು ಶಾಸಕ ಬಸನಗೌಟ ಪಾಟೀಲ ಅವರಿಗೆ ಆಹ್ವಾನ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀಗಳು, ಕೂಡಲ ಸಂಗಮ ಸ್ವಾಮೀಜಿ ನಮ್ಮವರೇ ಇದ್ದಾರೆ.  ಅವರನ್ನು ಆಹ್ವಾನಿಸಲು ನಿನ್ನೆ ಸಮಾಜದವರನ್ನು ಕಳುಹಿಸಿದ್ದೇವು.  ಅವರು ಸಿಕ್ಕಿಲ್ಲ.  ಅವರನ್ನು ಮತ್ತೆ ಸಂಪರ್ಕ ಮಾಡುತ್ತೇವೆ.  ಯತ್ನಾಳ ಅವರನ್ನೂ ಆಹ್ವಾನಿಸುತ್ತೇವೆ.  ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ.  ಇದು ನಿರಾಣಿ ಅವರ ಪೀಠವಲ್ಲ.  ನಿರಾಣಿ ಅವರ ಮನೆಗೆ ಯಾವ ಸ್ವಾಮೀಜಿ ಬಂದರೂ ಎಲ್ಲರನ್ನು ಗೌರವಿಸುತ್ತಾರೆ.  ಅವರ ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಕಡಿಮೆಯಿದ್ದಾರೆ.  ಆದನ್ನು ಗಮನಿಸಬೇಕು.  ಸಂಗಮೇಶ ನಿರಾಣಿ ಸಾಮಾನ್ಯ ಭಕ್ತರಾಗಿ ಬಂದಿದ್ದಾರೆ.  ಅವರನ್ನು ಆಹ್ವಾನಿಸಿದಾಗ ಪ್ರೀತಿಯಿಂದ ಬಂದಿದ್ದಾರೆ.  ಅಲ್ಲದೇ, ಸ್ವಾಗತ ಸಮಿತಿ ಅಧ್ಯಕ್ಷತೆಯನ್ನು ವಹಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 1.18 ಕೋ. ಪಂಚಮಸಾಲಿ ಜನರಿದ್ದಾರೆ.  ಈಗ ನೂತ ಪೀಠಕ್ಕೆ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠ ಆಲಗೂರು- ಜಮಖಂಡಿ ಎಂದು ಹೆಸರಿಡಲಾಗಿದೆ.  ಬೇರೆ ಬೇರೆ ಸಮಾಜದ ಜನರು ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ.  ಬಬಲೇಶ್ವರ ಮಠಕ್ಕೆ ಎಲ್ಲ ಸಮಾಜದ ಶಿಷ್ಯಂದಿರಿದ್ದಾರೆ.  ಅದೇ ರೀತಿ ಹೊಸಪೀಠದ ಸ್ವಾಮೀಜಿಗಳು ಎಲ್ಲರೊಂದಿಗೆ ಬಾಂಧವ್ಯದಿಂದ ಇರಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ಮುಖಂಡ ಬಿ. ವೈ. ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧಾರಮಯ್ಯ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸೇರಿದಂತೆ !ಂದು ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮಹಾದೇವ ಶಿವಾಚಾರ್ಯರು, ವಕ್ತಾರ ಡಾ. ಸುರೇಶ ಬಿರಾದಾರ, ಶಂಕರಗೌಡ ಮನಗೂಳಿ, ಅಶೋಕ ಪಾಟೀಲ, ಹೊನಮಲ್ಲ ಸಾರವಾಡ, ಮುತ್ತು ಜಂಗಮಶೆಟ್ಟಿ, ಶಂಕರಗೌಡ ಪಾಟೀಲ, ಸಾಹೇಬಗೌಡ ಪಾಟೀಲ, ರವಿ ಮುಕರ್ತಿಹಾಳ, ಬುರಣಾಪುರದ ಯೋಗೇಶ್ವರಿ ಮಾತಾಜಿ ಮುಂತಾದವರು ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌