ನಾಗಠಾಣ ಮತಕ್ಷೇತ್ರಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ- ಜಲಸಂಪನ್ಮೂಲ ಸಚಿವರ ತವರು ಜಿಲ್ಲೆಯಾದರೂ ನೀರಾವರಿಯಿಲ್ಲ- ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ವಿಜಯಪುರ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದರೂ ನಾಗಠಾಣ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಪ್ಪಿಲ್ಲ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವನಂದ ಚವ್ಹಾಣ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದಲ್ಲಿ ಕೆರೆಗಳು ತುಂಬಿಲ್ಲ.  ಮತಕ್ಷೇತ್ರಕ್ಕೆ ಮಂಜೂರಾದ ಅನುದಾನ ವಾಪಸ್ಸಾಗಿದೆ.  ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.  ಸರಕಾರದ ಮಲತಾಯಿ ಧೋರಣೆಯಿಂದ ಮತಕ್ಷೇತ್ರಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಆರೋಪಿಸಿದರು.

ನಾಗಠಾಣ, ಮತಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ, ಸರಕಾರದ ನಿಯಮಾನುಸಾರ ದೊರೆಯಬೇಕಾದ ಸೌಲಭ್ಯಗಳು, ಅಭಿವೃದ್ಧಿ ಯೋಜನೆಗಳು, ಅನುದಾನ ಸೂಕ್ತವಾಗಿ ಸಿಗುತ್ತಿಲ್ಲ.  ಸಮಿಶ್ರ ಸರಕಾರದಲ್ಲಿ ಕ್ಷೇತ್ರಕ್ಕೆ ಮಂಜೂರಾದ ಅನುಷ್ಠಾನಕ್ಕೆ ಬಂದ ಯೋಜನೆಗಳಿಗೆ ಬಿಜೆಪಿ ಸರಕಾರ ಕೊಕ್ಕೆ ಹಾಕಿದೆ.  ಕ್ಷೇತ್ರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ನೀಡಲಾದ ಯೋಜನೆಗಳಿಗೆ ಫಲಾನುಭವಿಗಳ ಸಂಖ್ಯೆಯನ್ನು ಕಡಿತ ಮಾಡಲಾಗಿದೆ.  ಈ ಜನರಿಗೆ ಹೇಗೆ ನ್ಯಾಯ ಕೊಡಿಸುವುದು ಎಂೂ ಪ್ರಶ್ನೆ ನನ್ನನ್ನು ಕಾಡುತ್ತಿದೆ.  ನನ್ನ ಅತಸಾಕ್ಷಿಗೂ ನೋವಾಗುತ್ತದೆ.  ಮತ ಹಾಕಿದ ಜನರ ಋಣ ತೀರಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಶಾಸಕರು ತಿಳಿಸಿದರು.

ರೇವಣಸಿದ್ದೇಶ್ವರ ಯೋಜನೆಗೂ ಗ್ರಹಣ

ಇಂಡಿ ಮತ್ತು ಚಡಚಣ ತಾಲೂಕುಗಳ ಮಹತ್ವಾಕಾಂಕ್ಷಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರಕಾರ ನಿರ್ಲಕ್ಷ್ಯ ವಹಿಸಿದೆ.  ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಜಯಪುರ ಜಿಲ್ಲೆಯವರಾದರೂ ಈವರೆಗೆ ಕಾಮಗಾರಿಗೆ ಚಾಲನೆ ನೀಡಿಲ್ಲ.  ಸಮ್ಮಿಶ್ರ ಸರಕಾರ ನೀರಾವರಿ 2019-20ರ ಬಜೆಟ್ ನಲ್ಲಿ ರೂ. 250 ಕೋ. ಘೋಷಿಸಿತ್ತು.  ತಿಡಗುಂದಿ ಶಾಖಾ ಕಾಲುವೆ ವಿಸ್ತರಣೆ ಮೂಲಕ ಇಂಡಿ ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಪ್ರತ್ಯೇಕವಾಗಿ 3,245 ಟಿಎಂಸಿ ನೀರು ಲಿಫ್ಟ್ ಮಾಡಿ ಇಂಡಿ ತಾಲೂಕಿನ ಸುಮಾರು 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಯೋಜನೆಗೆ ಅನುದಾನ ಘೋಷಿಸಿತ್ತು.  ಆದರೆ, ಆ ಕಾರ್ಯ ಇನ್ನೂ ಜಾರಿಯಾಗಿಲ್ಲ ಎಂದು ಅವರು ಆರೋಪಿಸಿದರು.

ಅನುದಾನ ಕಡಿತದಿಂದ ಪ್ರಗತಿಗೆ ಅಡ್ಡಿ

ನಾಗಠಾಣ ವಿಧಾನಸಭೆ ಕ್ಷೇತ್ರಕ್ಕೆ ಹಂಚಿಕೆಯಾದ ಅನುದಾನ ಕಡಿತಗೊಂಡಿದೆ,  ಕೆಲವೊಂದು ಅನುದಾನವನ್ನು ಸರಕಾರ ವಾಪಸ್ ಪಡೆದಿದೆ.  ಕ್ಷೇತ್ರದ ಪ್ರಗತಿಗೆ ದೊಡ್ಡ ಹೊಡೆತ ನೀಡಿದೆ ಎಂದು ಆರೋಪಿಸಿದ ಅವರು, ಈ ಕುರಿತು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದರು.

ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಇದೇ ವೇಳೆ ವಿಜಯಪುರ ಮಹಾನಗರ ಪಾಲಿಕೆ, ವಿಡಿಎ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವಿರುದ್ಧ ಹರಿಹಾಯ್ದ ಶಾಸಕ ಡಾ. ದೇವಾನಂದ ಚವ್ಹಾಣ, ಇಲ್ಲಿಯೂ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ಭೀಮಾ ಉತ್ಸವ ಆಚರಣೆಗೆ ಆಗ್ರಹ

ಭೀಮಾತೀರ ಹಂತಕರ ಪಟ್ಟ ಕಟ್ಟಿಕೊಂಡಿದೆ. ಆದರೆ, ಅನೇಕ ಚಿಂತಕರು ಅಲ್ಲಿದ್ದಾರೆಂಬುದನ್ನು ಸರಕಾರ ಮರೆತಿದೆ.  ಈ ಹಿನ್ನೆಲೆಯಲ್ಲಿ ಸರಕಾರ ಪ್ರತಿವರ್ಷ ಭೀಮಾ ತೀರದ ಉತ್ಸವ ಆಚರಣೆಗೆ ಮುಂದಾಗಬೇಕು.  ಭೀಮಾ ತೀರ ಪ್ರತಿಭಾನ್ವಿತರ ತವರೂರು, ಡಾ. ಸಿಂಪಿ ಲಿಂಗಣ್ಣ, ಗುರುಲಿಂಗ ಕಾಪಸೆ ಮುಂತಾದ ಶ್ರೇಷ್ಟ ಸಾಹಿತಿಗಳನ್ನು ಒಳಗೊಂಡ ಹಲಸಂಗಿ ಗೆಳೆಯರ ಬಳಗ ಭೀಮಾ ತೀರದ ವೈಶಿಷ್ಠ್ಯತೆಯನ್ನು ಎತ್ತಿ ಹಿಡಿದಿದ್ದಾರೆ.  ಜಾನಪದ ಸಾಹಿತ್ಯ, ಬೀಸುಕಲ್ಲಿನ ಹಾಡುಗಳು, ಲಾವಣಿ ಪದಗಳು, ಗೀಗಿ ಪದಗಳು, ಹಂತಿ ಪದಗಳು ಹೀಗೆ ಅನೇಕ ಸಾಹಿತ್ಯ ಪ್ರಕಾರಗಳನ್ನು ನಾಡಿಗೆ ಕೊಡುಗೆ ನೀಡಿದವರು ಭೀಮಾ ತೀರದ ಚಿಂತಕರು, ಈ ಭಾಗ ಅಪರಾಧ ಕೃತ್ಯಗಳಿಂದ ಅಪಖ್ಯಾತಿಗೆ ಒಳಗಾಗಿದೆ. ಇದು ಈ ಭಾಗದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.  ಭೀಮಾ ತೀರದ ಹಂತಕರು ಎಂಬ ಪಟ್ಟಿ ಆಳಿಸಿ ಭೀಮಾ ತೀರದ ಚಿಂತಕರು ಎಂಬ ಖ್ಯಾತಿ ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಪ್ರತೀ ವರ್ಷ ಭೀಮಾ ತೀರದ ಜಾನಪದ ಉತ್ಸವ ಆಚರಣೆಗೆ ಬಜೆಟ್‍ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು.  ನವರಸಪುರ ಉತ್ಸವ, ಚಾಲುಕ್ಯ ಉತ್ಸವ, ಧಾರವಾಡ ಉತ್ಸವ ಹೀಗೆ ಅನೇಕ ಉತ್ಸವಗಳ ರೀತಿಯಲ್ಲಿ ಭೀಮಾತೀರದ ಜಾನಪದ ಉತ್ಸವ ಆಚರಣೆಯಾಗಬೇಕು ಎಂದು ಶಾಸಕ ಡಾ. ದೇವಾನಂದ ಚವ್ಹಾಣ ತಿಳಿಸಿದರು.

Leave a Reply

ಹೊಸ ಪೋಸ್ಟ್‌