ವಿಜಯಪುರ: ಸಿಎಂ ಬದಲಾವಣೆ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಬೇಡ ಎಂಬುದು ನನ್ನ ವೈಯಕ್ತಿಕ ಮತ್ತು ಸ್ಪಷ್ಟವಾದ ನಿಲುವಾಗಿದೆ. ಇದನ್ನೇ ಎಲ್ಲರಿಗೂ ಹೇಳಿದ್ದೇನೆ. ಈ ವಿಚಾರದಲ್ಲಿ ಕೆಲವರು ಉಹಾಪೋಹ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರಯ ಬಾಯಿಗೆ ಬಂದಂತೆ ಏನು ಬೇಕಾದರೂ ಮಾತನಾಡುತ್ತಾರೆ. ಅದನ್ನು ಬಂದ್ ಮಾಡಿಸಿ ಎಂದು ಹೇಳಿದ್ದೇನೆ. ಹಾದಿ ಬೀದಿಯಲ್ಲಿ ಹೋಗುವಾಗ ಮಾತನಾಡಿರೆ ಪಕ್ಷಕ್ಕೆ ಡ್ಯಾಮೇಜ್ ಅಗುತ್ತದೆ. ಅದನ್ನು ತಡೆಯಿರಿ ಎಂದು ಬಿಜೆಪಿ ಹೈಕಮಾಂಡಿನವರಿಗೆ ತಿಳಿಸಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸುತ್ತೇನೆ. ಆದರೆ, ಇಂಥವರಿಗೆ ನೀಡಿ ಎಂದು ನಿರ್ಧಿಷ್ಟವಾಗಿ ಹೇಳುವಯದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು.
ರೇಲ್ವೆ ಮೇಲ್ಸೇತುವೆ ವಿಚಾರ
ಬಹುದಿನಗಳಿಂದ ಕುಂಟುತ್ತ ಸಾಗಿರುವ ವಿಜಯಪುರ ನಗರದ ಇಬ್ರಾಹಿಂಪೂರ ರೇಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಆದಷ್ಟು ಬೇಗನೆ ಎರಡೂವರೆ ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಖಡಕ್ಕಾಗಿ ಸೂಚನೆ ನೀಡಿದ್ದೇನೆ. ಈ ಭಾಗದ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ, ರಾಜ್ಯ ಸರಜಾರದಿಙದ ಸಾಕಷ್ಟು ಅನುದಾನ ಸಿಕ್ಕಿದೆ
ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿ ಸಾಕಷ್ಟು ಅನುದಾನ ನೀಡಿವೆ. ವಿಜಯಪುರ ಲೋಕಸಭೆ ಸದಸ್ಯನಾಗಿ 13 ವರ್ಷಗಳಾಗುತ್ತಿವೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಸಙಸದರ ನಿಧಿಯನ್ನು ಹೆಚ್ಚು ಖರ್ಚು ಮಾಡಲು ಸಾಧ್ಯವಾಗಿಲ್ಲ. ಅಭಿವೃದ್ಧಿಯೂ ಕುಂಟಿತವಾಗಿದೆ. ಕೊರೊನಾ ಇದಕ್ಕೆಲ್ಲ ಕಾರಣ. ಈ ಹಿನ್ನೆಲೆಯಲ್ಲಿ ಸ್ವಲ್ಪ ಹಿನ್ನೆಡೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅಭಿವೃದ್ಧಿಯ ಕಡೆ ನಮ್ಮ ದೃಷ್ಠಿಯಿದೆ. ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡಿದೆ. ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಕೂಡ ನೆರವು ನೀಡುತ್ತಿದ್ದಾರೆ. ನನ್ನ ಮನಸ್ಸಿಗೆ ತೃಪ್ತಿಯಾಗುವಷ್ಟು ಹೆಚ್ಚುವರಿಯಾಗಿ ರೂ. 70 ಕೋ. ಅನುದಾವನ್ನು ಕೇಂದ್ರದಿಂದ ತಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನೆರವಿನಿಂದ ಪ್ರಮುಖ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಜಯಪುರ- ಸೋಲಾಪುರ, ವಿಜಯಪುರ-ಹುಬ್ಬಳ್ಳಿ, ವಿಜಯಪುರ- ಹುಮನಾಬಾದ ಮೂರು ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಂಡಿವೆ. ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಟೆಂಡರ್ ಹಂತದಲ್ಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಸಚಿವ ಸುಶೀಲಕುನಾರ ಶಿಂಧೆ ಅವರ ಮನವೊಲಿಸಿ ಕೂಡಗಿಯಲ್ಲಿ ರೂ. 42000 ಕೋ. ವೆಚ್ಚದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಫಿಸುವ ಕೆಲಸ ಮಾಡಿದ್ದೇನೆ. ಸಂಸದನಾಗಿ ನನ್ನ ಕೆಲಸ ತೃಪ್ತಿ ತಂದಿದೆ ಎಂದು ಸಂಸದರು ತಿಳಿಸಿದರು.
ವಿಮಾನ ನಿಲ್ದಾಣ ಕಾಮಗಾರಿ ವಿಚಾರ
ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಆಗಿದೆ. ನಾನು ಪ್ರಯತ್ನ ಮಾಡಿದ್ದರಿಂದಲೇ 10 ವರ್ಷಗಳಿಂದ ಈ ವಿಮಾನ ನಿಲ್ದಾಣ ಕಾಮಗಾರಿ ಈಗ ಆರಂಭವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ. ಇಲ್ಲದಿದ್ದರೆ ಇದು ಬೇರೆ ಕಡೆ ಸ್ಥಳಾಂತರವಾಗುತ್ತಿತ್ತು. ಈ ಕಾಮಗಾರಿ ಬೇಗ ಪೂರ್ಣವಾಗಲಿದೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.
10 ವರ್ಷಗಳ ಹಿಂದೆ ಇವುಗಳ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ ನಾನು ವಿಜಯಪುರಕ್ಕೆ ಸಂಸದನಾಗಿ ಬಂದ ಮೇಲೆ ಇಷ್ಟೆಲ್ಲ ಕೆಲಸ ಮಾಡಿದ್ದೇನೆ ಎಂದು ಯತ್ನಾಳ ಹೆಸರು ಹೇಳದೇ ರಮೇಶ ಜಿಗಜಿಣಗಿ ಮಾತಿನಲ್ಲಿಯೇ ಚಾಟಿ ಬೀಸಿದರು.
ಜಲನಗರ ಸಂತೋಷಿ ಮಾತಾ ದೇವಸ್ಥಾನದ ಮಾರ್ಗದಲ್ಲಿ ರೇಲ್ವೆ ಅಂಡರ ಬ್ರಿಡ್ಜ್
ವಿಜಯಪುರ ನಗರದ ಜಲನಗರದಲ್ಲಿರುವ ಸಂತೋಷಿ ಮಾತಾ ದೇವಸ್ಥಾನದ ರಸ್ತೆಯಲ್ಲಿ ಬರುವ ರೇಲ್ವೆ ಹಳಿಯ ಕೆಳಗಡೆ ರೇಲ್ವೆ ಕೆಳಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸದರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಚಿಕ್ಕೋಡಿಗೆ ತೆರಳಿದ್ದನ್ನು ಆಮೇಲೆ ಹೇಳುತ್ತೇನೆ
ವಿಜಯಪುರ ಜಿಲ್ಲೆಯವರಾದ ತಾವು ರಾಜಕೀಯವಾಗಿ ಚಿಕ್ಕೋಡಿಗೆ ಹೋಗಿ ಸಂಸದನಾಗಬೇಕಾಯಿತು. ಇದಕ್ಕೆ ಏನು ಕಾರಣ ಎಂಬುದನ್ನು ಮುಂಬರುವ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ. ನಾನು ಚಿಕ್ಕೋಡಿಯಲ್ಲಿದ್ಸಾಗ ಇಲ್ಲಿ ವಿಜಯಪುರ ನಗರದ ಹೊರ ವಲಯದಲ್ಲಿ ಆಲಮಟ್ಟಿ ರಸ್ತೆಯಲ್ಲಿ ಟೋಲ್ ನಾಕಾ ಮಂಜೂರಾಯಿತು. ಇಂಥ ಟೋಲ್ ಗೇಟ್ ಗಳು ನಗರ ಪ್ರದೇಶದಿಂದ 10 ಕಿ. ಮೀ. ದೂರದಲ್ಲಿರಬೇಕು ಎಂಬ ನಿಯಮಗಳಿವೆ. ಇಲ್ಲಿ ಯಾಕೆ ಆ ನಿಯಮ ಪಾಲನೆಯಾಗಿಲ್ಲ ಎಂಬುಸನ್ಮು 10 ವರ್ಷ ಹಿಂದೆ ನಿರ್ಣಯ ಕೈಗೊಂಡವರನ್ನು ಕೇಳಬೇಕು. ಆದರೂ ಕೂಡ ನಾನು ಈ ಟೋಲ್ ಗೇಟ್ ನ್ನು ವಿಜಯಪುರ ನಗರದಿಂದ 10 ಕಿ. ಮೀ. ದೂರ ಸ್ಥಳಾಂತರಿಸಲು ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ತಿಳಿಸಿದರು.
ನದಿ ಜೋಡಣೆ, ವಿಜಯಪುರ ಸ್ಮಾರ್ಟ್ ಸಿಟಿ ವಿಚಾರ
ನದಿ ಜೋಡಣೆಯಿಂದ ಕರ್ನಾಟಕಕ್ಕೂ ಉಪಯೋಗ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ ಎಂದು ತಿಳಿಸಿದ ಅವರ, ವಿಜಯಪುರ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ಕುರಿತು ಈಗಾಗಲೇ ತಾವು ಕೇಂದ್ರ ಸಚಿವರು ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.
ಹಿಜಾಬ್, ಕೇಸರಿ ಶಾಲ್ ವಿಚಾರ
ಹಿಜಾಬ್ ಮತ್ತು ಕೇಸರಿ ಶಾಲು ವಿಚಾರವಾಗಿ ಈಗಾಗಲೇ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ. ಈ ವಿಚಾರದಲ್ಲಿ ಯಾರೂ ಉದ್ದೇಶಪೂರ್ಕವಾಗಿ ವರ್ತಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರ ತಂದೆಯವರನ್ನು ನೋಡಿದ್ದೇನೆ. ಅವರನ್ನೂ ನೋಡಿದ್ದೇನೆ. ಸಿಎಂ ಯಾವುದೇ ರೀತಿಯ ಕೋಮುಭಾವನೆ ಹೊಂದಿಲ್ಲ. ರಾಜ್ಯದ ಅಭಿವೃದ್ಧಿ ಪರ ಸದಾ ತುಡಿಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿಯೇ ರಾಜ್ಯಾದ್ಯಂತ 8000 ಕಿ. ಮೀ. ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಗೂ ಕೊಡುಗೆ ನೀಡಿದ್ದಾರೆ ಎಂದು ವಿಜಯಪುಎ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪು ಪಟಣಶೆಟ್ಟಿ ಉಪಸ್ಥಿತರಿದ್ದರು.