ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯ ನಿರ್ವಾಹಣಾಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ತಿಡಗುಂದಿ ಮತ್ತು ಇಂಡಿ ತಾಲೂಕಿನ ಹೊರ್ತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡಗಳನ್ನು ಗ್ರಾಮ ಪಂಚಾಯಿತಿಗಳು ಬಾಪೂಜಿ ಸೇವಾ ಕೇಂದ್ರದ ಮೂಲಕ ಮರುಚಾಲನೆ ನೀಡುವ ಮೂಲಕ ವಿತರಿಸಲು ಸೂಚಿಸಿದರು.
ಈ ಕೆಲಸವನ್ನು ಅಭಿಯಾನದ ರೀತಿ ಕೈಗೊಳ್ಳುವಂತೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತರು ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಕಾರ್ಡ ಬಗ್ಗೆ ಅರಿವು ಮೂಡಿಸಲು ಸೂಚನೆ ನೀಡಿದರು.
ಪ್ರತಿ ಪಂಚಾಯಿತಿಯಲ್ಲಿ ದಿನಕ್ಕೆ ಕನಿಷ್ಟ 200 ಕಾರ್ಡಗಳನ್ನು ವಿತರಿಸಬೇಕು ಎಂದು ಪಿಡಿಓಗಳಿಗೆ ಸೂಚನೆ ನೀಡಿದರು. ಆಧಾರ ಕಾರ್ಡ ಮತ್ತು ಪಡಿತರ ಚೀಟಿ ಕಡ್ಡಾಯವಾಗಿದ್ದು, ಬಡಕುಟುಂಬಗಳಿಗೆ ರೂ. 5 ಲಕ್ಷದವರೆಗೂ ವೆಚ್ಚ ಭರಿಸಲು ಅವಕಾಶವಿದೆ. ಅಧಿಕಾರಿಗಳು ಈ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿಗಳಾದ ರಿಷಿ ಆನಂದ ಮತ್ತು ವಿಜಯಪುರ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ ಜಿಲಾನಿ, ಇಂಡಿ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಸುನಿಲ ಮದ್ದಿನ ಮುಂತಾದವರು ಉಪಸ್ಥಿತರಿದ್ದರು.