ವಿಜಯಪುರ: ನಸುಕಿನ ಜಾವ ಆಗಸದಲ್ಲಿ ಕಾಣಿಸಿದ ಬೆಂಕಿಯುಗುಳುತ್ತಿರುವ ವಸ್ತುವೊಂದು ಆತಂಕ ಮೂಡಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಿನ ಜಾವ ಯುವಕರಿಬ್ಬರು ತಮ್ಮ ಬೈಕಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬಾನಂಗಳದಲ್ಲಿ ಬೆಂಕಿಯುಗುಳುತ್ತ ವಿಚಿತ್ರ ವಸ್ತುವೊಂದು ಮುಂದೆ ಸಾಗಿದೆ. ಈ ದೃಷ್ಯವನ್ನು ಮೊದಲು ನೋಡಿದ ಯುವಕ ಅವಾಕ್ಕಾಗಿದ್ದಾನೆ. ಅರೇ, ಇದೇನಿದು ಆಕಾಶದಲ್ಲಿ ಏನೋ ಸಂಚಿಸುತ್ತಿದೆಯಲ್ಲ ಎಂದು ಗಾಬರಿ ಕೂಡ ಆಗಿದ್ದಾನೆ. ಈ ವಿಷಯವನ್ನು ತನ್ನ ಜೊತೆಗಾರನಿಗೂ ತಿಳಿಸಿದ್ದಾನೆ. ಆಗ ಆತನ ಸ್ನೇಹಿತನೂ ಕೂಡ ಅಚ್ಚರಿಗೊಂಡಿದ್ದಾನೆ. ಅಲ್ಲದೇ, ಇದೇನಿದು ನಮ್ಮೂರಲ್ಲಿ ಮುಗಿಲಿನಲ್ಲಿ ವಿಚಿತ್ರ ವಸ್ತುವೊಂದು ಸಂಚರಿಸುತ್ತಿದೆಯಲ್ಲ ಎಂದು ಆತ ಕೂಡ ಗಾಬರಿಯಾಗಿದ್ದಾನೆ.
ನಂತರ ಯಾವುದಕ್ಕೂ ಇರಲಿ ಎಂದು ಅವರಲ್ಲೊಬ್ಬ ತನ್ನ ಕಿಸೆಯಲ್ಲಿದ್ದ ಮೊಬೈಲ್ ತೆಗೆದಿದ್ದಾನೆ. ಆ ಮೊಬೈಲಿನಲ್ಲಿ ಆಗಸದಲ್ಲಿ ಮುನ್ನುಗ್ಗುತ್ತಿದ್ದ ವಿಚಿತ್ರ ವಸ್ತುವನ್ನು ಸೆರೆ ಹಿಡಿದಿದ್ದಾನೆ. ಈ ವಸ್ತು ಹಿಂದೆ ಬೆಂಕಿಯುಗುಳುತ್ತ ಮುಂದೆ ಸಾಗಿದೆ. ಈ ಯುವಕರಿಬ್ಬರೂ ಸಾಧ್ವವಾದಷ್ಟು ಮಟ್ಟಿಗೆ ತಮ್ಮ ಮೊಬೈಲ್ ಕ್ಯಾಮೆರಾ ಜೂಮ್ ಮಾಡಿ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಆಗಸದಲ್ಲಿ ವಿಚಿತ್ರ ವಸ್ತು ವೇಗವಾಗಿ ಸಂಚರಿಸುತ್ತಿದ್ದರೆ ಭೂಮಿಯ ಮೇಲೆ ಈ ಯುವಕರಿಬ್ಬರೂ ತಮ್ಮ ಬೈಕಿನಲ್ಲಿ ರಸ್ತೆಯ ಮೇಲೆ ತಾವೂ ವೇಗವಾಗಿ ಬೈಕ್ ಓಡಿಸಿ ಸಾಧ್ಯವಾದಷ್ಟು ವಿಡಿಯೋ ಸೆರೆ ಹಿಡಿದಿದ್ದಾರೆ.
ಆಕಾಶದಲ್ಲಿ ನಿಗೂಡ ವಸ್ತು ಬೆಳಕಿನ ಚಲನೆಯೊಂದಿಗೆ ಹೋಗಿರುವುದು ಮತ್ತು ಅದೂ ಕೂಡ ಭೂಮಿಯ ಸಮೀಪದಲ್ಲಿಯೇ ಸಂಚರಿಸಿರುವುದು ಅಚ್ಚರಿ ಮೂಡಿಸಿದೆ. ಭೂಮಿಯ ಸಮೀಪದಲ್ಲೇ ಚಲಿಸಿದ ಈ ಬೆಳಕು ಕೆಲ ನಿಮಿಷಗಳ ನಂತರ ಮಾಯವಾಗಿದೆ. ಆಗಸದಲ್ಲಿ ಚಿಮ್ಮುವ ಕ್ಷಿಪಣಿಯ ಮಾದರಿಯಲ್ಲಿ ಈ ಬೆಳಕು ಕಂಡು ಬಂದಿದೆ. ಸಿಡಿತಲೆಗಳ ಮಾದರಿ ಹೋಲುವಂತಿದ್ದ ಬೆಳಕು ಈಗ ಚರ್ಚೆಗೆ ಕಾರಣವಾಗಿದೆ. ಬೆಳಗಿನ ಜಾವ ಆರು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಇದು ಏಲಿಯನ್ ಇರಬಹುದಾ? ಅಲ್ಲ, ಅನ್ಯ ಗೃಹದ ತುಣುಕು ಇರಬಹುದು ಎಂಬ ಚರ್ಚೆಯೂ ನಡೆದಿದೆ. ನಸುಕಿನ ಜಾವದ ಮಸುಮಬ್ಬಲ್ಲಿ ಚಲಿಸಿದ ಬೆಳಕು ಈ ಬೆಳಕಿನ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ನಸುಕಿನ ಜಾವ ಮಬ್ಬು ಕತ್ತಲಿನಲ್ಲಿ ವಿಜಯಪುರ ಜಿಲ್ಲೆಯ ಮೊಸರಿನ ನಾಡು ಮತ್ತು ಕೃಷ್ಣಾ ನದಿ ತೀರದ ಕೊಲ್ಹಾರದಲ್ಲಿ ಈ ದೃಶ್ಯ ಕಂಡು ಬಂದಿದೆ.
ಈ ಘಟನೆಯಿಂದಾಗಿ ಜನರಲ್ಲಿ ಅಚ್ಚರಿ ಮಾತ್ರವಲ್ಲ ಸ್ವಲ್ಪ ಮಟ್ಟಿಗೆ ಆತಂಕವೂ ಉಂಟಾಗಿದ್ದು, ಬಸವ ನಾಡಿನ ಬಾನಂಗಳದಲ್ಲಿ ನಸುಕಿನ ಮಬ್ಬು ಕತ್ತಲಿನಲ್ಲಿ ಬೆಂಕಿಯುಗುಳುತ್ತ ಸಾಗಿದ ಈ ವಸ್ತು ಯಾವುದು? ಇದು ಸಿಡಿತಲೆ ಇರಬಹುದಾ? ಹಾರುವ ತಟ್ಟೆ ಇರಬಹುದಾ? ಯಾವುದಾದರೂಂದು ಅತ್ಯಾಧುನಿಕ ವಾಯುಪಡೆಯ ವಿಮಾನ ಇರಬಹುದಾ? ಅಥವಾ ಯಾವುದಾದರೂ ಉಪಗ್ಹಹದಿಂದ ಬೇರ್ಪಟ್ಟ ಯಂತ್ರ ಇರಬಹುದಾ। ಇಲ್ಲವೇ, ಖಭೌತ ಶಾಸ್ತ್ರಜ್ಞರು ಪ್ರಯೋಗಕ್ಕೆ ಬಿಟ್ಟಿರುವ ಯಾವುದಾದರೂ ವಸ್ತು ಇರಬಹುದು ಎಂಬುದನ್ನು ತಜ್ಞರು ಇದನ್ನು ದೃಢಪಡಿಸಬೇಕಾಗಿದೆ.