ಅರುಣಾಶ್ವಿನಿ ಜೋಡಿಗೀಗ 28ನೇ ವ್ಯಾಲೆಂಟೈನ್ ಸಂಭ್ರಮ- ಬಸವತತ್ವ ಪಾಲನೆ ಇವರ ಯಶೋಗಾಥೆಗೆ ಕಾರಣ

ಮಹೇಶ ವಿ. ಶಟಗಾರ

ವಿಜಯಪುರ: ವ್ಯಾಲೆಂಟೈನ್ ಡೆ ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳಲ್ಲಿ ಪ್ರತಿ ವರ್ಷ ಹೊಸ ಹೊಸ ಜೋಡಿಗಳು ಪ್ರಣಯದ ಹಕ್ಕಿಗಳಾದರೆ, ಈಗಾಗಲೇ ಪ್ರೇಮ ವಿವಾಹವಾದ ದಂಪತಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸುತ್ತಾರೆ.

ವ್ಯಾಲೆಂಟೈನ್ ಜೋಡಿಗಳಲ್ಲಿ ಹಲವಾರು ಜೋಡಿಗಳು ಜೀವನಪೂರ್ತಿ ಜೊತೆಯಾಗಿರದೇ ಬೇರ್ಪಟ್ಟಿರುವ ಉದಾಹರಣೆಗಳೂ ಹಲವಾರು. ಆದರೆ, ಅನೇಕ ಜೋಡಿಗಳು ಪ್ರಥಮ ವ್ಯಾಲೆಂಟೈನ್ ದಿನದಿಂದ ಹಿಡಿದು ಇಂದಿನವರೆಗೂ ಯಶಸ್ವಿ ಸಂಸಾರ ನಡೆಸುತ್ತಿದ್ದಾರೆ. ಮೊದಲ ಆಚರಣೆ ದಿನಗಿಂತಲೀ ಈಗ ಇನ್ನೂ ಹೆಚ್ಚೆಚ್ಚು ತಮ್ಮ ಬಾಂಧವ್ಯ ಗಟ್ಟಿಗೊಳಿಸಿಕೊಂಡಿದ್ದಾರೆ. ತಾವು ಯಶಸ್ವಿ ಜೋಡಿಯಷ್ಟೇ ಅಲ್ಲ, ತಂತಮ್ಮ ಜನ್ಮದಾತರೂ ಹೆಮ್ನೆ ಪಡುವಂತೆ ಸಂಸಾರದ ನೊಗಹೊತ್ತು ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ. ಇದ್ದರೆ ಇರಬೇಕು ಇವರಂಥ ಜೋಡಿ ಎಂದು ಇತರರಿಗೆ ಅಂದರೆ ಸಣ್ಣಪುಟ್ಟ ವಿಷಯಗಳಿಗೂ ಮುನಿಸಿಕೊಂಡು ದೂರಾಗಿರುವ ಜೋಡಿಗಳಿಗೆ ಪ್ರೇಮಿಗಳ ಜೀವನ ಹೇಗಿರಬೇಕು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ವಿಜಯಪುರ ನಗರದ ಈ ವ್ಯಾಲೆಂಟೈನ್ ಜೋಡಿಯ ಹೆಸರು ಅರುಣ ಮತ್ತು ಅಶ್ವಿನಿ. ಇಬ್ಬರೂ ‌ಸುಸಂಕೃತ ಕುಟುಂಬದಿಂದ ಬಂದಿದ್ದು, ಇವರ ಜೋಡಿ ಬಸವತತ್ವಗಳಿಗೆ ಅನುಗುಣವಾಗಿಯೇ ಇದೇ ಎನ್ನಬಹುದು. ಜಾತಿ ವ್ಯವಸ್ಥೆ ತೊಲಗಿಸಲು ಅಣ್ಣ ಬಸವಣ್ಣನವರು ಹೋರಾಡಿದ್ದಾರೆ. ಈ ಜೋಡಿ ಕೂಡ ಬೇರೆ ಬೇರೆ ಉಪಜಾತಿಗಳಿಗೆ ಸೇರಿದ್ದರೂ ಆ ಭಾವನೆಯನ್ನು ತೊಡೆದು ಹಾಕಿದೆ. ಇವರಿಬ್ಬರ ಪೋಷಕರೂ ಕೂಡ ಮಕ್ಕಳ ಪ್ರೀತಿ, ಅವರ ಮನದಾಸೆಗೆ ಬೆನ್ನೆಲುಬಾಗಿ ನಿಂತು ಮದುವೆ ಮಾಡಿಸಿದ್ದು ಇವರ ಅವಿಸ್ಮರಣೀಯ ಕ್ಷಣಗಳಲ್ಲೊಂದು.

ಅರುಣ ಮಾಚಪ್ಪನವರ ಮತ್ತು ಅಶ್ವಿನಿ ಮಾಚಪ್ಪನವರ. ಇವರ ಸುಖಿ ಸಂಸಾರಕ್ಕೆ ಸಾಕ್ಷಿ ಇಬ್ಬರು ಮುದ್ದಾದ ಪುತ್ರಿಯರು. ಅರುಣ ಮಾಚಪ್ಪನವರ ವಿಜಯಪುರದ ಖ್ಯಾತ ಉದ್ಯಮಿಯಾಗಿದ್ದಾರೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರೇಣುಕಾ ಟ್ರ್ಯಾಕ್ಟರ್ಸ್ ಹಾಗೂ ಬಾಗಲಕೋಟೆಯಲ್ಲಿ ಸಾನ್ವಿ ಹೊಂಡಾ ಬೈಕ್ ಶೋರೂಂ ಸಹಮಾಲಿಕರಾಗಿದ್ದಾರೆ.

ಅರುಣ ಮಾಚಪ್ಪನವರ ಮತ್ತು ಅಶ್ವಿನಿ ಶಿರಗುಪ್ಪಿ ಹೈಸ್ಕೂಲಿನಿಂದಲೂ ಪರಿಚಿತರು. ಅರುಣ ಮಾಚಪ್ಪನವರ 1993-94ರಲ್ಲಿ ದ್ವಿತೀಯ ಪಿಯುಸಿಯಲ್ಲಿದ್ದಾಗ ಅದೇ ಕಾಲೇಜಿಗೆ ಪ್ರಥಮ ಪಿಯುಸಿ ಪ್ರವೇಶ ಪಡೆದ ಆಶ್ವಿನಿ ಶಿರಗುಪ್ಪಿ ಮಧ್ಯೆ ಪ್ರೇಮಾರಂಭವಾಯಿತು. ಎಂಟು ವರ್ಷಗಳ ನಂತರ 2001ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವಾಯಿತು. ಅರುಣ ಮಾಚಪ್ಪನವರ ತಂದೆ ಎಚ್. ಆರ್. ಮಾಚಪ್ಪನವರ ಜಿಲ್ಲಾ ಕೈಗಾರಿಕೆ ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಾಯಿ ತುಂಗಾ ಗೃಹಿಣಿಯಾಗಿದ್ದಾರೆ. ಅಶ್ವಿನಿ ಅವರ ತಂದೆ ಡಾ. ಶಿವಸಂಗಪ್ಪ ಶಿರಗುಪ್ಪಿ, ತಾಯಿ ಡಾ. ಜ್ಯೋತಿ ಶಿರಗುಪ್ಪಿ ಇಬ್ಬರೂ ವೈದ್ಯರು. ಅರುಣ ಮತ್ತು ಅಶ್ವಿನಿ ಅವರ ಪೋಷಕರಿಬ್ಬರೂ ಬಸವತತ್ವ ಅನುಯಾಯಿಗಳು. ಹೀಗಾಗಿ ಮಕ್ಕಳ ಪ್ರೀತಿಯಲ್ಲಿ ತಮ್ಮ ಸರ್ವಸ್ವವನ್ನು ಕಂಡು ಅವರ ಪ್ರೀತಿಗೆ ನೀರೆರೆದು, ಬೆನ್ನೆಲುಬಾಗಿ ನಿಂತ ಪರಿಣಾಮ ಈಗ ಮಾಚಪ್ಪನವರ ಕುಟುಂಬ ವೃದ್ದಾಪ್ಯದಲ್ಲಿ ಸಂತಸಮಯ ಕ್ಷಣಗಳನ್ನು ಕಳೆಯಲು ಅರುಣಾಶ್ವಿನಿ ದಂಪತಿ ಕಾರಣರಾಗಿದ್ದಾರೆ. ಇವರ ಪ್ರೀತಿಯ ಕುರುಹಾದ ಹಿರಿಯ ಮಗಳು ಸಂಜನಾ ಆರ್ಕಿಟಕ್ಕ್ ಎಂಜಿನಿಯರಿಂಗ್ ಓದುತ್ತಿದ್ದರೆ, ಕಿರಿಯ ಮಗಳು ಸಹನಾ 10ನೇ ತರಗತಿ ಕಲಿಯುತ್ತಿದ್ದಾಳೆ.

@

ಪ್ರೇಮ ವಿವಾಹ ದೊಡ್ಡದಲ್ಲ. ಆದರೆ, ಪ್ರೀತಿಸಿ ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಅತ್ತೆ- ಮಾವಂದಿರನ್ನು ತನ್ನ ಸ್ವಂತ ಅಪ್ಪ-ಅಮ್ಮರಂತೆ ನೋಡಿಕೊಂಡು ಸಂಸಾರ ನಿಭಾಯಿಸುವ ಹೃದಯವೈಶಾಲ್ಯತೆ ತಮ್ಮ ಬಾಳಿಗೆ ಒಲಿದು ಬಂದಿರುವ ಸೌಭಾಗ್ಯ. ತಮ್ಮ ಪ್ರತಿಯೊಂದು ಯಶಸ್ವಿ ಹೆಜ್ಜೆಯ ಹಿಂದೆ ಪೋಷಕರ ಜೊತೆ ಪತ್ನಿ ಅಶ್ವಿನಿಯ ಕೊಡುಗೆ ಅಪಾರ ಎನ್ನುತ್ತಾರೆ ವಿಜಯಪುರ ಮತ್ತು ಬಾಗಲಕೊಟೆ ಜಿಲ್ಲೆಗಳಲ್ಲಿ ವ್ಯವಹಾರ ಹೊಂದಿರುವ ಉದ್ಯಮಿ ಅರುಣ ಮಾಚಪ್ಪನವರ.

ತಮ್ಮ ಅತ್ತೆ- ಮಾವ ತನ್ನನ್ನು ಮನೆಯ ಮಗಳಿಗಿಂತಲೂ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಸದವಂತ ತಂದೆ-ತಾಯಿಯ ಪ್ರೀತಿ ನೀಡುತ್ತಿರುವಯದು ತಮಗೊಲಿದು ಬಂದಿರುವ ಅದೃಷ್ಟ ಎನ್ನುತ್ತಾರೆ ಅಶ್ವಿನಿ ಮಾಚಪ್ಪನವರ.

ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಇದೇ ರೀತಿ ಸದಾ ಅನನ್ಯವಾಗಿರಲಿ. ಪ್ರೇಮ ವಿವಾಹವಾಗಿ ಜೀವನ ಸಾಗಿಸುವವರಿಗೆ ಇವರು ಸ್ಪೂರ್ತಿಯಾಗಿರಲಿ. ಇವರಿಬ್ಬರ ಜೀವನ ಯಶಸ್ವಿಯಾಗಿ ಸಾಗಲಿ ಎಂದು ಬಸವ ನಾಡು ಕೂಡ ಶುಭ ಹಾರೈಸುತ್ತದೆ.

Leave a Reply

ಹೊಸ ಪೋಸ್ಟ್‌