ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯ ದೈವ ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ಆವರಣದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಫೆ. 16 ರಂದು ಬುಧವಾರ ಅಡಿಗಲ್ಲು ಹಾಕಲಿದ್ದಾರೆ.ರೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನಲ್ಲಿ ಗುಡ್ಡಾಪುರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಕರ್ನಾಟಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಗುಡ್ಡಾಪುರಕ್ಕೆ ಕರ್ನಾಟಕದಿಂದ ಅಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಶ್ರೀ ದೇವಾಲಯದ ಹೆಸರಿನಲ್ಲಿರುವ ಎರಡು ಎಕರೆ ಜಮೀನನ್ನು ಖರೀದಿಸಲಾಗಿದೆ. ದೇವಸ್ಥಾನದಿಂದ ಕೇವಲ 300 ಮೀ. ದೂರದಲ್ಲಿ ಜಿಲ್ಲಾ ರಸ್ತೆಗೆ ಹೊಂದಿಕೊಂಡಿರುವ ಈ ಜಮೀನಿಗೆ ಕಾಂಪೌಡನ್ನು ನಿರ್ಮಿಸಲಾಗಿತ್ತು. ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರ ಮುತುರ್ಜಯಿಂದ ಗುಡ್ಡಾಪುರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಹಂತದಲ್ಲಿ ರೂ. 5 ಕೋ. ಅನುದಾನ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತ ಶಾಸಕ ವಿಕ್ರಮಸಿಂಹ ಸಾವಂತ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ದಾನಮ್ಮದೇವಿ ಟ್ರಸ್ಟ್ ಕಮಿಟಿ ಸದಸ್ಯರು, ಆ ಸಾಂಗಲಿ ಸಂಸದರು, ಶಾಸಕರು ಹಾಗೂ ನಾನಾ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.