ಬಿಸಿಲ ನಾಡಿನಲ್ಲಿ ರೇಶ್ಮೆ ಬೆಳೆದು ಗಮನ ಸೆಳೆಯುತ್ತಿರುವ ಬಸವ ನಾಡಿನ ರೈತ ದಂಪತಿ

ಮಹೇಶ ವಿ. ಶಟಗಾರ

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಬಹುತೇಕ ಭಾಗಗಳಲ್ಲಿ ರೈತರಿಗೆ ಸಾಕಷ್ಟು ಜಮೀನು ಇದ್ದರೂ ಅದರಲ್ಲಿ ತಂತ್ರಜ್ಞಾನ ಬಳಸಿ ಹೇಗೆಲ್ಲ ಉತ್ತಮ ಆದಾಯ ಗಳಿಬಹುದು ಎಂಬುದು ಬಹುತೇಕರಿಗೆ ಮಾಹಿತಿ ಇಲ್ಲ.  ಅದರಲ್ಲೂ ಕಡಿಮೆ ಭೂಮಿಯಿದ್ದರೂ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಹೆಚ್ಚೆಚ್ಚು ಆದಾಯ ಗಳಿಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಈ ದಂಪತಿ.

ಇವರಿಗೆ ಜಮೀನು ಎಷ್ಟಿ ಎನ್ನುವುದಕ್ಕಿಂತ ತಮ್ಮ ಪಾಲಿಗಿರುವ ಒಂದೇ ಎಕರೆ ಭೂಮಿಯಲ್ಲಿ ಈ ರೈತ ದಂಪತಿ ಲಕ್ಷಗಟ್ಟಲೇ ಆದಾಯ ಗಳಿಸುವ ಮೂಲಕ ಅನ್ನದಾತರ ಗಮನ ಸೆಳೆದಿದ್ದಾರೆ.

ಹಚ್ಚು ಹಸಿರಾಗಿ ಬೆಳೆದಿರುವ ಹಿಪ್ಪು ನೇರಳೆ, ಇದನ್ನು ವೀಕ್ಷಿಸಲು ಬಂದಿರುವ ರೇಷ್ಮೆ ಇಲಾಖೆ ಅಧಿಕಾರಿಗಳು.  ಗೂಡು ಕಟ್ಟಲು ಸಿದ್ಧವಾಗಿರುವ ರೇಶ್ಮೆ ಹುಳುಗಳು.  ಅಂದಹಾಗೆ ಈ ದೃಶ್ಯ ಕಂಡು ಬಂದಿರುವುದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ.  ಈ ಗ್ರಾಮದ ರೈತ ಗದಿಗೆಪ್ಪ ಕೆಂಭಾವಿ ಎಂಬುವರಿಗೆ ಎರಡುವರೆ ಎಕರೆ ಜಮೀನಿದೆ.  ಈ ಜಮೀನಿನಲ್ಲಿ ಇದಕ್ಕೂ ಮುಂಚೆ ಇವರು ಇತರ ರೈತರಂತೆ ಶೇಂಗಾ, ಗೋವಿನ ಜೋಳ ಸೇರಿದಂತೆ ನಾನಾ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದರು.  ಆದರೆ ಖರ್ಚು ಜಾಸ್ತಿಯಾಗಿ ಬರುತ್ತಿದ್ದ ಆದಾಯವೂ ಅಷ್ಟಕ್ಕಷ್ಟೇ ಎಂಬಂತಿತ್ತು.  ಐದು ವರ್ಷಗಳಿಂದ ಒಂದು ಎಕರೆ ಜಮೀನಿಲ್ಲಿ ಪ್ರಾಯೋಗಿಕವಾಗಿ ರೇಶ್ಮೆ ಕೃಶಿ ಮಾಡಲು ಆರಂಭಿಸಿದರು.  ಈಗ ಅದರ ಫಲ ಸಿಕ್ಕಿದ್ದು ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.  ಇವರ ರೇಷ್ಮೆ ಕೃಷಿಗೆ ಪತ್ನಿ ಪ್ರೇಮಾ ಕೂಡಾ ಬೆನ್ನೆಲುಬಾಗಿ ನಿಂತಿದ್ದಾರೆ.  ಒಂದು ಎಕರೆ ಹೊಲದಲ್ಲಿ ಹೊಲದಲ್ಲಿ ಹಚ್ಚು ಹಸಿರಾಗಿ ಹಿಪ್ಪೆ ನೇರಳೆ ಫಸಲು ಸೋಂಪಾಗಿ ಬೆಳಎದು ನಿಂತಿದೆ.

ವರ್ಷಕ್ಕೆ ನಾಲ್ಕು ಅಥವಾ ಐದು ಸಲ ರೇಷ್ಮೆ ಬೆಳೆ ತೆಗೆಯುತ್ತಾರೆ.  ರೇಷ್ಮೆ ಕೃಷಿ ಮಾಡಲು ಖರ್ಚೂ ಕಡಿಮೆ ಇದೆ.  ಏಕೆಂದರೆ ಇಲ್ಲಿ ಬೆಳೆಗೆ ಔಷಧಿ ಸಿಂಪಡಣೆ, ಕಳೆ ನಾಶಕಗಳ ಬಳಕೆ ಕಡಿಮೆ.  ಅಲ್ಲದೇ, ರೋಗ ರುಜಿನಗಳುಗಳ ಕಾಟವೂ ಕಡಿಮೆಯೇ.  ಹೀಗಾಗಿ ಖರ್ಚೂ ಕಡಿಮೆ ಬರುತ್ತದೆ.  ಜೊತೆಗೆ ಆದಾಯ ಹೆಚ್ಚಿಗೆ ಸಿಗುತ್ತದೆ.  ಇದರಿಂದ ಉತ್ತಮ ಆದಾಯವೂ ಬರುತ್ತಿದೆ ಎನ್ನುತ್ತಾರೆ ರೈತ ಗದಿಗೆಪ್ಪ ಕೆಂಭಾವಿ.

ರೈತ ಗದಿಗೆಪ್ಪ ಕೆಂಭಾವಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ. 1 ಲಕ್ಷ ಸಹಾಯ ಧನ ಪಡೆದುಕೊಂಡಿದ್ದಾರೆ.  ಈವರೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗ್ತಿತ್ತು.  ಈಗ ರೈತರು ಬೆಳೆ ಬೆಳೆಯಲು ಈ ಯೋಜನೆಯಡಿ ಸಹಾಯ ಧನ ಪಡೆದುಕೊಳ್ಳಬಹುದು.  ತಮ್ಮ ಜಮೀನಿನಲ್ಲಿ ತಾವೇ ಕೆಲಸ ಮಾಡಿ ಆದಾಯ ಗಳಿಸುವ ಯೋಜನೆಯಾಗಿ ಎಂ ಜಿ ಎನ್ ಆರ್ ಇ ಜಿ ಬದಲಾಗಿದೆ.  ರೈತ ಗದಿಗೆಪ್ಪ ಕೆಂಭಾವಿ ರೇಷ್ಮೆ ಗೂಡುಗಳನ್ನು ರಾಮನಗರ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮಾರುಕಟ್ಟೆಗೆ ಕಳುಹಿಸುತ್ತಾರೆ.

ಈಗ ಮತ್ತೆ ರೇಷ್ಮೆ ಹೂಳುಗಳು ಗೂಡು ಕಟ್ಟಲು ಸಿದ್ಧವಾಗಿವೆ.  ರೇಷ್ಮೆ ಕೃಷಿ ಕೈಗೊಳ್ಳಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರಿಗೆ ವರದಾನವಾಗಿದೆ ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕಿ ಭಾರತಿ ಹಿರೇಮಠ.

ರೈತರು ಮನಸ್ಸು ಮಾಡಿದರೆ ತಮಗೆ ಲಭ್ಯವಿರುವ ಕಡಿಮೆ ಜಮೀನಿನಲ್ಲಿಯೇ ಶ್ರಮಪಟ್ಟು ಆಧುನಿಕ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಬಂಪರ್ ಬೆಳೆ ಬೆಳೆಯಬಹುದು ಎಂಬುದುನ್ನು ಈ ರೈತ ದಂಪತಿ ತೋರಿಸಿಕೊಟ್ಟಿದ್ದಾರೆ.  ಅಷ್ಟೇ ಅಲ್ಲ, ಬರದ ನಾಡಿನಲ್ಲಿಯೂ ದಕ್ಷಿಣ ಕರ್ನಾಟಕದ ರೈತರಂತೆ ಉತ್ತಮ ಗುಣಮಟ್ಟದ ರೇಶ್ಮೆ ಬೆಳೆ ಬೆಳೆಯಬಹುದು ಎಂಬುದನ್ನು ತೋರಿಸಿ ಕೊಟ್ದಿದ್ದಾರೆ.

Leave a Reply

ಹೊಸ ಪೋಸ್ಟ್‌