ಹಾರುಬೂದಿಯಿಂದ ಹಾಳಾಗುತ್ತಿರುವ ರೈತರ ಬಾಳು- ಅನ್ನದಾತರ ಗೋಳು ಕೇಳುವವರು ಯಾರು?

ವಿಜಯಪುರ: ವಿದ್ಯುಸ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ನಾನಾ ಕಡೆಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಿದೆ.  ಈಗ ಇಂಥದ್ದೆ ಒಂದು ಉಷ್ಣ ವಿದ್ಯುತ್ ಸ್ಥಾವರ ರೈತರ ಬಾಳಿಗೆ ಕಂಟಕ ತಂದಿದೆ. 

ಬಸವ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಇರುವ ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿ ಈಗ ಇದೇ ತಾಲೂಕಿನ ಮಸೂತಿ ಗ್ರಾಮಸ್ಥರ ಪಾಲಿಗೆ ಶಾಪವಾಗಿ ಪರಿಣಿಸಿದೆ.  ಪ್ರತಿನಿತ್ಯ ಕೂಡಗಿ ಉಷ್ಣ ವಿದ್ಯುಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲು ಬಳಸು ಕಲ್ಲಿದ್ದಲಿನ ಬೂದಿಯೇ ಈಗ ಈ ರೈತರ ಬಾಳಿಗೆ ಕಂಟವಾಗಿ ಪರಿಣಿಸಿದೆ.  ಇಲ್ಲಿ ಪ್ರತಿನಿತ್ಯ ಬೇಡಿಕೆಗೆ ತಕ್ಕಂತೆ ಸುಮಾರು 2000 ದಿಂದ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯದ ನಾನಾ ಜಿಲ್ಲೆಗಳು ಮತ್ತು ಇತರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.

 

ಈ ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿರುವ ಹಾರುಬೂದಿಯನ್ನು ನೀರಿನಲ್ಲಿ ಮುಶ್ರಣ ಮಾಡಿ ಕೂಡಗಿಯಿಂದ ಸುಮಾರು 4 ಕಿ. ಮೀ. ದೂರದಲ್ಲಿರುವ ಮಸೂತಿ ಬಳಿ 1400 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ.  ಇದೇ ಸಮಸ್ಯೆಗೆ ಈಗ ಮೂಲವಾಗಿದೆ.  ನಂತರ ಇದೇ ನೀರನ್ನು ಶುದ್ಧಿಕರಿಸಿ ಮರು ಬಳಕೆ ಮಾಡಲಾಗುತ್ತಿದೆ.  ಈ ಹಾರುಬೂದಿ ಮಿಶ್ರಿದ ನೀರು ಕೆರೆಯಲ್ಲಿ ಸಂಗ್ರಹವಾದ ನಂತರ ಅದನ್ನು ಸಿಮೆಂಟ್ ತಯಾರಿಸಲು ನಾನಾ ಫ್ಯಾಕ್ಟರಿಗಳಿಗೆ ಹಾಗೂ ಇಟ್ಟಿಗೆ ತಯಾರಿಕೆ ಮಾಡುವವರಿಗೆ ಮಾರಾಟ ಮಾಡಲಾಗುತ್ತಿದೆ.  ಉಷ್ಣ ವಿದ್ಯುತ್ ಸ್ಥಾವರದಿಂದ ಬರುವ ಹಾರುಬೂದಿ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು. ಅದೇ ನೀರು ಕೆರೆಗಳ ಕೆಳಗಿನ ಭಾಗ ರೈತರ ಪಾಲಿಗೆ ಇದು ವಿಷವಾಗಿ ಪರಿಣಮಿಸಿದೆ.

ಯಾವಾಗ ಉಷ್ಣ ವಿದ್ಯತ್ ಸ್ಥಾವರದ ಹಾರುಬೂದಿ ಮಿಶ್ರಿತ ನೀರು ಮಸೂತಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಳಿಯ ಕೆರೆಗಳಲ್ಲಿ ಸಂಗ್ರಹ ಆರಂಭವಾಗಿಯೋ ಅಲ್ಲಿಂದ ಕೆರೆಯ ಸುತ್ತಮುತ್ತಲ ಜಮೀನುಗಳಲ್ಲಿ ಮೊದಲಿಗೆ ಸಮಸ್ಯೆ ಆರಂಭವಾಯಿತು. ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು ಇಂಗಿ ಕೆರೆಯ ಕೆಳಭಾಗದ ಜಮೀನುಗಳಲ್ಲಿ ಮೇಲೆ ಏಳಲು ಆರಂಭವಾಯಿತು.  ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಳ್ಳಲಾರಂಭಿಸಿತು.  ಈ ಭಾಗದಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳ ಇಳುವರಿ ಕಡಿಮೆಯಾಗಿ ಭೂಮಿಯೆಲ್ಲ ಸವಳು ಜವಳು ಹಿಡಿದು ಬಿಟ್ಟದೆ.

 

ಈ ಜಮೀನನನ್ನು ನಂಬಿ ಬದುಕುತ್ತಿರುವ ರೈತರ ಬಾಳು ಈಗ ಬೀದಿಗೆ ಬಂದಿದೆ.  ಹಾರುಬೂದಿ ಸಂಗ್ರಹಿಸುವ ಕೆರೆಗಳಿಂದ ನಮಗೆ ಸಮಸ್ಯೆಯಾಗುತ್ತಿದೆ. ನಮ್ಮ ಜಮೀನುಗಳಲ್ಲಿ ಬೆಳೆ ಬಾರದಂತಾಗಿದೆ ಎಂದು ರೈತರು ಹತ್ತಾಯ ಬಾರಿ ಕೂಡಲಿ ಉಷ್ಣ ವಿದ್ಯುತ್ ಸ್ಥಾವರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೆ ಪ್ರಯೋಜನವಾಗಿಲ್ಲ.  ಇಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಬಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗಿ ಭೂಮಿ ಸವಳು ಜವಳಾಗಿದೆ,  ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ.  ಇತರೆ ಜಮೀನಿನಲ್ಲಿ ಇದೇ ತೇವಾಂಶದ ಕಾರಣ ಜಮೀನಿನಲ್ಲಿ ಉಪ್ಪಿನಾಂಶ ಹೆಚ್ಚಾಗಿ ಹೋಗುತ್ತಾ ಫಸಲು ಅತ್ಯಂತ ಕಡಿಮೆ ಬರುತ್ತಿದೆ,  ಲಕ್ಷಾಂತರ ರೂಪಾಯಿಹಣ ಖರ್ಚು ಮಾಡಿದರೂ ಫಸಲು ಬರುತ್ತಿಲ್ಲ ಎಂದು ರೈತರಾದ ಸೋಮು ಬಿರಾದಾರ ಮತ್ತು ಶಿಪ್ಪ ಹಂಗರಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದರಿಂದ ಬೇಸತ್ತ ರೈತರು ಇಲ್ಲಿನ ತೆರೆದ ಭಾವಿ ಮತ್ತು ಕೊಳವೆ ಭಾವಿಗಳ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಈ ನೀರು ಜನರಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ.  ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.  ಒಂದೆಡೆ ಉಳಿಮೆ ಮಾಡುವ ಜಮೀನು ಹಾಳಾಗಿದೆ,  ಮತ್ತೊಂದೆಡೆ ಇಲ್ಲಿನ ಅಂತರ್ಜಲವೂ ವಿಷವಾಗುತ್ತಿದೆ.  ಈವರೆಗೆ ತಮ್ಮದೇ ಜಮೀನಿನ ತೆರೆದ ಮತ್ತು ಬಾವಿ ಕೊಳವೆ ಬಾವಿಯ ನೀರನ್ನು ಕುಡಿಯುತ್ತಿದ್ದ ಈ ರೈತರ ಜಲಕ್ಕೆ ಈಗ ಹಾರುಬೂದಿಯ ಕಲುಷಿತ ನೀರು ಹಾಳು ಮಾಡಿದ್ದು, ಅನ್ನದಾತರಿಗೆ ಈಗ ಜೀವಜಲಕ್ಕೂ ಕಂಟಕ ಎದುರಾಗಿದೆ.  ಈ ಹಾರುಬೂದಿಯ ಜೊತೆಗಿರುವ ರಾಸಾಯನಿಕ ಸುತ್ತಮುತ್ತಲ ಭಾಗದ ಅಂತರ್ಜಲ ಸೇರುತ್ತಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಈ ಕುರಿತು ಕೂಡಲಿ ಉಷ್ಣ ವಿದ್ಯುತ್ ಸ್ಥಾವರದ ಅಧಿಕಾರಿಗಳೂ ಕೂಡ ಗಮನ ಹರಿಸಿದ್ದೇವೆ ಎಂದು ಹೇಳಿದ್ದು, ಈಗಾಗಲೇ ವಿಜಯಪುರ ಉಪವಿಭಾಗಾಧಿಕಾರಿ , ಕೊಲ್ಹಾರ ತಹಸೀಲ್ದಾರ ಮತ್ತು ಇತರೆ ಆಧಿಕಾರಿಗಳ ನೇತೃತ್ವದ ಸಮಿತಿ ಇಲ್ಲಿನ ರೈತರ  ಜಮೀನುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಗಿದೆ.  ಈಗಾಗಲೇ ಪರಿಶೀಲನೆ ಕೂಡ ನಡೆಸಿದೆ.  ರೈತರು ಆತಂಕ ಪಡಬಾರದು ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಕೂಡಲಿ ಎನ್ ಟಿ ಪಿ ಸಿ ಸುತ್ತಮುತ್ತಲಿನ ರೈತರ ಸಮಸ್ಯೆಗಳ ಕುರಿತು ಗಮನ ಹರಿಸಲಾಗಿದೆ.  ಈ ವಿಚಾರಕ್ಕೆ ಮೂರು ಹಂತದಲ್ಲಿ ಶಾಶ್ವತ ಪರಿಹಾರಕ್ಕೆ ಕೈಗೊಳ್ಳಲಾಗುತ್ತಿದೆ.  ಬೆಳೆಹಾನಿಯಾಗುತ್ತಿರುವ ರೈತರಿಗೆ ಪ್ರತಿವರ್ಷ ಪರಿಹಾರ ಒದಗಿಸುವುದು ಅಥವಾ ಆಧುನಿಕ ತಂತ್ರಜ್ಞಾನ ಬಳಸಿ ಕಲುಷಿತ ನೀರು ಕೆರೆ ಸೇರದಂತೆ ಕ್ರಮ ಕೈಗೊಳ್ಳುವುದು ಮತ್ತು ಎನ್ ಟಿ ಪಿ ಸಿ ಯಿಂದ ಇಂಥ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದು.  ಈ ಮೂರಲ್ಲಿ ಒಂದು ಕ್ರಮ ಕೈಗೊಂಡರೆ ರೈತರಿಗೆ ಸಮಸ್ಯೆ ತಪ್ಪಲಿದೆ.  ಅಲ್ಲದೇ, ಈಗಾಗಲೇ ಬೆಳೆಹಾನಿಯಾಗಿರುವ ರೈತರಿಗೆ ಪರಿಹಾರ ಒದಗಿಸಲು ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ರಾರೆ.

ನಾಡಿಗೆ ಬೆಳಕು ನೀಡಲು ಯಾವ ರೈತರು ತಮ್ಮ ಜಮೀನನ್ನು ನೀಡಿದ್ದರೋ ಅವರದೇ ಇದೇ ಅನ್ನದಾತರ ಪಾಲಿಗೆ ಊಗ ಉಷ್ಣ ವಿದ್ಯುತ್ ಸ್ಥಾವರದ ಹಾರುಭೂಮಿ ವಿಷವಾಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ.

 

Leave a Reply

ಹೊಸ ಪೋಸ್ಟ್‌