ವಿಜಯಪುರ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ಕ್ಕೆ ಈಗ ಸುವರ್ಣ ಮಹೋತ್ಸವ ಸಂಭ್ರಮ. ಈ ವರ್ಷಾಚರಣೆ ಹಿನ್ನೆಲೆಯಲ್ಲಿ ನಿಗಮದಿಂದ ವತಿಯಿಂದ ವಿಜಯಪುರ ನಗರದಲ್ಲಿರುವ ಮಯೂರ್ ಆದಿಲ್ ಶಾಹಿ ಹೊಟೇಲ್‍ನಲ್ಲಿ ಈ ವರ್ಷದ ಘೋಷ ವಾಕ್ಯ ಅತಿಥಿ ಸತ್ಕಾರ ಕಾರ್ಯಕ್ರಮದಡಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.
ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಜಿ. ಪಂ. ಸಿಇಒ ರಾಹುಲ ಸಿಂಧೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಜಂಟಿಯಾಗಿ ಸಸಿ ನೆಡುವ ಮೂಲಕ ಸ್ವರ್ಣ ಸಂಭ್ರಮದ ಅತಿಥಿ ಸತ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಗಮದ ಮಯೂರ ಆದಿಲ್ ಶಾಹಿ ಹೊಟೇಲ್ ವ್ಯವಸ್ಥಾಪಕ ಸುನಿಲಕುಮಾರ, ನಿಗಮ ಸ್ಥಾಪನೆಯ ಸ್ವವರ್ಣ ಮಹೋತ್ಸವ ವರ್ಷ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಅತಿಥಿ ಸತ್ಕಾರ ಘೋಷ ವಾಕ್ಯದೊಂದಿಗೆ ಈ ವರ್ಷ ಸಂಭ್ರಮವನ್ನು ಸ್ಮರಣೀಯವಾಗಿಸಲು ಸಸಿಗಳನ್ನು ನೆಟ್ಟು ಪರಿಸರ ಜಾಗೃತಿಗೂ ಮುಂದಾಗಿದ್ದೇವೆ ಎಂದು ಹೇಳಿದರು.
ಹೊಟೇಲ್ ಉದ್ಯಮದ ವ್ಯಾಪಾರದೊಂದಿಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿಗಮದ ಹೊಟೇಲ್, ಪ್ರವಾಸಿಗರಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಸೇವೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣ ಹೋರಾಟ ಸಮಿತಿಯ ಅಂಬಾದಾಸ ಜೋಶಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಮತ್ತು ಪಾರಂಪರಿಕ ಸ್ಮಾರಕಗಳ ವಿಶಿಷ್ಟತೆಯ ದೊಡ್ಡ ಗಣಿಯೇ ಇದ್ದರೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರಿದಲ್ಲಿ ಈ ಭಾಗದಲ್ಲಿ ಹತ್ತಾರು, ಸಾವಿರ ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಡಿಟಿಸಿ ಅನಿಲಕುಮಾರ ಬಣಜಿಗೇರ, ನಿವೃತ್ತ ಎಎಸ್‍ಐ ದಾದಾ ಭಕ್ಷಿ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಇದೀಗ ಅಭಿವೃದ್ಧಿ ಕಾಣುತ್ತಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವೂ ನಡೆದಿದೆ. ಇದರ ಭಾಗವಾಗಿ ಕೆಎಸ್‍ಟಿಡಿಸಿ ಈಗ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡಿ ಪ್ರವಾಸಿಗರ ಆಕರ್ಷಣೆಯಾಗಿದೆ ಎಂದು ಹೇಳಿದರು.
ಕೆಎಸ್‍ಟಿಡಿಸಿ ನಿವೃತ್ತ ಸಿಬ್ಬಂದಿ ಅಶೋಕ ಕಾಂಬಳೆ ಸೇರಿದಂತೆ ನಾನಾ ಮುಖಂಡರು ಉತಪಸ್ಥಿತರಿದ್ದರು. ಮಯೂರ ಆದಿಲ್ ಶಾಹಿ ಹೊಟೇಲ್ ವ್ಯವಸ್ಥಾಪಕ ಸುನಿಲಕುಮಾರ ಪ್ರಾಸ್ತಾವಿಕ ಮಾತನಾಡಿದರು. ಸಿಬ್ಬಂದಿ ಉಮೇಶ ರಾಠೋಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.