ವಿಜಯಪುರ: ಶ್ರಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ಜಾನಪದ ಕಲೆಗಳು ಗ್ರಾಮೀಣ ಜನರ ಅನುಭವದ ಭಾವಬಿಂಬಗಳಾಗಿವೆ. ಹಳ್ಳಿಗರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪದ ಕಲೆಗಳು ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ, ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿ ಗೌಡ್ತಿ ಪಾಟೀಲ್ ಜಾನಪದ ಪ್ರತಿಷ್ಠಾನ ಹಾಗೂ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಲಕ್ಷ್ಮೀದೇವಿ ಜಾತ್ರಾ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಸಂಬ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆ, ಕಲಾವಿದರು ಮತ್ತು ಸಾಹಿತ್ಯವನ್ನು ಮುಂದಿನ ನಮ್ಮ ಪೀಳಿಗೆಗೆ ತಿಳಿಸಲು ಇಂಥ ಕಾರ್ಯಕ್ರಮಗಳು ಅವಶ್ಯವಾಗಿದೆ ಎಂದು ಸೋಮನಿಂಗ ಗೆಣ್ಣೂರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ((ಪಡಗಾನೂರ), ಕಲಾವಿದರು ಸಂಸ್ಕೃತಿಯ ವಾರಸುದಾರದಾಗಿದ್ದಾರೆ. ಅವರನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಪ್ರಾಚಿನ ಪರಂಪರೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯದಲ್ಲಿ ಗಣನೀಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಾಗಲಕೋಟೆ ಲೋಕಾಯುಕ್ತ ಸಿಪಿಐ ಎಂ. ಎಚ್ ಬಿದರಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಹಣಮಂತಗೌಡ ಪಾಟೀಲ, ವೆಂಕಪ್ಪ ಬಿದರಿ, ಮಾಳಪ್ಪ ಮಟ್ಯಾಳ ಮುಂತಾದವರು ಉಪಸ್ಥಿತರಿದ್ದರು.
ಕಾಖಂಡಕಿಯ ಕಮಲವ್ವಾ ಸಿದರೆಡ್ಡಿ ಮತ್ತು ಸಂಗಡಿಗರು ಚೌಡಕಿ ಪದ, ಮಿಣಜಗಿಯ ಯಮನಪ್ಪ ಅಂಗಡಿ ಮತ್ತು ಸಂಗಡಿಗರು ಹಾಗೂ ದೇವರಗೆಣ್ಣೂರು ಲಕ್ಷ್ಮೀದೇವಿ ಡೊಳ್ಳಿನ ಸಂಘದವರು ಡೊಳ್ಳಿನ ಪದ ಹಾಡಿದರು. ಮಾಳಪ್ಪ ಸಿದ್ದಾಪೂರ ಸ್ವಾಗತಿಸಿದರು, ಶಿವು ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.