ಗುಮ್ಮಟ ನಗರಿಯ ರಸ್ತೆಗಳಿಗೆ ಆದಿಲಶಾಹಿ ಬಾದಷಹರು, ಸೂಫಿ ಸಂತರು, ಇತರ ಮಹನೀಯರ ಹೆಸರಿಡಲು ದಿ ಬಿಜಾಪುರ ಹೆರಿಟೇಜ್ ಫೌಂಡೇಶನ್ ಆಗ್ರಹ

ವಿಜಯಪುರ: ವಿಜಯಪುರ ನಗರದ ಕೆಲವು ಮಾರ್ಗ ಮತ್ತು ವೃತ್ತಗಳಿಗೆ ಆದಿಲ್‍ಶಾಹಿ ದೊರೆಗಳ, ಸೂಫಿ ಸಂತರ ಹಾಗೂ ಇತರೆ ಮಹನೀಯರ ನಾಮಕರ ಮಾಡಬೇಕು ಎಂದು ಒತ್ತಾಯಿಸಿ ದಿ ಬಿಜಾಪುರ ಹೆರಿಟೇಜ್ ಪೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫೌಂಜೇಶನ್ ಸಂಸ್ಥಾಪಕ ಅನೀಸ ಮನೀಯಾರ ಮತ್ತು ಹಮ್ಜಾ ಮಹಿಬೂಬ, ವಿಜಯಪುರ ನಗರವು ಜಗತ್ತಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ.  ಇಲ್ಲಿ ಅನೇಕ ಮಹಾ ಪುರುಷರು, ಸಮಾಜ ಸುಧಾರಕರು ಹಾಗೂ ಐತಿಹಾಸಿಕ ವ್ಯಕ್ತಿಗಳು ತಂತಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಕಾರ್ಯಗಳನ್ನು ಮಾಡಿ ವಿಜಯಪುರದ ಹೆಸರನ್ನು ಅಮರಗೊಳಿಸಿದ್ದಾರೆ.  ಅವರ ಈ ಸಾಧನೆಯನ್ನು ಹೊಸ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಾಗಿದೆ   ಆದ್ದರಿಂದ ಅಂಥ ಮಹನೀಯರ ಹೆಸರುಗಳನ್ನು ನಗರದ ಕೆಲವು ಮಾರ್ಗಗಳಿಗೆ ಇಟ್ಟರೆ ಅವರಿಗೆ ನಾವು ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.

ಆದಿಲ್‍ಶಾಹಿ ಸುಲ್ತಾನರು ಈ ನಗರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ.  ಅವರು ಈ ನಗರವನ್ನು ಬೆಳೆಸಿ, ಇಡೀ ಜಗತ್ತಿನಲ್ಲಿಯೇ ಪ್ರಸಿದ್ಧವಾದ ಐತಿಹಾಸಿಕ ನಗರವನ್ನಾಗಿ ಮಾಡಿದ ಕೀರ್ತಿ ಹೊಂದಿದ್ದಾರೆ.  ಆದರೆ ಇಂಥ ಮಹಾನ್ ಸುಲ್ತಾನರ ಹೆಸರುಗಳಿಮದ ವೃತ್ತಗಳು ಮತ್ತು ಮಾರ್ಗಗಳು ಇಲ್ಲದಿರುವುದು ವಿಷಾಧನೀಯ.  ಅದರಂತೆ ಸೂಫಿ-ಸಂತರು ಈ ಭೂಮಿಯಲ್ಲಿ ವಾಸಿಸಿ ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರಿ ಎಲ್ಲರ ಏಳಿಗೆಗಾಗಿ ಶ್ರಮಿಸಿದ ಇವರ ಹೆಸರುಗಳು ಸಹ ಯಾವುದೇ ಮಾರ್ಗ ಮತ್ತು ವೃತ್ತಗಳಿಗೆ ಇಟ್ಟಿಲ್ಲ.  ಹೀಗಾಗಿ ಅವರ ಹೆಸರುಗಳನ್ನು ನಾಮಕರಣ ಮಾಡುವುದು ಅವಶ್ಯವಾಗಿದೆ.  ಈ ಮೂಲಕ ಸರಕಾರದ ಗಮನಕ್ಕೆ ತರಬಯಸುತ್ತೇವೆ ಎಂದು ಅವರು ಹೇಳಿದರು.

ನವಾಬ ಮುಸ್ತಾಫಾಖಾನ ಮಾರ್ಗವು ಬಡಿಕಮಾನದಿಂದ ಸ್ಟೇಷನ್ ರೋಡ ವರಗೆ, ಡಾ.ಬಿ.ಆರ್. ಅಂಬೇಡ್ಕರ್ ಮಾರ್ಗವನ್ನು ಅಂಬೇಡ್ಕರ್ ವೃತ್ತದಿಂದ ಸುಲೇಮಾನ ಮಸೀದಿಯವರಿಗೆ, ಜಾಮಿಯಾ ಮಸ್ಜೀದ ಮಾರ್ಗವು ಅತಾವುಲ್ಲಾಖಾನ ಚೌಕದಿಂದ ಹಕೀಮಚೌಕವರೆಗೆ, ಸಾವಿತ್ರಿ ಬಾಯಿ ಫುಲೆ ಮಾರ್ಗವು ಗೋಲಗುಮ್ಮಟದಿಂದ ರಿಂಗ್ ರೋಡ್(ಸಿಂದಗಿ ನಾಕಾ)ವರೆಗೆ, ವೀರರಾಣಿ ಚಾಂದ ಬೀಬಿ ಮಾರ್ಗವು ಶಿವಾಜಿ ಚೌಕದಿಂದ ಶಾಹಪೂರ ದ್ವಾರದವರೆಗೆ, ಹಜರತ ಸಯ್ಯದ ಹಬೀಬುಲ್ಲಾಹ್ ಕಿರ್ಮಾನಿ ಮಾರ್ಗವು ಶಾಹಪೂರ ದ್ವಾರದಿಂದ ಸೋಲಾಪುರ ನಾಕದವರೆಗೆ ಹೀಗೆ ಇನ್ನೀತರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.         ಈ ಸಂದರ್ಭದಲ್ಲಿ ಆರ್‍ಟಿಐ ಕಾರ್ಯಕರ್ತ ಅಬ್ದುಲ್ ಹಮೀದ ಇನಾಮದಾರ, ಬಿಲಾಲ ಬಿಲ್ವಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌