ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ

ಮಹೇಶ ವಿ. ಶಟಗಾರ

ವಿಜಯಪುರ: ಒಣಗಿ ಹೋಗಿರುವ ಭೂಮಿ.  ಅಲ್ಲಲ್ಲಿ ಸೀಳಿದಂತೆ ಕಾಣುವ ಮಣ್ಣಿನ ದೃಶ್ಯಗಳು.  ಇವು ಯಾವುದೇ ಕೆರೆ ಅಥವಾ ಭಾವಿಯದಲ್ಲ.  ಇಲ್ಲಿಗೆ ಬಂದರೆ ಸಾಕು ಸಾಲು ಸಾಲಾಗಿ ಅಗೆಯಲಾಗಿರುವ ಕುಣಿಗಳು ಅಂದರೆ ಸಣ್ಣ ಸಣ್ಣ ಖಡ್ಡಾಗಳು ಕಾಣಿಸುತ್ತವೆ.  ಆ ಕುಣಿಗಳಲ್ಲಿ ಇಳಿಬಿಟ್ಟಿರುವ ಪೈಪುಗಳು, ಅವುಗಳ ಅಣತಿ ದೂರದಲ್ಲಿರುವ ಪಂಪಸೆಟ್ ಗಳು ಇಲ್ಲಿನ ಸಧ್ಯದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ.

ಮೇಲ್ಗಡೆ ಸೂರ್ಯನ ಪ್ರಖರ ಬಿಸಿಲು, ಕುಣಿಯ ಒಳಗೆ ಕಾಣುವ ಅಲ್ಪಸ್ವಲ್ಪ ನೀರು.  ಆ ನೀರನ್ನೇ ವಿದ್ಯುತ್ ಬಂದಾಗ ಪಂಪಸೆಟ್ ಮೂಲಕ ಮೇಲೆತ್ತಿ ಬಳಸುವ ಅನ್ನದಾತರು.  ಇದು ಬಸವ ನಾಡು ಮಹಾರಾಷ್ಟ್ರದ(Maharastra) ಗಡಿಗೆ ಹೊಂದಿಕೊಂಡಿರುವ ವಿಜಯಪುರ(Vijayapura) ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ತೀರದಲ್ಲಿ(Bheema River) ಕಂಡು ಬರುವ ದೃಶ್ಯಗಳು.

ಪ್ರತಿವರ್ಷ ಫೆಬ್ರವರಿ ಬಂತೆದರೆ ಸಾಕು.  ಭೀಮೆ ಬತ್ತಿ ಹೋಗುತ್ತಾಳೆ.  ಈ ಭೀಮೆಯನ್ನೇ ನಂಬಿರುವ ಭೀಮಾ ತೀರದ ರೈತರು ನೀರಿಲ್ಲದೆ ಪರದಾಡುವಂತಾಗುತ್ತದೆ.  ಪ್ರತಿವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೆಳೆ ಉಳಿಸಿಕೊಳ್ಳಲು ಇಲ್ಲಿನ ರೈತರು ಪಡವ ಪಾಡು ಬಲು ಕಷ್ಟಕರ.  ಈ ಬಾರಿಯೂ ಫೆಬ್ರವರಿಯಲ್ಲಿಯೇ ಭೀಮಾ ನದಿ ಬತ್ತಿ ಹೋಗಿದ್ದು, ದಸೂರ, ಗೋವಿಂದಪುರ, ಉಮರಜ, ಹೊಳಿಸಂಖ, ಉಮರಾಣಿ ಮುಂತಾದ ಗ್ರಾಮಗಳಲ್ಲಿ ರೈತರು ನದಿಯ ಒಡಲಿನಲ್ಲಿಯೇ ಸಿಮೆಂಟಿನ ರಿಂಗ್ ಗಳನ್ನು ಬಳಸಿ ಈ ರೀತಿಯಾಗಿ ಕುಣಿಗಳನ್ನು ಅಂದರೆ ಗುಂಡಿಗಳನ್ನು ತೋಡಿ ಸಿಗುವ ಅಲ್ಪಸ್ವಲ್ಪ ನೀರನ್ನು ಕೃಷಿಗೆ, ಜನ ಮತ್ತು ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದಾರೆ.

ಒಂದು ಬಾರಿ ಈ ಕುಣಿ ತೋಡಬೇಕೆಂದರೆ ಕನಿಷ್ಠ 20 ರಿಂದ 25 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ.  ಈ ರೀತಿ ಗುಂಡಿ ತೋಡಬೇಕಾದ ಅನಿವಾರ್ಯತೆಯೂ ಇವರಿದೆ.  ಏಕೆಂದರೆ, ಈಗಾಗಲೇ ನಾಟಿ ಮಾಡಿರುವ ಕಬ್ಬು, ತೋಟದಲ್ಲಿರುವ ಬಾಳೆಗಿಡಗಳು ಮತ್ತು ಇತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಜೀವಜಲ ಬೇಕೇ ಬೇಕು.  ಬೇಸಿಗೆಯಲ್ಲಿ ಹೀಗೆ ತೋಡಲಾಗಿರುವ ಗುಂಡಿಗಳು ಹೊಳೆಯಲ್ಲಿ ನೀರು ಬಂದಾಗ ಮರಳಿನಲ್ಲಿ ಮುಚ್ಚಿ ಹೋಗುತ್ತವೆ.  ಅಲ್ಲದೇ, ಬಹುತೇಕ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡೂ ಹೋಗುತ್ತವೆ.  ಪ್ರತಿವರ್ಷ ಈ ಕುಣಿಗಳಿಗೆ ಹಾಕುವ ದುಡ್ಡು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ ಎನ್ನುತ್ತಾರೆ ಎನ್ನುತ್ತಾರೆ ಉಮರಾಣಿ ಗ್ರಾಮದ ರೈತರಾದ ಅಪ್ಪು ಚಿಂಚೋಳಿ ಮತ್ತು ನಾಗರಾಜ ಕಾಂಬಳೆ.

ಹಗಲು ಹೊತ್ತಿನಲ್ಲಿ ಮೂರು ಗಂಟೆ ತ್ರಿಫೇಸ್ ವಿದ್ಯುತ್ ಇರುತ್ತದೆ.  ರಾತ್ರಿ ವೇಳೆಯೂ ಮೂರು ಗಂಟೆ ವಿದ್ಯುತ್ ಸರಬರಾಜು ಇರುತ್ತದೆ.  ಆದರೆ, ಈ ವಿದ್ಯುತ್ ಗಾಗಿ ನಿಗದಿತ ಸಮಯಕ್ಕೆ ಪ್ರತಿದಿನ ಕಾಯಲೇಬೇಕು.  ಈ ವಿದ್ಯುತ್ ಸರಬರಾಜು ಸಮಯದಲ್ಲಿ ಬೇರೆ ಕೆಲಸಗಳಿದ್ದರೆ ಹೋಗುವಂತಿಲ್ಲ.  ಒಂದು ವೇಳೆ ಹೋದರೆ, ಆ ಸಮಯದಲ್ಲಿ ತೋಟದಲ್ಲಿ ಯಾರಿಗಾದರೂ ನೀರುಣಿಸುವ ಜವಾಬ್ದಾರಿ ವಹಿಸಿ ಹೋಗಬೇಕು.  ಇಲ್ಲಿದಿದ್ದರೆ, ಆ ದಿನ ಕೃಷಿ ಬೆಳೆಗಳಿಗೆ ನೀರುಣಿಸುವುದು ತಪ್ಪಿ ಹೋಗುತ್ತದೆ ಎನ್ನುತ್ತಾರೆ ಮತ್ತೋಬ್ಬ ರೈತ ಪ್ರದೀಪ ಚಿಂಚಲಿ.

ಭೀಮಾ ನದಿಯಲ್ಲಿ ಸದಾ ನೈಸರ್ಗಿಕ ಹರಿವು ಕಾಪಾಡಬೇಕು.  ಪ್ರಾಣಿ, ಪಕ್ಷಿಗಳಿಗೆ ಬದುಕಲು ನೀರು ಅನಿವಾರ್ಯವಾಗಿದೆ ಎಂಬುದು ಪ್ರತಿಯೊಬ್ಬರಿಗೂ ಮನದಟ್ಟಾಗುವ ವಿಚಾರ.  ಈ ಭೀಮೆಯಲ್ಲಿ ನೀರು ಹರಿಯಬೇಕೆಂದರೆ ಮೇಲ್ಭಾಗ ಅಂದರೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರಬೇಕು.  ಅಲ್ಲದೇ, ಅಲ್ಲಿರುವ ಉಜನಿ ಜಲಾಷಯದಿಂದ ನೀರು ಬಿಡುಗಡೆಯಾಗಬೇಕು.  ಪ್ರತಿವರ್ಷ ಉಂಟಾಗುವ ಈ ನೀರಿನ ತಾಪತ್ರಯ ತಪ್ಪಿಸಲು ಕರ್ನಾಟಕ ಸರಕಾರ ನೆರೆಯ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಭೀಮಾ ತೀರದ ಮಣ್ಣಿನ ಮಕ್ಕಳ ನ್ಯಾಯೋಚಿತ ಬೇಡಿಕೆಯಾಗಿದೆ.  ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತುರ್ತಾಗಿ ಮಹಾರಾಷ್ಟ್ರದೊಂದಿಗೆ ಮಾತುಕತೆಗೆ ಮುಂದಾಗಿ ರೈತರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.

Leave a Reply

ಹೊಸ ಪೋಸ್ಟ್‌