ಮಹೇಶ ವಿ. ಶಟಗಾರ
ವಿಜಯಪುರ(Vijayapura): ಅಲ್ಲಿ ಸಂತಸದ ಕ್ಷಣಗಳು ಕಣ್ತುಂಬುವಂತಿದ್ದವು. ಸ್ವಪ್ನಾ(Sapna) ಅಷ್ಟೇ ಅಲ್ಲ ವಿನಾಯಕ(Vinayak) ಅವರ ಪೋಷಕರ(Parents) ಕಣ್ಣುಗಳಲ್ಲೂ ಆನಂದಭಾಷ್ಪ(Happiness) ಸುರಿಯುತ್ತಿದ್ದವು. ಈ ಘಟನೆಗೆ ಸಾಕ್ಷಿಯಾಗಿದ್ದು ಬಸವ ನಾಡು ವಿಜಯಪುರ.
ಅಲ್ಲಿಗೆ ಬಂದಿದ್ದ ಅತಿಥಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಖುದ್ದಾಗಿ ಇಡೀ ಕಾರ್ಯಕ್ರಮ ಮುಗಿಯುವ ವರೆಗೆ ಸ್ಥಳದಲ್ಲಿಯೇ ಇದ್ದು ಶುಭ ಹಾರೈಸಿದರು.
ಇದು ಯುವತಿ ಸ್ವಪ್ನಾ ವಿನಾಯಕನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಘಳಿಗೆಯ ಕಾರ್ಯಕ್ರಮ. ಇದು ಒಂದು ಮದುವೆ ಕಾರ್ಯಕ್ರಮವಾದರೂ ಇಲ್ಲಿ ವಿವಾಹವಾದ ಜೋಡಿ ಮಾತ್ರ ವಿಶೇಷವಾಗಿತ್ತು. ತಮ್ಮ ಮಗಳ ಮದುವೆಯ ಬಗ್ಗೆ ಮಾತನಾಡುವಾಗ ಅವಳ ತಾಯಿ ಹಾಗೂ ಮಗನ ಮದುವೆ ಕುರಿತು ಹೇಳುವಾಗ ಆತನ ತಾಯಿ ಕಣ್ಣಲ್ಲಿ ನೀರು ಬಂದಿರುವುದರ ಹಿಂದೆ ಸಾರ್ಥಕ ಭಾವನೆಯ ಪ್ರತೀಕವಾಗಿತ್ತು.
ಬಿಎ ಪದವೀಧರೆ ಸ್ವಪ್ನಾ ವಿಜಯಪುರದವಳು. ಸುಜಾತಾ ಮತ್ತು ಶಿವಾನಂದ ರೇಶ್ಮಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವಳು. ಐಟಿಐ ಓದಿರುವ ವಿನಾಯಕ ಹುಬ್ಬಳ್ಳಿಯ ಪ್ರಭಾವತಿ ಚಂದ್ರಶೇಖರ ಶಿವಪ್ಪಯ್ಯನಮಠ ಅವರ ಮೂವರು ಮಕ್ಕಳಲ್ಲಿ ಕೊನೆಯವ.
ಇದು ವಿಶೇಷ ಜೋಡಿ
ಸ್ವಪ್ನಾ ಕಿವುಡ ಮತ್ತು ಮೂಗ ಯುವತಿ. ಎರಡೂ ಕಿವಿ ಕೇಳುವುದಿಲ್ಲ. ಅಲ್ಪಸ್ವಲ್ಪ ತೊದಲು ಮಾತನಾಡುತ್ತಾಳೆ. ವಿನಾಯಕನಿಗೆ ಒಂದು ಕಿವಿ ಮಾತ್ರ ಕೇಳಿಸುತ್ತದೆ. ಮಾತು ಬರುತ್ತದೆ. ಈ ಇಬ್ಬರ ಪೋಷಕರಿಗೂ ತಮ್ಮ ಮಕ್ಕಳ ಮದುವೆಯ ಬಗ್ಗೆಯೇ ಚಿಂತೆಯಾಗಿತ್ತು. ಕಳೆದ ತಿಂಗಳು ಪರಸ್ಪರ ಕುಟುಂಬಗಳು ಹಾಗೂ ಸ್ವಪ್ನಾ ಮತ್ತು ವಿನಾಯಕ ಅವರ ಒಪ್ಪಿದ ನಂತರ ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಚಕ ಸಿದ್ಧು ಹಿರೇಮಠ ಈ ನವ ದಂಪತಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಪೂಜೆ ನೆರವೇರಿಸಿ ಮಂತ್ರಘೋಷಗಳನ್ನು ಹೇಳಿಕೊಟ್ಟರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವಿನಾಯಕ ತನಗೆ ಇಷ್ಟವಾದ ಹೆಂಡತಿ ಸಿಕ್ಕಿದ್ದಾಳೆ. ನನಗೆ ಒಂದು ಕಿವಿ ಕೇಳಿಸುವುದಿಲ್ಲ. ಸ್ವಪ್ನಾಗೆ ಎರಡೂ ಕಿವಿ ಕೇಳುವುದಿಲ್ಲ. ಅಲ್ಪಸ್ವಲ್ಪ ಮಾತು ಬರುತ್ತದೇ. ಸ್ವಪ್ನಾಳ ಕನಸನ್ನು ನನಸು ಮಾಡುತ್ತೇನೆ. ಉತ್ತಮ ಪತಿಯಾಗಿ ಸಂಸಾರ ನಡೆಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಸ್ವಪ್ನಾ ಕೂಡ ತನ್ನ ಮದುವೆಯ ಬಗ್ಗೆ ಖುಷಿಯಾಗಿದ್ದು, ನನಗೆ ಒಳ್ಳೆಯ ಗಂಡ ಸಿಕ್ಕಿದ್ದಾನೆ. ಇಬ್ಬರೂ ಇಷ್ಟಪಟ್ಟು ಮದುವೆಯಾಗುತ್ತಿದ್ದೇವೆ. ಪರಸ್ಪರರ ಕಷ್ಟಸುಖಗಳಲ್ಲಿ ಒಂದಾಗಿ ಬಾಳುತ್ತೇವೆ. ನಮ್ಮಿಬ್ಬರ ತಂದೆ-ತಾಯಿ ಕನಸುಗಳನ್ನು ನನಸು ಮಾಡುತ್ತೇವೆ. ನಮ್ಮಂತೆ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಮಾದರಿಯಾಗಿ ದಾಂಪತ್ಯ ಜೀವನ ಸಾಗಿಸುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದು ಈ ಜೋಡಿ ಹಕ್ಕಿಗಳ ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ಈ ಮದುವೆಗೆ ಬಂದಿದ್ದ ಆಮಂತ್ರಿತರೆಲ್ಲ ವಿವಾಹ ಆಗುತ್ತಿರುವ ನವ ಜೋಡಿ ಹಾಗೂ ಎರಡೂ ಕುಟುಂಬಗಳ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಎಲ್ಲ ಮದುವೆ ಸಮಾಭಗಳಂತೆ ಈ ಮದುವೆಯಲ್ಲಿಯೂ ಸಾಂಪ್ರದಾಯಿಕವಾಗಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲರೂ ಸ್ವಪ್ನಾ ಮತ್ತು ವಿನಾಯಕ ಜೋಡಿಯನ್ನು ಹರಸಿ ಶುಭ ಕೋರಿದ್ದಷ್ಟೇ ಅಲ್ಲ, ಇಂಥ ವಿಶೇಷ ಮದುವೆಯಲ್ಲಿ ಭಾಗಿಯಾಗಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದು ಮದುವೆ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.
ನವದಂಪತಿಗೆ ಶುಭ ಕೋರಿದ ಗಣ್ಯರು
ಈ ಮದುವೆಯಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಸೇರಿದಂತೆ ನಾನಾ ಗಣ್ಯರು ಸ್ವಪ್ನಾ-ವಿನಾಯಕ ಜೋಡಿಗೆ ಶುಭ ಕೋರಿದರು. ಬೆಂಗಳೂರಿನಲ್ಲಿ ವಿಧಾನಸಭೆ ಅಧಿವೇಶನದಲ್ಲಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಮ್ಮ ಆಪ್ತ ಸಹಾಯಕ ಸಂತೋಷ ಮಸಳಿ ಅವರನ್ನು ತಮ್ಮ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟು ನವದಂಪತಿಗೆ ಶುಭ ಕೋರಿದ್ದೂ ಕೂಡ ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಗುಡ್ಡೋಡಗಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಡೆಪ್ಯೂಟಿ ಮೇಯರ್ ಗೋಪಾಲ ಘಟಕಾಂಬಳೆ, ಮುಖಂಡರಾದ ಅಶೋಕ ತಿಮಶೆಟ್ಟಿ, ಸಂಜಯ ಹಿರೇಮಠ, ಸಿದ್ಧರಾಮಯ್ಯ ಹಿರೇಮಠ ಮುಂತಾದವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಕೋರಿದರು.