ಬೆಂಗಳೂರು: ಕರ್ನಾಟಕದ ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ದೇವಸ್ಥಾನ ಪ್ರವಾಸೋದ್ಯಮಕ್ಕೆ(Temple Tourism) ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸ್ಮಾರಕ ಪ್ರವಾಸೋದ್ಯಮಕ್ಕೂ(Monument Tourism) ಅವಕಾಶವಿರುವುದರಿಂದ ಇದಕ್ಕೆ ಉತ್ತೇಜನ ನೀಡಲು ಎರಡನ್ನೂ ಸಂಯೋಜಿಸಿ ಟೂರಿಸಂ ಸಕ್ರ್ಯೂಟ್(Tourism Cirsuit) ನಿರ್ಮಿಸುವಂತೆ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ ಹಾಗೂ ದೈವ ಸಂಕಲ್ಪ ಯೋಜನೆಗಳನ್ನು(Integrated Temple Management System- ಐಟಿಎಂಎಸ್) ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು. ಐಟಿಎಂಎಸ್ ನ್ನು ಜಾರಿಗೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನಗಳ ನಿರ್ವಹಣೆ ಬಹಳ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವಾಗಬೇಕು. ದೇವಸ್ಥಾನಗಳ ಆಸ್ತಿಗಳ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.
ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡಿ , ಪೂರ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ವ್ಯವಸ್ಥೆ ಮಾಡಿ ಆಡಳಿತ ಸುಧಾರಿಸುವ ಅಗತ್ಯವಿದೆ. ಸಾರ್ವಜನಿಕರ ದೇಣಿಗೆ ಹಾಗೂ ಆಸ್ತಿ ಒಳಗೊಂಡಿರುವುದರಿಂದ ನಿರ್ವಹಣೆಯ ಜೊತೆಗೆ ನಿಯಂತ್ರಣವೂ ಅಗತ್ಯವಾಗಿದೆ. ದೇವಸ್ಥಾನಗಳ ಅರ್ಚಕರು ಹಾಗೂ ಪೂಜಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ದೇವಸ್ಥಾನಗಳ ಸ್ವಚ್ಛತೆಗೆ ಆದ್ಯತೆ
ದೇವಸ್ಥಾನಗಳ ಸ್ವಚ್ಥತೆಯನ್ನು ಕಾಪಾಡಲು ಆದ್ಯತೆ ನೀಡಬೇಕು. ದೇವಸ್ಥಾನಗಳ ಆವರಣಗಳ ವಾತಾವರಣ ಕಲುಷಿತಗೊಳ್ಳದಂತೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್. ಎ. ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮುಂತಾದವರು ಉಪಸ್ಥಿತರಿದ್ದರು.