ವಿಜಯಪುರ: ನಾನಾ ವಸತಿ ಯೋಜನೆಗಳಡಿ(Housing Schemes) ಹೆಚ್ಚುವರಿಯಾಗಿ ಮಂಜೂರಾಗಿರುವ ಮನೆಗಳ ನಿರ್ಮಾಣವನ್ನು ಬ್ಲಾಕ್(Block) ಮಾಡಲಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟೆ(Vijayapura – Bagalakote) ಸ್ಥಳೀಯ ಸಂಸ್ಥೆಗಳ(Local Body) ವಿಧಾನ ಪರಿಷತ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda) ಅವರು ವಸತಿ ಸಚಿವ(Minister) ವಿ. ಸೋಮಣ್ಣ(V Somanni) ಅವರಿಗೆ(Letter) ಪತ್ರ ಬರೆದಿದ್ದಾರೆ.
ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ, ಬಸವ ವಸತಿ ಯೋಜನೆ, ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ ಮತ್ತು ಇಂದಿರಾ ಆವಾಸ ಯೋಜನೆಗಳಡಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಮನೆಗಳು ಮಂಜೂರಾಗಿವೆ. ಆದರೆ, ಬಸವ ವಸತಿ ಯೋಜನೆ, ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ ಹಾಗೂ ಇಂದಿರಾ ಆವಾಸ ಯೋಜನೆಗಳಡಿ 2016-17 ಮತ್ತು 2017-18ನೇ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ ಮನೆಗಳು ಮಂಜೂರಾಗಿವೆ. ಆದರೆ, ಈ ಮನೆಗಳನ್ನು ನಿರ್ಮಿಸಿಕೊಳ್ಳಬೇಕಾದ ಫಲಾನುಭವಿಗಳು ಮಹಾರಾಷ್ಟ್ರಕ್ಕೆ ಕೆಲಸಕ್ಕಾಗಿ ವಲಸೆ ಹೋಗಿದ್ದರು. ಅಲ್ಲದೇ, ನೀರು ಮತ್ತು ಮರಳು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಮನೆಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟಿಕೊಳ್ಳಲು ಆಗಿರಲಿಲ್ಲ. ನಿಗದಿತ ಸಮಯದೊಳಗೆ ಮನೆಗಳನ್ನು ನಿರ್ಮಿಸದ ಕಾರಣ ವಸತಿ ನಿಗಮಗದ ಅಧಿಕಾರಿಗಳು ಈ ಮನೆಗಳನ್ನು ಬ್ಲಾಕ್ ಮಾಡಿದ್ದಾರೆ. ಈಗ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮರಳು (ಎಂ-ಸ್ಯಾಂಡ್) ಮತ್ತು ನೀರು ಲಭ್ಯ ಇರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಈ ಬಡ ಫಲಾನುಭವಿಗಳಿಗೆ ಸೂರಿನ ಅಗತ್ಯ ಇರುವುದರಿಂದ ಈಗ ಬ್ಲಾಕ್ ಮಾಡಿರುವ ಮನೆಗಳನ್ನು ತೆರವುಗೊಳಿಸಲು ಮನವಿ ಮಾಡುತ್ತಿದ್ದಾರೆ. ಆದ್ದರಿಂದ ಬ್ಲಾಕ್ ತೆರವುಗೊಳಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಕಾಲಾವಕಾಶ ನೀಡಬೇಕು. ಅಲ್ಲದೇ, ಅನುದಾನ ಬಿಡುಗಡೆ ಮಾಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಸುನೀಲಗೌಡ ಪಾಟೀಲ ಮನವಿ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಒಟ್ಟು 12 ತಾಲೂಕುಗಳಲ್ಲಿ ಒಟ್ಟು 6193 ಮನೆಗಳ ನಿರ್ಮಾಣವನ್ನು ಬ್ಲಾಕ್ ಮಾಡಲಾಗಿದೆ. ತಾಲೂಕುವಾರು ಮಾಹಿತಿಯಂತೆ ಬಬಲೇಶ್ವರ 736, ಬಸವನ ಬಾಗೇವಾಡಿ 438, ಚಡಚಣ 386, ದೇವರ ಹಿಪ್ಪರಗಿ 347, ಇಂಡಿ 645, ಕೊಲ್ಹಾರ 358, ಮುದ್ದೇಬಿಹಾಳ 344, ನಿಡಗುಂದಿ 283, ಸಿಂದಗಿ 859, ತಾಳಿಕೋಟೆ 234, ತಿಕೋಟಾ 839 ಹಾಗೂ ವಿಜಯಪುರ ತಾಲೂಕುಗಳಲ್ಲಿ 724 ಮನೆಗಳನ್ನು ಬ್ಲಾಕ್ ಮಾಡಲಾಗಿದೆ.
ಅಲ್ಲದೇ, ಬಾಗಲಕೋಟೆ ಜಿಲ್ಲೆಯ ಒಟ್ಟು 9 ತಾಲೂಕುಗಳಲ್ಲಿ 9698 ಮನೆಗಳನ್ನು ಬ್ಲಾಕ್ ಮಾಡಲಾಗಿದೆ. ತಾಲೂಕುವಾರು ಮಾಹಿತಿಯಂತೆ ಬದಾಮಿ 1577, ಬಾಗಲಕೋಟೆ 991, ಬೀಳಗಿ 715, ಗುಳೇದಗುಡ್ಡ 564, ಹುನಗುಂದ 1023, ಇಲಕಲ್ಲ 956, ಜಮಖಂಡಿ 1050, ಮುಧೋಳ 1608 ಮತ್ತು ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ 1214 ಮನೆಗಳು ಬ್ಲಾಕ್ ಆಗಿವೆ.
ಆದ್ದರಿಂದ ಕೂಡಲೇ ಬ್ಲಾಕ್ ಆಗಿರುವ ಮನೆಗಳನ್ನು ತೆರವುಗೊಳಿಸಿ ಬಡವರು ಮನೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಿ ಅನುದಾನ ಒದಗಿಸುವಂತೆ ಸುನೀಲಗೌಡ ಪಾಟೀಲ ಅವರು ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.