ವಿಜಯಪುರ: ಮಹಿಳೆಯರು(Women) ಸಮಸ್ಯೆಗಳನ್ನು ಸವಾಲುಗಳಾಗಿ(Challanges) ಸ್ವೀಕರಿಸಿ ತಮ್ಮ ಗುರಿ ಸಾಧಿಸಲು ಶ್ರಮಿಸಿದಾಗ ಮಾತ್ರ ಸಾಧಕರಾಗಲು(Successor) ಸಾಧ್ಯ ಎಂದು ವಿಜಯಪುರ(Vijayapura) ಸಬಲಾ ಸಂಸ್ಥೆಯ ಸಂಸ್ಥಾಪಕಿ(Sabala association founder) ಹಾಗೂ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ(Bank Chairwoman) ಡಾ. ಮಲ್ಲಮ್ಮ ಯಾಳವಾರ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಆಯೋಜಿಸಲಾಗಿದ್ದ 2021-22ನೇ ವರ್ಷದ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ಪುತ್ರಿಯರ ದಿನ-ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಮಹಿಳೆಯರ ಸ್ವಾವಲಂಬನೆಯಕುರಿತು ಪ್ರಾಶಸ್ತ್ಯ ನೀಡಿದ್ದರೂ ಸಹ ಇನ್ನೂ ಅನೇಕ ಮಹಿಳೆಯರು ಶೋಷಣೆಯನ್ನುಅನುಭವಿಸುತ್ತಿದ್ದಾರೆ. ಈ ಎಲ್ಲ ಶೋಷಣೆಯನ್ನು ತಡೆಗಟ್ಟುವ ಕಾನೂನಗಳ ಬಗ್ಗೆ ಅರಿವು ಮೂಡಿಸುವದರ ಜೊತೆಗೆ ಕಾನೂನುಗಳನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಮಹಿಳಾ ವಿವಿಯ ಕುಲಸಚಿವ ಎಂ. ಎನ್. ಚೋರಗಸ್ತಿ ಮಾತನಾಡಿ, ಮಹಿಳಾ ವಿವಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿನಿಯರು ತಾವು ಪಡೆದ ಶಿಕ್ಷಣದಿಂದ ಸಮಾಜವನ್ನು ಬೆಳಗಿ, ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಸುಸ್ಥಿರ ಅಭಿವೃದ್ಧಿಯೆಡೆಗೆ ಸಾಗಲು ಉನ್ನತ ಶಿಕ್ಷಣ ಸಹಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ ವಿದ್ಯರ್ಥಿನಿಯರು ಅಭಿವೃದ್ಧಿಯ ಭರವಸೆಯ ಮೂರ್ತರೂಪವಾಗಿ ನಿಲ್ಲಲು ಸಾಧ್ಯ ಎಂದು ಹೇಳಿದರು.
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಪ್ರೇರಣೆ ಅತ್ಯಗತ್ಯ. ನಮ್ಮ ಧ್ಯೇಯ ಮತ್ತು ಗುರಿಯನ್ನು ಸಾಧಿಸಲು ಸ್ವ-ಇಚ್ಛೆಯಿಂದ ಮುಂದೆ ಬರಬೇಕು. ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಶೈಕ್ಷಣಿಕ ಪ್ರಗತಿ ಅತ್ಯಗತ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ, ಮಹಿಳಾ ವಿವಿಯ ನಾನಾ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಚಟುವಟಿಕೆಗಳು, ಕೋಶಗಳು, ನಿರ್ದೇಶನಾಲಯಗಳ ಸೌಲಭ್ಯದಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ವಿಜಯಾ ಕೋರಿಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶಾಂತಾದೇವಿ ಟಿ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಅಶ್ವಿನಿ ಕೆ. ಎನ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.