ವಿಜಯಪುರ: ಬಸವ ನಾಡು ವಿಜಯಪುರದ ವಿದ್ಯಾರ್ಥಿನಿಯೊಬ್ಬಳು ಉಕ್ರೇನ್ ಯುದ್ಧದ ಕಾರ್ಮೋಡದಿಂದ ಬಚಾವಾಗಿ ಬಂದು ತಾಯ್ನಾಡು ಸೇರಿದ್ದಾಳೆ.
ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಯುದ್ಧ ಇಡೀ ಜಗತ್ತಿನ್ನು ಆತಂಕಕ್ಕೆ ದೂಡಿದೆ. ಈ ಮಧ್ಯೆ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಇಂಥ ಸಂಕಷ್ಟಗಳ ಮಧ್ಯೆ ಎಂಬಿಬಿಎಸ್ ಕಲಿಯಲು ಉಕ್ರೇನಿಗೆ ತೆರಳಿದ್ದ ಬಸವ ನಾಡಿನ ವಿದ್ಯಾರ್ಥಿನಿ ಸ್ನೇಹಾ ಪಾಟೀಲ ಸುರಕ್ಷಿತವಾಗಿ ವಿಜಯಪುರಕ್ಜೆ ವಾಪಸ್ಸಾಗಿದ್ದು, ಉಕ್ರೇನಿನಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾಳೆ.
ವಿಜಯಪುರ ನಗರದ ಐಶ್ವರ್ಯ ನಗರ ನಿವಾಸಿ ಸ್ನೇಹಾ ಪಾಟೀಲ ಸುರಕ್ಷಿತವಾಗಿ ಮನೆಗೆ ಮರಳಿದ್ದು, ಯುವತಿಯ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಯುದ್ಧ ಪೀಡಿತ ಉಕ್ರೇನಿನಿಂದ ಬಸವ ನಾಡಿನಲ್ಲಿ ಮನೆಗೆ ಮರಳಿದ ಮಗಳನ್ನು ತಂದೆ ತಾಯಿ ಅಪ್ಪಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಆರತಿ ಬೆಳಗಿ, ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಿದ್ದಾರೆ.
ಉಕ್ರೇನಿನಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿ ಸ್ನೇಹಾ ಪಾಟೀಲ ವಿಜಯಪುರಕ್ಕೆ ಮರಳಿರುವುದು ಪೋಷಕರಲ್ಲಿ ಸಂತಸ ಮೂಡಿಸಿದೆ. ಮಗಳು ಸುರಕ್ಷಿತವಾಗಿ ಮನೆಗೆ ಬಂದಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿರುವ ಸ್ನೇಹಾ ಪಾಟೀಲ ತಾಯಿ ಸುನಿತಾ ಪಾಟೀಲ, ನಮ್ಮ ಮಗಳಂತೆ ಎಲ್ಲರೂ ಮನೆಗೆ ವಾಪಸ್ ಸುರಕ್ಷಿತವಾಗಿ ಬೇಗನೇ ಬರಲಿ ಎಂದು ಶುಭ ಹಾರೈಸಿದ್ದಾರೆ.
ಸ್ನೇಹಾ ಪಾಟೀಲ ಉಕ್ರೇನಿನಲ್ಲಿ ಎಂ ಬಿ ಬಿ ಎಸ್ 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಯುದ್ಧದ ಕಾರ್ಮೋಡ ಅವರನ್ನು ಚಿಂತಾಕ್ರಾಂತರನ್ನಾಗಿ ಮಾಡಿತ್ತು. ಇವರ ತಂದೆ ಐಶ್ವರ್ಯ ನಗರ ನಿವಾಸಿ ಗುತ್ತಿಗೆದಾರ ರಮೇಶ ಪಾಟೀಲ ಕುಟುಂಬಸ್ಥರೂ ಆತಂಕದಲ್ಲಿದ್ದರು. ಸ್ನೇಹಾ ಪಾಟೀಲ್ ಫೆ. 22ಕ್ಕೆ ಉಕ್ರೇನ್ನಿಂದ ವಿಮಾನದ ಮೂಲಕ ಪ್ರಯಾಣ ಆರಂಭಿಸಿ ಫೆ. 23ಕ್ಕೆ ಬೆಂಗಳೂರು ತಲುಪಿ ಈಗ ವಿಜಯಪುರಕ್ಕೆ ಬಂದಿಳಿದಿದ್ದಾರೆ.
ನಾನು ಸುರಕ್ಷಿತವಾಗಿ ವಾಪಸ್ಸಾಗಿದ್ದೇನೆ. ಅಪ್ಪ- ಅಮ್ಮ ಮತ್ತು ಸಂಬಂಧಿಕರನ್ನು ಕಂಡು ಸಂತೋಷವಾಗಿದೆ. ಉಕ್ರೇನಿನಲ್ಲಿ ಮೊದಲಿಗೆ ನಮಗೆ ಯುದ್ಧದ ಭಯ ಇರಲಿಲ್ಲ. ಆಗಾಗ ಅಲ್ಲಿ ಹೆಲಿಕಾಪ್ಟರ್ ಸದ್ದು ಕೇಳಿದಾಗ ಭಯ ಉಂಟಾಗುತ್ತಿತ್ತು. ಆದರೆ, ಈಗ ತಾಯ್ನಾಡಿಗೆ ವಾಪಸ್ ಆಗಿರುವುದು ಸಂತಸ ತಂದಿದೆ. ಭಾರತ ತಲುಪಿದ ಮೇಲೆ ಉಕ್ರೇನ್ ನಲ್ಲಿ ಯುದ್ಧ ಆರಂಭವಾಗಿರುವುದು ಗೊತ್ತಾಯಿತು. ನಮ್ಮ ನಂತರ ಬರಬೇಕಿದ್ದ ಮತ್ತೋಂದು ವಿನಾನ ಸಂಚಾರ ರದ್ದಾಗಿರುವುದು ತಿಳಿಯಿತು ಎಂದು ಸ್ನೇಹಾ ಪಾಟೀಲ ತಿಳಿಸಿದ್ದಾರೆ.
ಈಗಲೂ ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳದೇ ಧೈರ್ಯದಿಂದ ಇರಿ ಎಂದು ಉಕ್ರೇನಿನಲ್ಲಿ ಈಗಲೂ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಸ್ನೇಹಾ ಪಾಟೀಲ ಧೈರ್ಯ ಹೇಳಿದ್ದಾರೆ.
ಉಕ್ರೇನಿನಿಂದ ಮರಳಿರುವ ತಮ್ಮ ಕರುಳ ಕುಡಿಯನ್ನು ಪೋಷಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ತಾಯ್ನಾಡಿಗೆ ಮರಳಿ ಮನೆಗೆ ಬಂದಿರುವ ಸ್ನೇಹಾ ಪಾಟೀಲ ಕೂಡ ಸಂತಸದಿಂದದ್ದಾರೆ.
ಇನ್ನೂ ಉಕ್ರೇನಿನಲ್ಲಿ ಉಳಿದಿರುವ ವಿದ್ಯಾರ್ಥಿಗಳು ಕೂಡ ಆದಷ್ಟು ಬೇಗನೆ ಸುರಕ್ಷಿತವಾಗಿ ಆಗಿ ಮರಳಲಿ ಎನ್ನುವದೇ ಬಸವ ನಾಡು ಆಶಯವಾಗಿದೆ.