ಆಹಾರ ಖಾಲಿಯಾಗ್ತಿದೆ- ಮೊಬೈಲ್ ಡಾಟಾ ಸಿಗುತ್ತಿಲ್ಲ- ಉಷ್ಣಾಂಶ ಮೈನಸ್ 2 ಡಿಗ್ರಿಯಿದೆ- ಬೇಗ ನಮ್ಮನ್ನು ರಕ್ಷಿಸಿ- ಪೂರ್ವ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಅಳಲು

ಮಹೇಶ ವಿ. ಶಟಗಾರ

ವಿಜಯಪುರ: ಮೊಬೈಲ್ ಡಾಟಾ ಖಾಲಿಯಾಗುತ್ತಿದೆ.  ಖರೀದಿಸಲೂ ಸಾಧ್ಯವಾಗುತ್ತಿಲ್ಲ.  ಮೊಬೈಲ್ ಮೂಲಕ ಮಾತನಾಡಲೂ ಕೂಡ ಕಷ್ಟವಾಗುತ್ತಿದೆ.  ಸಿಕ್ಕಾಪಟ್ಟೆ ಛಳಿಯಿದೆ.  ಮೈನಸ್ 2 ಡಿಗ್ರಿ ಉಷ್ಣಾಂಶವಿದೆ.  ಸಂಗ್ರಹವಾಗಿರುವ ಆಹಾರ ಪದಾರ್ಥಗಳೂ ಮುಗಿಯುತ್ತಿವೆ.  ವಾಶ್ ರೂಂ ನಲ್ಲಿ ನೀರು ಬಂದ್ ಆಗಿದೆ.  ಹೊರಗಡೆ ಹೋಗುವಂತಿಲ್ಲ.  ಸದಾ ಬಾಂಬ್ ಶಬ್ದಗಳೊಂದಿಗೆ ಕಾಲ ಕಳೆಯುವಂತಾಗಿದೆ.  ಇದು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿ ಅತಂತ್ರರಾಗಿರುವ ಕರ್ನಾಟಕದ ವಿದ್ಯಾರ್ಥಿಗಳ ಗೋಳು. 

ಈಗ ಉಕ್ರೇನಿನಲ್ಲಿ ಅತಂತ್ರರಾಗಿರುವ ವೈದ್ಯ ವಿದ್ಯಾರ್ಥಿಗಳಿಗೆ ಬದುಕಲು ಆಹಾರ ಬೇಕು.  ಸಂಪರ್ಕಕ್ಕಾಗಿ ಮೊಬೈಲ್ ಡೆಟಾ ಅಗತ್ಯ.  ಬಂಕರ್ ನೊಳಗೆ ಆಶ್ರಯ ಪಡೆದಿದ್ದರೂ ಆತಂಕ ಮಾತ್ರ ತಪ್ಪಿಲ್ಲ.  ಇದು ಈ ವಿದ್ಯಾರ್ಥಿಗಳ ದೈಹಿಕ ಮಾತ್ರವಲ್ಲ ಮಾನಸಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವುದರಿಂದ ಅಲ್ಲಿನ ಪರಿಸ್ಥಿತಿ ದಿನೇ ದಿನೇ ಮತ್ತಷ್ಟು ಹದಗೆಡುತ್ತಿದೆ.  ಇದರಿಂದಾಗಿ ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿರುವ ವಿದ್ಯಾರ್ಥಿಗಳ ಗೋಳು ಹೇಳತೀರದು.  ಪಶ್ಚಿಮ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳನ್ನು ನೆರೆಯ ಪೋಲೆಂಡ್, ರೊಮೆನಿಯಾ ಸೇರಿದಂತೆ ಬೇರೆ ಬೇರೆ ದೇಶಗಳ ಗಡಿಗಳ ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ಈಗಾಗಲೇ ಯೋಜನೆ ರೂಪಿಸಿದೆ.  ಅದರಂತೆ ಈಗಾಗಲೇ ಎರಡು ವಿಮಾನಗಳಲ್ಲಿ ನೂರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆ ತರಲಾಗಿದೆ.

ಆದರೆ ಪೂರ್ವ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.  ಯುದ್ಧ ಆರಂಭವಾದಾಗಿನಿಂದ ರಷ್ಯಾ ಗಡಿಯಲ್ಲಿರುವ ಈ ಪ್ರದೇಶ ಹೆಚ್ಚು ಹಾನಿಗೀಡಾಗಿದೆ.  ಈ ವಿದ್ಯಾರ್ಥಿಗಳು ಸಧ್ಯಕ್ಕೆ ರಕ್ಷಣೆ ಪಡೆದಿರುವ ಸ್ಥಳದಿಂದ ರಷ್ಯಾ ಗಡಿ ಕೇವಲ 30 ಕಿ. ಮೀ. ದೂರದಲ್ಲಿದ್ದು, ಪ್ರತಿದಿನ ಬಾಂಬ್ ಸದ್ದು ಇವರನ್ನು ಕಂಗೆಡುವಂತೆ ಮಾಡಿದೆ.  ಈ ಪೂರ್ವ ಉಕ್ರೇನಿನ ಖಾರ್ಕಿವ್ ನಗರದಲ್ಲಿ ವಿಜಯಪುರ ಸೇರಿದಂತೆ ಕರ್ನಾಟಕದ ನಾನಾ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.  ಮೂರ್ನಾಲ್ಕು ದಿನಗಳಿಂದ ಸರಕಾರ ನೀಡಿದ ನಿರ್ದೇಶನದಂತೆ ವಿದ್ಯಾರ್ಥಿಗಳು ಒಂದು ವಾರಕ್ಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಖರೀದಿಸಿದ್ದರು.  ಆದರೆ ಈಗ ಆಹಾರ ಸಾಮಗ್ರಿಗಳು ಅಷ್ಟೇ ಅಲ್ಲ ಕುಡಿಯುವ ನೀರಿಗೂ ಕೂಡ ಅಲ್ಲಿನ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಖಾರ್ಕಿ ನಗರದ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಂಕರ್ ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ ನೂರಾರು ವಿದ್ಯಾರ್ಥಿಗಳು ಅಲ್ಲಿ ಇರುವುದರಿಂದ ಅವರ ಬಳಿ ಇದ್ದ ಆಹಾರ ಪದಾರ್ಥಗಳು ಬಹುತೇಕ ಖಾಲಿಯಾಗಿವೆ.  ಹೊರಗಡೆ ಹೋಗಿ ತಿಂಡಿ ತಿನಿಸುಗಳನ್ನು ತರಲು ಕೂಡ ಸಾಧ್ಯವಾಗುತ್ತಿಲ್ಲ.  ಆಹಾರ ಮಾರಾಟ ಮಾಡುವ ಅಂಗಡಿಗಳು ಕೆಲ ಸಮಯವಷ್ಟೇ ಓಪನ್ ಇರುತ್ತವೆ.  ಅಲ್ಲಿಯೂ ಸಿಕ್ಕಾಪಟ್ಟೆ ಜನರು ಪಾಳಿಯಲ್ಲಿ ನಿಂತಿರುವುದರಿಂದ ಅಲ್ಲಿಗೋ ಹೋಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ

ವಿಜಯಪುರದ ವಿಧ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ, ಅಮನ ಮಮದಾಪುರ,  ಕೂಡ ಈ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ಈಗ ಪರಿತಪಿಸುತ್ತಿದ್ದಾರೆ.  ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.  ಅವರೂ ಏನು ಮಾಡುತ್ತಿದ್ದಾರೆ ಎೞಬುದು ಗೊತ್ತಾಗುತ್ತಿಲ್ಲ.  ಪಶ್ಚಿಮ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.  ಇದರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.  ಆದರೆ ನಾವು ಪೂರ್ವ ಉಕ್ರೆನ್ ನ ಖಾರ್ಕಿವ್ ನಗರದಲ್ಲಿ ಇದ್ದೇವೆ.  ನಮ್ಮನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲವಾಗಿದೆ.  ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ.  ಇಂಟರ್ನೆಟ್ ಕೂಡ ಕೈ ಕೊಡುತ್ತೇನೆ.  ಮೊಬೈಲ್ ಡಾಟಾ ಕೂಡ ಖಾಲಿಯಾಗುತ್ತಿದೆ.  ರಿಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.

ನಾವೆಲ್ಲ ಭಯದಲ್ಲಿ ಬದುಕುವಂತಾಗಿದೆ.  ಸರಿಯಾಗಿ ಅನ್ನ ಆಹಾರ ಸಿಗುತ್ತಿಲ್ಲ.  ಇನ್ನು ಈ ಭಾಗದಲ್ಲಿ ಏರ್ ಲಿಫ್ಟ್ ಆರಂಭವಾಗಿಲ್ಲ.  ಸರಕಾರ ಏನು ಮಾಡುತ್ತಿದೆ ಎಂಬ ಮಾಹಿತಿ ನಮಗೆ ಗೊತ್ತಿಲ್ಲ.  ನಮ್ಮನ್ನು ಯಾವಾಗ ಇಲ್ಲಿಂದ ಕರೆದುಕೊಂಡು ಹೋಗಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.  ಇಲ್ಲಿ ನಾವು ಕರ್ನಾಟಕದ ವಿದ್ಯಾರ್ಥಿಗಳು ಆತಂಕದಿಂದ ಬದುಕುತ್ತಿದ್ದೇವೆ.  -2 ಡಿಗ್ರಿ ಉಷ್ಣಾಂಶವಿದೆ.  ಸಿಕ್ಕಾಪಟ್ಟೆ ಚಳಿ ಇದೆ.  ಸರಕಾರ ಏನೂ ಮಾಡುತ್ತಿಲ್ಲ.  ಎಲ್ಲಿ ತುರ್ತು ಅವಶ್ಯಕತೆ ಇದೆಯೋ ಅಲ್ಲಿ ಏರ್ ಲಿಫ್ಟ್ ಆಗುತ್ತಿಲ್ಲ.  ಪೋಲೆಂಡ್, ಹಂಗೇರಿ, ರೊಮೇನಿಯಾ ದಿಂದ ಏರ್ ಲಿಫ್ಟ್ ಮಾಡುತ್ತಿದ್ದಾರೆ.  ಆದರೆ, ಇತ್ತ ಯುದ್ಧಪೀಡಿತ ಪ್ರದೇಶವಾದ ಪೂರ್ವ ರಷ್ಯಾದಿಂದ ನಮ್ಮನ್ನು ಯಾವಾಗ ಕರೆದುಕೊಂಡು ಹೋಗುತ್ತಾರೆ ಎಂಬುದೇ ಚಿಂತೆಯಾಗಿದೆ.  ಭಾರತ ಸರಕಾರ ಆದಷ್ಟು ಬೇಗ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ ಎಂದು ಪೂರ್ವ ಉಕ್ರೇನಿನ ಖಾರ್ಕಿವ್ ನಲ್ಲಿ ಅತಂತ್ರರಾಗಿರುವ ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌