ದಿಢೀರ್ ಚುನಾವಣೆ ಎದುರಾದರೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಹದ ತೂಕ ಇಳಿಸಲು ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ- ಯತ್ನಾಳ ಟೀಕೆ

ವಿಜಯಪುರ: ದಿಢೀರ್ ಚುನಾವಣೆ(Sudden Election) ಎದುರಾದರೆ ಓಡಾಡಲು ಅನುಕೂಲವಾಗಲು ದೇಹದ ತೂಕ(Body Weight) ಇಳಿಸಲು ಕಾಂಗ್ರೆಸ್ ನಾಯಕರು(Congress Leaders) ಮೇಕೆದಾಟು(Mekedatu) ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸವಗೌಡ ಪಾಟೀಲ ಯತ್ನಾಳ (Basanagouda Patil Yatnal) ಟೀಕಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 50 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ.  ಸಿದ್ಧರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು.  ಎಂ. ಬಿ. ಪಾಟೀಲ ಅವರು ಐದು ವರ್ಷ ನೀರಾವರಿ ಮಂತ್ರಿಯಾಗಿದ್ದರು.  ಡಿ. ಕೆ. ಶಿವಕುಮಾರ ಅವರು ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.  ಆಗ ಯಾಕೆ ಮಾಡಲಿಲ್ಲ? ಆವಾಗ ಯಾಕೆ ಎಂ. ಬಿ. ಪಾಟೀಲ ಅವರಿಗೆ ಮೇಕೆದಾಟು ನೆನಪಾಗಲಿಲ್ಲ? ಎಲ್ಲ ಕಾಂಗ್ರೆಸ್ಸಿಗರಿಗೆ ಒಂದು ರೀತಿ ಅಸಹ್ಯಕರವಾಗಿ ವರ್ತನೆ ಮಾಡುತ್ತಿದ್ದಾರೆ.  ಪಾದಯಾತ್ರೆಗೆ ಇರುವಂತ ಪಾವಿತ್ರ್ಯತೆ ಅಲ್ಲಿ ಇಲ್ಲ.  ಮೋಜು ಮಸ್ತಿ ಮಾಡಿಕೊಂಡು ಡ್ಯಾನ್ಸ್ ಮಾಡಿಕೊಂಡು ಕುಣಿದು ಕುಪ್ಪಳಿಸಿ ಪಾದಯಾತ್ರೆಯ ಮೂಲವನ್ನೇ ಹಾಳು ಮಾಡುತ್ತಿದ್ದಾರೆ.  ಗಂಭೀರತೆ ಇಲ್ಲ.  ಏನು ಬೇಕಾದಷ್ಟು ಭೂರಿ ಭೋಜನ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಇನ್ನೋಂದು ವರ್ಷದಲ್ಲಿ ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ನಡೆಯುತ್ತಿದೆ.  ಈ ಪಾದಯಾತ್ರೆ ಕೇವಲ ಮುಂದಿನ ಚುನಾವಣೆಯ ಉದ್ದೇಶದಿಂದ ನಡೆಯುತ್ತಿದೆ.  ಜನರಿಗೆ ಇದು ಗೊತ್ತಿದೆ.  ಜನ ಇದನ್ನು ತಿಳಿದುಕೊಂಡಿದ್ದಾರೆ.  ಪಾದಯಾತ್ರೆ ಮಾಡುತ್ತಿರುವವರ ಶರೀರ ಭಾರವಾಗಿದೆ.  ಈ ಹಿನ್ನೆಲೆಯಲ್ಲಿ ವ್ಯಾಯಾಮ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ.  ರಾಜ್ಯ ಮತ್ತು ದೇಶದ ಆರೋಗ್ಯಕ್ಕಾಗಿ ಕಾಂಗ್ರೆಸ್ ಎಂದೂ ಕೆಲಸ ಮಾಡಿಲ್ಲ.  ಇದು ಸಹಿತ ತಮ್ಮ ಶರೀರದ ಆರೋಗ್ಯ ಕಾಪಾಡಲಿಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.  ಮುಂದಿನ ಚುನಾವಣೆ ದಿಢೀರನೆ ಬಂದರೆ ಇವರಿಗೆ ನಡೆಯಲು ಆಗುವುದಿಲ್ಲ.  ಕುಳಿತುಕೊಳ್ಳಲೂ ಆಗುವುದಿಲ್ಲ.  ಈ ಹಿನ್ನೆಲೆಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ಉಕ್ರೇನಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ವಿಚಾರ

ಉಕ್ರೇನಿನಲ್ಲಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಪ್ರಧಾನಿ ಕ್ಯಾಬಿನೆಟ್ ಸಭೆ ನಡೆಸಿ ನಾಲ್ಕು ಜನ ಕೇಂದ್ರ ಸಚಿವರನ್ನು ನಿಯೋಜನೆ ಮಾಡಿದ್ದಾರೆ.  ಎಲ್ಲ ದೇಶಗಳು ಭಾರತೀಯರು ಮತ್ತು ನಮ್ಮ ಮಕ್ಕಳಿಗೆ ಗೌರವ ನೀಡುತ್ತಿದ್ದಾರೆ.  ಇದು ನರೇಂದ್ರ ಮೋದಿ ಅವರ ದೊಡ್ಡ ಪವಾಡ.  ಉಕ್ರೇನಿನಲ್ಲಿ ಪಾಕಿಸ್ತಾನದ ಹೆಸರು ಹೇಳಿದರೆ ಹೊರಗಡೆ ಬಿಡುತ್ತಿಲ್ಲ.  ಅಲ್ಲಿ ಪಾಕಿಸ್ತಾನದವರು ಕೂಡ ಭಾರತದ ಹೆಸರು ಹೇಳಿ ಜೀವ ಉಳಿಸಿಕೊಳ್ಳುತ್ತಿದ್ದಾರೆ.  ಆದರೆ, ಈ ದೇಶದ ಅನ್ನತಿಂದು ಪಾಕಿಸ್ತಾನದ ಪರವಾಗಿ ಮಾತನಾಡುವವರಿಗೆ ಇದು ಒಂದು ಒಳ್ಳೆಯ ಬುದ್ದಿವಾದ ಆಗಿದೆ ಎಂದು ಅವರು ಹೇಳಿದರು.

ಬಜೆಟ್ ವಿಚಾರ

ರಾಜ್ಯ ಬಜೆಟ್ ನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಯೋಜನೆ ರೂಪಿಸಲು ಸಿಎಂ ಕೇಳಿದ್ದೇವೆ.  ವಿಮಾನ ನಿಲ್ದಾಣಕ್ಕೆ ರೂ. 120 ಕೋ. ಹೆಚ್ಚುವರಿ ಹಣ ಕೇಳಿದ್ದೇವೆ.  ವೈದ್ಯಕೀಯ ಕಾಲೇಜು ಆರಂಭಕ್ಕೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಸುಧಾಕರ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ.  ಸಾರ್ವಜನಿಕರ ಸಹೋಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕೇಳಿದ್ದೇವೆ.  ಈ ಬಾರಿ ಸರಕಾರಿ ವೈದ್ಯಕೀಯ ಕಾಲೇಜಿನ ಕನಸು ನನಸಾಗಲಿದೆ.  ಕೇಂದ್ರ ಸಾರಿಗೆ ಸಚಿವ ನಿತೀನ ಗಡ್ಕರಿ ಅವರು ವಿಜಯಪುರ ಚಿಕ್ಕೋಡಿ ರಸ್ತೆಯನ್ನು ಚತುಷ್ಪಥ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.  ವಿಜಯಪುರ ಸಿದ್ಧಾಪುರ ರಸ್ತೆಗೂ ಭೂಮಿ ಪೂಜೆ ಮಾಡಿದ್ದಾರೆ.  ವಿಜಯಪುರ-ಗುಡ್ಡಾಪುರ-ಸಾತಾರ ಮಾರ್ಗದ ಅಭಿವೃದ್ಧಿಗೂ ಮನವಿ ಮಾಡಿದ್ದೇನೆ.  ಇದರಿಂದ ಉತ್ತರ ಕರ್ನಾಟಕ- ಮುಂಬೈ ನಡುವಿನ ಅಂತರ ಸುಮಾರು 50ಕ್ಕೂ ಹೆಚ್ಚು ಕಿ. ಮೀ. ಕಡಿಮೆಯಾಗಲಿದೆ.  ಭಾರತ ಮಾಲಾ ಯೋಜನೆಯಡಿ ಇದನ್ನು ಮಾಡುವುದಾಗಿ ಹೇಳಿದ್ದಾರೆ.  ವಿಜಯಪುರದ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಲಿವೆ.  ವಿಜಯಪುರ ನಗರದ ಗಾಂಧಿಚೌಕಿನಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌