ಬಿಜೆಪಿ ಕಾರ್ಯಕರ್ತರು ಹಾಲಿನ ಮೇಲಿನ ಸತ್ವ ಹೆಚ್ಚಿಸುವ ಕೆನೆಯಿದ್ದಂತೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಬಿಜೆಪಿ ಎಂದರೆ ಹಾಲಿದ್ದಂತೆ. ಪಕ್ಷದ ಕಾರ್ಯಕರ್ತರು ಹಾಲಿನ ಸತ್ವ ಹಾಗೂ ಮಹತ್ವ ಹೆಚ್ಚಿಸುವ ಕೆನೆಯಿದ್ದಂತೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ವಿಜಯಪುರ ನಗರದ ಉಕ್ಕಲಿ ರಸ್ತೆಯಲ್ಲಿರುವ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳದ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

ಪಕ್ಷ ಮತ್ತು ಕಾರ್ಯಕರ್ತರಿಲ ಮಧ್ಯೆ ಅವಿನಾಭಾವ ಸಂಬಂಧವಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಿದ್ದಂತೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಕಾರ್ಯಕರ್ತರೇ ಪಕ್ಷದ ದೊಡ್ಡ ಮತ್ತು ಅಮೂಲ್ಯ ಸಂಪತ್ತು ಆಗಿದ್ದಾರೆ. ಪಕ್ಷ ಬೆಳೆಯಲು ಮತ್ತು ಉಳಿಯಲು ಕಾರ್ಯಕರ್ತರೇ ಮೂಲ ಕಾರಣ ಎಂದು ಅವರು ಹೇಳಿದರು.

ಕಾರ್ಯಕರ್ತರಿಗೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ. ಈ ಪ್ರಶಿಕ್ಷಣದಲ್ಲಿ ವರ್ಗದಲ್ಲಿ ಪಡೆದ ಜ್ಞಾನವನ್ನು ಕಾರ್ಯಕರ್ತರು ತಮ್ಮ ಕಾರ್ಯ ಸ್ಥಳಗಳಲ್ಲಿ ಪ್ರಸಾರ ಮಾಡುವ ಕಾರ್ಯ ಕೈಗೊಳ್ಳಬೇಕು. ಬಿಜೆಪಿ ಪಕ್ಷದ ಸಿದ್ಧಾಂತ, ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ರಮೇಶ ಜಿಗಜಿಣಗಿ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಸಂಸ್ಕಾರ, ದೇಶಾಭಿಮಾನ, ಅಪಾರ ಅನುಭವಗಳ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದೆ. ಈ ರೀತಿಯ ಕಾರ್ಯಕರ್ತರ ಪಡೆ ಉಳಿದ ರಾಜಕೀಯ ಪಕ್ಷಗಳಲ್ಲಿ ಇಲ್ಲ. ವ್ಯಕ್ತಿ ಪರಿವರ್ತನೆಯ ಮೂಲಕ ದೇಶದ ಪರಿವರ್ತನೆ ಮಾಡುವುದು, ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸುವುದು ಭಾರತೀಯ ಜನತಾ ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಪಾಟೀಲ, ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಸವರಾಜ ಯಂಕಂಚಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ಅನೀಲ ಜಮಾದಾರ, ಅಶೋಕ್ ಅಲಾಪುರ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌