ಕ್ಷಯರೋಗ ನಿರ್ಲಕ್ಷ್ಯ ಸಲ್ಲದು- ಡಾ. ಈರಣ್ಣ ಧಾರವಾಡಕರ

ವಿಜಯಪುರ: ಕ್ಷಯ ರೋಗವನ್ನು(Tuberculosis) ನಿರ್ಲಕ್ಷಿಸಿದರೆ(Neglience) ಕೇವಲ ರೋಗಿ(Patient) ಮಾತ್ರ ಆತನ ಕುಟುಂಬದ(Family) ಆರ್ಥಿಕತೆಯ ಮೇಲೂ ಪರಿಣಾಮ(Impact) ಬೀರುತ್ತದೆ. ಆದ್ದರಿಂದ ಕ್ಷಯರೋಗದ ಲಕ್ಷಣ ಕಂಡು ಬಂದರೆ ಹಿರಿಯ ನಾಗರಿಕರು(Senior Citizen) ಕೂಡಲೇ ಸೂಕ್ತ ಚಿಕಿತ್ಸೆ(Treatment) ಪಡೆಯಬೇಕು ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ(Officer) ಡಾ. ಈರಣ್ಣ ಧಾರವಾಡಕರ(Dr. Iranna Dharawadakar) ತಿಳಿಸಿದ್ದಾರೆ.

ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಜಿರಿಯಾಟ್ರಿಕ್ ಕ್ಲಿನಿಕ್ ವಿಭಾಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕ್ಷಯ ವಿಭಾಗದ ಸಹಯೋಗದಲ್ಲಿ “ಕ್ಷಯಮುಕ್ತ ವಿಜಯಪುರ-2025” ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹಿರಿಯ ನಾಗರಿಕರು ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅದನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೇ, ಕ್ಷಯ ರೋಗ ಕಂಡುಬಂದರೆ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಕ್ಷಯ ರೋಗ ತಡೆಗಟ್ಟಲು ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬಿ.ಎಲ್.ಡಿ.ಇ ಆಸ್ಪತ್ರೆ ಕ್ಷಯ ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಕ್ಷಯ ರೋಗ ನಿರ್ಮೂಲನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಕ್ಷಯ ರೋಗ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ನಾಗರಿಕರು

ಜಿರಿಯಾಟ್ರಿಕ್ ಕ್ಲಿನಿಕ್ ಡಾ.ಆನಂದ ಅಂಬಲಿ ಮಾತನಾಡಿ, ಹಿರಿಯ ನಾಗರಿಕರು ಜ್ವರ, ಪಚನಕ್ರಿಯೆ ಕುಂಠಿತ, ತೂಕದಲ್ಲಿ ವ್ಯತ್ಯಾಸ, ರಾತ್ರಿ ಬೆವರುವಿಕೆ ಲಕ್ಷಣಗಳು ಕಂಡು ಬಂದರೆ 15 ದಿನಗಳೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಕ್ಷಯ ರೋಗವನ್ನು ಈಗ ಆಧುನಿಕ ಔಷಧಿ ಬಳಸಿ, ಶೇ.100 ರಷ್ಟು ಗುಣಪಡಿಸಲು ಸಾಧ್ಯ. ಆದರೆ ಬಹಳಷ್ಟು ಹಿರಿಯ ನಾಗರಿಕರು ವಯಸ್ಸಿನ ನೆಪವೊಡ್ಡಿ ಸೂಕ್ತ ಚಿಕಿತ್ಸೆ ಪಡೆಯುವದಿಲ್ಲ. ಮಧುಮೇಹ, ಕ್ಯಾನ್ಸರ್, ರಕ್ತಹೀನತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಕ್ಷಯರೋಗದ ಲಕ್ಷಣ ಕಂಡು ಬಂದರೆ ಕೇವಲ ಎಕ್ಸರೇ (ಕ್ಷ-ಕಿರಣ) ತಪಾಸಣೆ ನಡೆಸುವ ಮೂಲಕ ಕಡಿಮೆ ವೆಚ್ಚದಲ್ಲಿ ಈ ರೋಗವನ್ನು ಪತ್ತೆ ಮಾಡಬಹುದಾಗಿದೆ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ನಿವೃತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಭರತೇಶ ಜಿ.ಕಲಗೊಂಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕ್ಷಯ ರೋಗದಿಂದ ಗುಣಮುಖರಾದವರ ಮತ್ತು ಅವರ ಕುಟುಂಬದವರ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಹಿರಿಯ ನಾಗರಿಕರಿಗಾಗಿ ಜೆನರಿಕ್ ಕ್ಲಿನಿಕ್ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಮಾತನಾಡಿ, ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ಹಿರಿಯ ನಾಗರಿಕರಿಗೆ ಕ್ಷಯ ರೋಗ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಕಲ ಸೌಲಭ್ಯ ಒದಗಿಸುದಾಗಿ ಭರವಸೆ ನೀಡಿದರು.
ಇಮಾಮ್ ಕಲಬುರಗಿ ಸ್ವಾಗತಿಸಿದರು. ಡಾ.ಸಾವಂತ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ನಾನಾ ಭಾಗಗಳಿಂದ ಆಗಮಿಸಿದ್ದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ 2030 ರೊಳಗೆ ಭಾರತವನ್ನು ಕ್ಷಯ ರೋಗ ಮುಕ್ತ ಮಾಡುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ವಿಜಯಪುರ ಆರೋಗ್ಯ ಇಲಾಖೆಯ ಕ್ಷಯ ವಿಭಾಗ ವಿಜಯಪುರ ಜಿಲ್ಲೆಯನ್ನು 2025 ರೊಳಗೆ ಕ್ಷಯ ರೋಗದಿಂದ ಮುಕ್ತವಾಗಿ ಮಾಡಲು ನಾನಾ ಜಾಗೃತಿ ಮತ್ತು ಚಿಕಿತ್ಸೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಲ್ಲದೇ ಬಿ.ಎಲ್.ಡಿ.ಇ ಆಸ್ಪತ್ರೆ ಕೂಡ ಜಿಲ್ಲೆಯನ್ನು ಕ್ಷಯ ರೋಗ ಮುಕ್ತವಾಗಿ ಮಾಡಲು ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

Leave a Reply

ಹೊಸ ಪೋಸ್ಟ್‌