ವಿಶ್ವವಿದ್ಯಾಲಯ ಮಾತ್ರವಲ್ಲ ಖಾರ್ಕಿವ್ ನಲ್ಲಿ ಎಲ್ಲ ನಾಶವಾಗಿದೆ- ಮನೆಗೆ ಬಂದ ಸಂತಸದ ಮಧ್ಯೆಯೂ ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಮಹೇಶ ವಿ. ಶಟಗಾರ

ವಿಜಯಪುರ: ಮಗಳು(Daughter) ಮನೆಗೆ ಬಂದಿದ್ದೆ ತಡ ಬಿಗಿದಪ್ಪಿಕೊಂಡ ಪೋಷಕರು(Parents Hugged) ಮುದ್ದಾಡಿ ದೇವರಿಗೆ ಧನ್ಯವಾದ(Thanked God) ತಿಳಿಸಿದರು.  ತಮ್ಮ ಮಗಳು ಸುರಕ್ಷಿತವಾಗಿ(Safely) ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ನಗರದ ನಾನಾ ಸಮುದಾಯದ(Various Community) ಜನರ ಪ್ರಾರ್ಥನೆಗಳು(Prayers) ಕಾರಣ ಎಂದು ಭಾವುಕರಾದರು.

ಇದು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಂಕರಿನಲ್ಲಿ ಐದು ದಿನ ಆತಂಕದಲ್ಲಿಯೇ ಕಳೆದು ಅಂತೂ ಇಂತೂ ರೈಲು ಹಿಡಿದು ಪೋಲಂಡ ತಲುಪಿ ಸುರಕ್ಷಿತವಾಗಿ ಬಸವ ನಾಡು ತಲುಪಿದ ವೈದ್ಯಕೀಯ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಅವರ ತಾಯಿಯ ಅಂತರಾಳದ ಮಾತು.

ಯುದ್ಧಭೂಮಿಯಿಂದ ಮನೆಗೆ ಬಂದ ಮಗಳು ಮಹಾಲಕ್ಷ್ಮಿಯನ್ನು ಬಿಗಿದಪ್ಪಿದ ತಾಯಿ, ತಂದೆ, ತಮ್ಮ

ವಿವಿಧಾಳ ತಂದೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ವಿಜಯಪುರದ್ಲಲಿ ವಾಸವಿದ್ದಾರೆ.  ತಾಯಿ ಭುವನೇಶ್ವರ ಮಲ್ಲಿಕಾರ್ಜುನಮಠ ಬೆಂಗಳೂರಿನಲ್ಲಿ ಬಿಐಟಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸಾಯಿನ್ಸ್ ವಿಭಾಗ ಮುಖ್ಯಸ್ಥರಾಗಿದ್ದಾರೆ.  ಇವರ ಇಬ್ಬರು ಮಕ್ಕಳಲ್ಲಿ ಹಿರಯ ಮಗಳು ವಿವಿಧಾ ಮಲ್ಲಿಕಾರ್ಜುನಮಠ ಡಾಕ್ಟರ್ ಆಗಲಿ ಎಂಬ ಕನಸನ್ನು ನನಸು ಮಾಡಲು ಈ ದಂಪತಿ ಮಗಳನ್ನು ಉಕ್ರೇನಿನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು.  ಇನ್ನೋಂದು ವರ್ಷ ಕಳೆದಿದ್ದರೆ ಮಗಳು ವೈದ್ಯಳಾಗಿ ಬಸವ ನಾಡಿಗೆ ಮರಳುತ್ತಿದ್ದಳು.  ಆದರೆ, ಆಗಿದ್ದೇ ಬೇರೆ.  ಏನೂ ಆಗುವುದಿಲ್ಲ ಎಂದು ಖಾರ್ಕಿವ್ ವಿಶ್ವವಿದ್ಯಾಲಯದವರು ಹೇಳಿದ್ದರೂ ಅವರ ಮಾತು ಹುಸಿಯಾಗಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿಯೇ ಬಿಟ್ಟಿತು.  ಬಾಲ್ಯದಿಂದಲೇ ಅಕ್ಕರೆಯಿಂದ ಸಾಕಿ ಸಲಹುತ್ತಿದ್ದ ಮಗಳ ಪರಿಸ್ಥಿತಿ ಕಂಡು ಪೋಷಕರು ಗೋಗರೆದಿದ್ದೇ ಬಂತು.  ಕಂಡಕಂಡವರಿಗೆ ಕರೆ ಮಾಡಿ ಮಗಳು ವಾಪಸ್ಸಾಗಲಿ ಎಂದು ಪ್ರಾರ್ಥಿಸಿದರು.  ಮುಸ್ಲಿಮ ಬಾಂಧವರೂ ಕೂಡ ಇವರ ಮನೆಗೆ ತೆರಳಿ ಮನೆಯ ಎದುರು ಸಾಮೂಹಿಕ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು.

ಈಗ ಅದೆಲ್ಲದರ ಫಲ ಸಿಕ್ಕಿದ್ದು, ಮಗಳು ವಿವಿಧಾ ಮಲ್ಲಿಕಾರ್ಜುನಮಠ ಸುರಕ್ಷಿತವಾಗಿ ವಿಜಯಪುರ ತಲುಪಿದ್ದಾಳೆ.  ಮಗಳು ಬಂದೋಡನೆ ಪೋಷಕರು ಬಿಗಿದಪ್ಪಿಕೊಂಡು ಧಾರವಾಡ ಪೇಡೆ ತಿನ್ನಿಸಿ ಸಂಭ್ರಮಿಸಿದ್ದಾರೆ.  ಸಂಬಂಧಿಕರು ಮತ್ತು ಕುಟುಂಬದ ಸ್ನೇಹಿತರು ವಿವಿಧಾಳಿಗೆ ಶಾಲು ಹೊದಿಸಿ ಹಾರ ಹಾಕಿ ಸಂಭ್ರಮಿಸಿದ್ದಾರೆ.  ಮಗಳು ವಿವಿಧಾ ಮಲ್ಲಿಕಾರ್ಜುನಮಠ ಕೂಡ ತನ್ನ ಹೆತ್ತ ತಾಯಿ ಮತ್ತು ತಂದೆಯ ಪಾದಗಳಿಗೆ ನಮಸ್ಕರಿಸುವ ಮೂಲಕ ಧನ್ಯತೆ ಅರ್ಪಿಸಿ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾಳೆ.

ಯುದ್ಧ ಭೂಮಿಯ ಕರಾಳ ದಿನಗಳನ್ನು ನೆನೆದ ವಿವಿಧಾ ಮಲ್ಲಿಕಾರ್ಜುನಮಠ ಯುದ್ಧದ ಭೀಕರತೆಯನ್ನು ಬಿಚ್ಚಿಟ್ಟಿದ್ದಾಳೆ.  ಫೆ. 24 ರಿಂದ ಯುದ್ಧ ಆರಂಭವಾಯಿತು.  ಫೆ,. 28ರ ವರೆಗೆ ಬಂಕರ್ ನಲ್ಲಿದ್ದೇವು.  ನಿರಂತರವಾಗಿ ಬಾಂಬ್, ಶೆಲ್ ಧಾಳಿ ನಡೆಯುತ್ತಿತ್ತು. ಒಂದು ಗಂಟೆ ಮಾತ್ರ ಸಾಮಾನು ಖರೀದಿಗೆ ಅನುಮತಿ ನೀಡಿದ್ದರು.  ಆ ಸಮಯದಲ್ಲಿಯೂ ಬಾಂಬ್ ಗಳ ಶಬ್ದ ಕೇಳುತ್ತಲೆ ಇತ್ತು.  ಭಯದಿಂದ ಬದುಕಿದ್ದೇವು.,  ಈಗ ಮನೆಗೆ ಬಂದು ಪೋಷಕರನ್ನು ನೋಡಿದ ಮೇಲೆ ನಾವು ಪಟ್ಟಕಷ್ಟ ಮಾಯವಾಗಿ ಸಂತಸ ಉಂಟಾಗಿದೆ.  ಬಂಕರ್ ನಲ್ಲಿದ್ದಾಗ ವಾಪಸ್ ಬರುತ್ತೇವೆ ಎಂದುಕೊಂಡಿರಲಿಲ್ಲ.  ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿತ್ತು.  ಬಂಕರ್ ನಲ್ಲಿ ನಾವು ಊಟ, ನೀರಿಗಾಗಿ ಪರದಾಡುವಂತಾಗಿತ್ತು.  ಸೈನಿಕರು ಬಂದರೂ ಎಲ್ಲರಿಗೂ ಆನ್ನಾಹಾರ ಒದಗಿಸುವುದು ಅವರಿಗೂ ಕಷ್ಟವಾಗಿತ್ತು.  ಖಾರ್ಕಿವ್ ನಿಂದ ಲಿವ್ ಗೆ ಬಂದು ಪೋಲೆಂಡಿಗೆ ಬಂದು ಅಲ್ಲಿಂದ ನವದೆಹಲಿ, ಬೆಂಗಳೂರು ಮೂಲಕ ವಿಜಯಪುರಕ್ಕೆ ಬಂದಿದ್ದೇವೆ.  ಹಾವೇರಿಯ ಯುವಕ ನವೀನ ಸಾವಿಗೀಡಾಗಿದ್ದು ನಮಗೆ ಆತಂಕ ಉಂಟು ಮಾಡಿತ್ತು.  ಆದರೂ ಎಲ್ಲರ ಪ್ರಾರ್ಥನೆಯಿಂದ ಸುರಕ್ಷಿತವಾಗಿ ಬಂದಿದ್ದೇನೆ.  ಈಗ ನಾವು ಓದುತ್ತಿದ್ದ ಯುನಿವರ್ಸಿಟಿ ಮಾತ್ರವಲ್ಲ ನಮ್ಮ ಖಾರ್ಕಿವ್ ಕೂಡ ಎಲ್ಲ ಹೋಗಿ ಬಿಟ್ಟಿದೆ.  ಪರಿಸ್ಥಿತಿ ಸುಧಾರಿಸಿದರೆ ಉಕ್ರೇನಿಗೆ ವಿದ್ಯಾಭ್ಯಾಸ ಖಂಡಿತವಾಗಿಯೂ ಹೋಗುತ್ತೇನೆ.   ಉಕ್ರೇನಿನಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಕೇಂದ್ರ ಸರಕಾರ ನಮಗೆ ಇಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ನೀಡಬೇಕು ಎಂದು ವಿವಿಧಾ ಮಲ್ಲಿಕಾರ್ಜುನಮಠ ವಿಜಯ ಕರ್ನಾಟಕ ವೆಬ್ ಜೊತೆ ಹೇಳಿಕೊಂಡಿದ್ದಾರೆ.

ಮಗಳ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ಅಂದಿನ ದಿನಗಳನ್ನು ನೆನೆದು ಭಾವುಕರಾದರು.  ನನ್ನ ಪತಿ ಸಾಕಷ್ಟು ಜನರಿಗೆ ಉಪಕಾರ ಮಾಡಿದ್ದಾರೆ.  ಆ ಪುಣ್ಯದ ಫಲ ಈಗ ಮಗಳು ಸುರಕ್ಷಿತವಾಗಿ ನಮ್ಮ ಮಡಿಲು ಸೇರಲು ಕಾರಣವಾಗಿದೆ.  ಶ್ರೀ ಗುರು ಗುರುಪಾದೇಶ್ವರ ಆಶೀರ್ವಾದ ನಮ್ಮ ಮಗಳ ಮೇಲಿದೆ.  ಆ ಶಕ್ತಿ ನಮ್ಮನ್ನು ಕಾಪಾಡಿದೆ.  ಜಾತಿ ಭೇದ ಮರೆತು ಮುಸ್ಲಿಂ ಬಾಂಧವರು ನಮ್ಮ ಮಗಳಿಗಾಗಿ ಪ್ರಾರ್ಥಿಸಿದ್ದಾರೆ.  ಅವರು ತೋರಿಸಿರುವ ಪ್ರೀತಿಯನ್ನು ಜನ್ಮದುದ್ದಕ್ಕೂ ಮರೆಯಲು ಸಾಧ್ಯವಿಲ್ಲ.  ಯುದ್ಧದ ಆರಂಭದಲ್ಲಿ ಮಗಳು ಬೇರೆ ಎಲ್ಲಿಯೋ ಬಾಂಬ್, ಶೆಲ್ ಶಬ್ದ ಬರುತ್ತಿದೆ ಎಂದು ಹೇಳುತ್ತಿದ್ದಳು.  ಆದರೆ, ನಂತರ ವಿವಿಧಾ ಮಲ್ಲಿಕಾರ್ಜುನಮಠ ವಾಸವಿದ್ದ ಸ್ಥಳದಲ್ಲಿಯೇ ಬಾಂಬ್ ಧಾಳಿ ಮತ್ತು ಶೆಲ್ ಧಾಳಿ ಉಂಟಾಗಿತ್ತು.  ಇದನ್ನು ಕೇಳಿ ನಮಗೂ ಆತಂಕ ಉಂಟಾಗಿತ್ತು.  ಈಕೆ ರೈಲಿನಲ್ಲಿ ಬರುವಾಗ ಶೆಲ್ ಧಾಳಿಯನ್ನು ಕಣ್ಣಾರೆ ಕಂಡು ಮತ್ತೆ ಬಂಕರ್ ಗೆ ತೆರಳಲು ನಿರ್ಧರಿಸಿದ್ದಳು.  ಆದರೆ, ಸ್ನೇಹಿತರೊಂದಿಗೆ ಧೈರ್ಯ ಮಾಡಿ ಪೋಲೆಂಡ್ ಮೂಲಕ ಬಂದಿದ್ದಾರೆ ಎಂದು ವಿಜಯ ಕರ್ನಾಟಕ ವೆಬ್ ಗೆ ತಿಳಿಸಿದರು.

 

ಮಗಳ ಶಿಕ್ಷಣ ಈಗ ಅರ್ಧಕ್ಕೆ ನಿಂತಂತಾಗಿದೆ.  ಪ್ರಧಾನಿ ನರೇಂದ್ರ ಮೋದಿ ಎಲ್ಲ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.  ಅವರು ಅಸಾಧ್ಯವಾದುದನ್ನು ಮಾಡಿ ತೋರಿಸಿದ್ದಾರೆ.  ರಷ್ಯಾ ಆರು ಗಂಟೆಗಳ ಕಾಲ ಕದನ ವಿರಾಮ ಘೋಷಿಸಲು ಮೋದಿಯೇ ಕಾರಣ.  ಇದು ನರೇಂದ್ರ ಮೋದಿ ವಿಶ್ವದ ನಾನಾ ರಾಷ್ಟ್ರಗೊಂದಿಗೆ ಹೊಂದಿರುವ ಸಂಬಂಧ ಮತ್ತು ನಾಯಕತ್ವಕ್ಕೆ ಸಾಕ್ಷಿ.  ಆಧ್ಯಾತ್ಮಿಕ ಮತ್ತು ಧೈರ್ಯವಂತ ನಾಯಕರಾಗಿರುವ ನರೇಂದ್ರ ಮೋದಿ ಅವರ ನೇತೃತ್ವದ ನಮ್ಮೆಲ್ಲರಿಗೂ ಅವಶ್ಯವಾಗಿದೆ.  ನರೇಂದ್ರ ಮೋದಿ ದೇಶದ ಶಕ್ತಿ.  ಅವರು ಈಗ ನಮ್ಮ ಮಗಳಿಗೆ ಇಲ್ಲಿಯೇ ಶಿಕ್ಷಣ ಮುಂದುವರೆಸಲು ವ್ಯವಸ್ಥೆ ಮಾಡಿದರೆ ನಮಗೆಲ್ಲರಿಗೂ ಒಳ್ಳೆಯದಾಗುತ್ತದೆ.  ಅವರು ಮಾಡಿಯೇ ಮಾಡುತ್ತಾರೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಭುವನೇಶ್ವರ ಮಲ್ಲಿಕಾರ್ಜುನಮಠ ತಿಳಿಸಿದರು.

ಒಟ್ಟಾರೆ, ಮಲ್ಲಿಕಾರ್ಜುನಮಠ ಕುಟುಂಬದಲ್ಲಿ ಈಗ ಆತಂಕದ ಛಾಯೆ ಮಾಯವಾಗಿದ್ದು, ಮುದ್ದಿನ ಮನೆಗೆ ಮಹಾಲಕ್ಷ್ಮಿಯಂತಿರುವ ಮುದ್ದಿನ ಮಗಳು ಸುರಕ್ಷಿತವಾಗಿ ಬಂದಿರುವುದಕ್ಕೆ ಈ ಕುಟುಂಬದಲ್ಲಿ ಈಗ ಸಂತಸ ತುಂಬಿ ತುಳುಕುವಂತೆ ಮಾಡಿದ್ದು ಗಮನ ಸೆಳೆಯಿತು.

Leave a Reply

ಹೊಸ ಪೋಸ್ಟ್‌