ವಿಜಯಪುರ: ಶಿಕ್ಷಣದ ಜೊತೆಗೆ ಮಹಿಳೆಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಬೇಕಾಗಿದೆ. ಇಂದಿನ ಮಹಿಳೆಯರಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮಥ್ರ್ಯಗಳನ್ನು ತೋರಿಸುವ ಶಕ್ತಿ ಇದೆ ಎಂದು ಕೌಟುಂಬಿಕ ನ್ಯಾಯಾಲದ ನ್ಯಾಯಧೀಶೆ ಕೆ. ಭಾಗ್ಯ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕು. ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಬೇಗನೆ ಮದುವೆ ಮಾಡಿದರೆ ಜವಾಬ್ದಾರಿ ಮುಗಿತ್ತದೆ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಉತ್ತಮ ಶಿಕ್ಷಣ, ಸ್ವಾವಲಂಬನೆ, ತಿಳುವಳಿಕೆ ಮೂಡಿಸಿ ಹೆಣ್ಣು ಮಕ್ಕಳ ಭವಿಷ್ಯವನ್ನು ಸುಧಾರಿಸುವ ಕೆಲಸವನ್ನು ಪಾಲಕರು ಮಾಡಬೇಕಾಗಿದೆ. ಪುರುಷರ ಪ್ರೀತಿ, ಸಹಕಾರವೇ ಮಹಿಳೆಯ ಸಾಧನೆಗೆ ಪೂರಕವಾಗಿದೆ. ಜೀವನದ ರಥ ನಡೆಸುವಲ್ಲಿ ಪುರಷರಷ್ಟೇ ಮಹಿಳೆಯರ ಪಾತ್ರವಿದೆ ಎಂದು ಹೇಳಿದರು.
ಪ್ರಾಚಾರ್ಯ ಎಸ್. ಜಿ. ರೂಡಗಿ ಮಾತನಾಡಿ, ಇಂದು ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳಿವೆ. ಸ್ವಾತಂತ್ರ ಇದೆ. ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಾದ ಅವಶ್ಯಕತೆಯಿದೆ. ಓರ್ವ ಹೆಣ್ಣು ವಿದ್ಯಾವಂತೆಯಾದರೆ ಅದು ಇಡೀ ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಕೋವಿಡ್‍ನಿಂದ ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಜೀವನೋಪಾಯಕ್ಕಾಗಿ ಉಚಿತವಾಗಿ ಹೊಲಿಗೆ ಯಂತ್ರ ಹಾಗೂ ಆಹಾರ ಕಿಟ್ ವಿತರಿಸಲಾಯಿತು. ಅಲ್ಲದೇ, ಮಹಿಳಾ ಕಾರ್ಮಿಕರಿಗೆ ದಿನಸಿಗಳನ್ನು ನೀಡಲಾಯಿತು.
ರೆಡ್‍ಕ್ರಾಸ್ ಸೊಸೈಟಿ ಕಾರ್ಯದರ್ಶಿ ಎಸ್. ಜಿ. ಮುರನಾಳ ಹಾಗೂ ನ್ಯಾಯವಾದಿ ಸುಜಾತಾ ಮಾನೆ ಸಿಂಧೆ, ಮಹಿಳಾ ಕಾರ್ಮಿಕರು, ಕಾಲೇಜು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪೂರ್ವ, ಸೌಮ್ಯ, ಸ್ನೇಹಾ ಪ್ರಾರ್ಥಿಸಿದರು. ಪ್ರೊ. ಎ. ಎಂ. ತುಪ್ಪದ ಸ್ವಾಗತಿಸಿದರು. ಎಸ್. ಎಸ್. ಕನ್ನೂರ ನಿರೂಪಿಸಿದರು. ಮಹಿಳಾ ವೇದಿಕೆ ಮುಖ್ಯಸ್ಥೆ ಡಾ, ಮಹಾನಂದ ಪಾಟೀಲ ವಂದಿಸಿದರು.