ಐದು ರಾಜ್ಯಗಳ ಚುನಾವಣಾ ಫಲಿತಾಂಶ: ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ- ಸಿಎಂ ಬೊಮ್ಮಾಯಿ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಅವ್ಉ ಮಾತನಾಡುತ್ತಿದ್ದರು.

ಈ ಫಲಿತಾಂಶ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಮುನ್ನಡೆಯಲು ನೆರವಾಗಲಿದೆ. ನಮ್ಮ ಸರಕಾರ ಬಜೆಟ್ ನಲ್ಲಿ ಈಗಾಗಲೇ ನೀಡಿರುವ ಉತ್ತಮ ಕಾರ್ಯಕ್ರಮಗಳನ್ನು ಒಂದು ಅನುಷ್ಠಾನ ಮಾಡುವ ಮೂಲಕ ಸುಭಿಕ್ಷ, ಸುಭದ್ರವಾದ, ನವ ಕರ್ನಾಟಕವನ್ನು ನಿರ್ಮಿಸಲಾಗುವುದು. ಯೋಜನೆಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಿ ಜನರ ವಿಶ್ವಾಸವನ್ನು ಗಳಿಸಿ 2023 ರಲ್ಲಿ ಈ ಫಲಿತಾಂಶದಂತೆಯೇ ಕರ್ನಾಟಕದ ಜನತೆ ಬಿಜೆಪಿಯನ್ನು ಪುನರಾಯ್ಕೆ ಮಾಡಿ ಐದು ವರ್ಷ ಅಧಿಕಾರ ನೀಡಲಿದ್ದಾರೆ ಎಂಬ ವಿಶ್ವಾಸ ವಿದೆ ಎಂದು ಅವರು ಹೇಳಿದರು.

ಜನತೆಗೆ, ಪಕ್ಷಕ್ಕೆ, ಶಾಸಕರಿಗೆ ಇಂದಿನ ಚುನಾವಣಾ ಫಲಿತಾಂಶ ಸಕಾರಾತ್ಮಕ ಉತ್ತೇಜನ ನೀಡಿದೆ. ನಾಲ್ಕು ರಾಜ್ಯ ಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಸರಕಾರ ರಚನೆ ಮಾಡಲು ಜನರ ಆಶೀರ್ವಾದ ಪಡೆದುಕೊಂಡಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿಯವರ ನೇತೃತ್ವದಲ್ಲಿ ಮೋದಿ ಮತ್ತು ಯೋಗಿಯ ಡಬಲ್ ಎಂಜಿನ್ ಸರಕಾರ ಉತ್ತರ ಪ್ರದೇಶವನ್ನು ಮುನ್ನಡೆಸುವ ಕೆಲಸ ಮಾಡುತ್ತಿದೆ. ಐದು ರಾಜ್ಯಗಳ ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಮ್ಮ ನಾಯಕರಾದ ನರೇಂದ್ರ ಮೋದಿಯವರು, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಹಾಗೂ ಸಂಬಂಧಿಸಿದ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ತಿಳಿಸಿದರು.

ಪ್ರತಿಪಕ್ಷ ಪಕ್ಷ ಧೂಳಿಪಟ

ನರೇಂದ್ರ ಮೋದಿಯವರ ನಾಯಕತ್ವದಲ್ಲಿರುವ ಕಾರ್ಯಕ್ರಮಗಳು, ಬಡವರ, ರೈತರ, ಹೆಣ್ಣು ಮಕ್ಕಳ ಪರವಾಗಿವೆ. ಕೋವಿಡ್ ನಿರ್ವಹಣೆ, ಆರ್ಥಿಕ ಸಬಲೀಕರಣ ಮುಂತಾದ ಕೆಲಸಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡುವ ಪಣವನ್ನು ನಮ್ಮ ನಾಯಕರು ತೊಟ್ಟಿದ್ದಾರೆ. ನರೇಂದ್ರ ಮೋದಿಯವರ ನವ ಭಾರತ ನಿರ್ಮಾಣದ ಕನಸು-ಸಬ್ ಕಾ ಸಾಥ್, ಸಬ್ ಕಾ ವಿಕಾಸ್. ಇದು ಅಕ್ಷರಶಃ ದೇಶದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಭಾರತದ ಉದ್ದಗಲಕ್ಕೂ ಎಲ್ಲರೂ ಒಪ್ಪಿಕೊಳ್ಳುವ ಏಕಮೇವ ನಾಯಕ ನರೇಂದ್ರ ಮೋದಿ ಎನ್ನುವುದು ಪುನರ್ ಸ್ಥಾಪನೆಯಾಗಿದೆ. ಅವರ ನಾಯಕತ್ವದಲ್ಲಿ ಕರ್ನಾಟಕವೂ ಸೇರಿದಂತೆ ಸಧೃಢ ರಾಜ್ಯ ಮತ್ತು ದೇಶ ಕಟ್ಟಲು ಸಂಕಲ್ಪವನ್ನು ಇಂದು ತೊಟ್ಟಿದ್ದೇವೆ. ಇನ್ನಷ್ಟು ಶಕ್ತಿ, ಶ್ರಮದಿಂದ ಕರ್ನಾಟಕ ಕಟ್ಟುವ ಉತ್ಸಾಹ , ಪ್ರೋತ್ಸಾಹ, ಪ್ರೇರಣೆಯನ್ನು ಚುನಾವಣೆ ನಮಗೆ ಕೊಟ್ಟಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಏಪ್ರಿಲ್ ನಲ್ಲಿ ಪ್ರಧಾನಿ ಕರ್ನಾಟಕಕ್ಕೆ ಭೇಟಿ

ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಒಂದು ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ಅವರ ಮೂಲಕ ಜನರ ಮುಂದೆ ಅನಾವರಣ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌