ಗ್ರಾ. ಪಂ. ಸದಸ್ಯರ ಗೌರವ ಧನ ಹೆಚ್ಚಳ ವಿಚಾರ- ಸಿಎಂ ಭೇಟಿಯಾಗಿ ಒತ್ತಾಯಿಸಿದ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಕನಿಷ್ಠ ರೂ. 10 ಸಾವಿರ ಮಾಸಿಕ ಗೌರವ ಧನ ನೀಡಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ವಿನಂತಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಎಂ ಎಲ್ ಸಿ ಸುನಿಲಗೌಡ ಪಾಟೀಲ

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯರುಗಳಿಗೆ ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಕುರಿತು ನಾನು ಸತತವಾಗಿ ಸಂಬಂಧಿಸಿದ ಸಚಿವರಿಗೆ ಮನವಿ ಮಾಡುತ್ತಾ ಬಂದಿದ್ದೇನೆ. ಈಗ ಸದ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ರೂ. 3000, ಉಪಾಧ್ಯಕ್ಷರಿಗೆ ರೂ. 2000 ಹಾಗೂ ಸದಸ್ಯರಿಗೆ ರೂ. 1000 ಗೌರವಧನ ನೀಡುತ್ತಿರುವುದು ಇಂದಿನ ದಿನಗಳಲ್ಲಿ ಯಾವುದಕ್ಜೂ ಸಾಲುವುದಿಲ್ಲ. ಈ ಕುರಿತಂತೆ ನಾನು ವಿಧಾನ ಪರಿಷತ್ ಒಳಗೆ ಹಾಗೂ ಹೊರಗೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ರೂ. 10000 ಕನಿಷ್ಠ ಮಾಸಿಕ ಗೌರವ ಧನ ನೀಡಬೇಕು. ಕಚೇರಿ ಕಾರ್ಯ ನಿಮಿತ್ತ ಜಿಲ್ಲಾ, ತಾಲೂಕು ಕೇಂದ್ರಗಳಿಗೆ ತಿರುಗಾಡಲು ಗ್ರಾಮ ಪಂಚಾಯಿತಿ ಸದಸ್ಯರಿಗೆ ಉಚಿತ ಬಸ್ ಪಾಸ್ ನೀಡಬೇಕು. ಗ್ರಾಮ ಪಂಚಾಯಿತಿ ಸದಸ್ಯರು ನಿವೃತ್ತಿಯಾದ ನಂತರ ಪಿಂಚಣಿ ಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿದರು.

ವಿಶೇಷ ಮುತುವರ್ಜಿ ವಹಿಸಿ ರಾಜ್ಯದ 96000 ಗ್ರಾಮ ಪಂಚಾಯಿತಿ ಸದಸ್ಯರ ಮಾಸಿಕ ಗೌರವಧನ ರೂ. 10 ಸಾವಿರಕ್ಕೆ ಹೆಚ್ಚಿಸುವುದು, ಉಚಿತ ಬಸ್ ಪಾಸ್ ಒದಗಿಸುವುದು ಹಾಗೂ ಪಿಂಚಣಿ ನೀಡುವುದು ಈ ಮೂರು ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಸುನೀಲಗೌಡ ಪಾಟೀಲ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌