ವಿಜಯಪುರ ಜಿಲ್ಲಾಧಿಕಾರಿ ಮಾದರಿ ನಡೆ- ಉಕ್ರೇನಿನಿಂದ ಮರಳಿದ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಭೆ- ಹಿತ ಕಾಯಲು ಜಿಲ್ಲಾಡಳಿತ ಬದ್ಧ ಎಂದ ಡಿಸಿ

ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಮಾದರಿ ಕೆಲಸ(Model work) ಮಾಡಿದ್ದಾರೆ.  ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukrine) ಮರಳಿದ(Return) ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು(Students) ಮತ್ತು ಪೋಷಕರೊಂದಿಗೆ(Parents) ಸಭೆ(Meeting) ನಡೆಸಿ ಧೈರ್ಯ ತುಂಬಿದ್ದಾರೆ.

ವಿಜಯಪುರ ಜಿಲ್ಲೆಯ 16 ಜನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾರೆ.  ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದ್ದರಿಂದ ಅತಂತ್ರರಾಗಿದ್ದ ಎಲ್ಲ ವಿದ್ಯಾರ್ಥಿಗಳು ಈಗ ಬಸವ ನಾಡಿಗೆ ಸುರಕ್ಷಿತವಾಗಿ ಪಾವಸ್ಸಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಪಿ. ಸುನೀಲ ಕುಮಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.  ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಸಮಾಧಾನ ಚಿತ್ತದಿಂದ ಸಭೆ ವಿಷಯ ಆಲಿಸಿದ ಅವರು, ಈಗ ತುರ್ತಾಗಿ ಜಿಲ್ಲಾಡಳಿತದಿಂದ ಬೇಕಿರುವ ಸಹಾಯ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಅಗತ್ಯವಾಗಿರುವ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದರು.  ಅಲ್ಲದೇ, ವಿದ್ಯಾರ್ಥಿಗಳ ಹಿತರಕ್ಷಣೆಗೆ ವಿಜಯಪುರ ಜಿಲ್ಲಾಡಳಿತ ಬದ್ಧವಾಗಿದೆ.  ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ನೈತಿಕ ಸ್ಥೈರ್ಯ ತುಂಬಿದರು.

ಉಕ್ರೇನಿನಿಂದ ಮರಳಿದ ವಿದ್ಯಾರ್ಥಿಗಳು, ಪೋಷಕರೊಂದಿಗೆ ಡಿಸಿ ಪಿ. ಸುನೀಲ ಕುಮಾರ ಸಭೆ ನಡೆಸಿದರು

ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿರುವುದು ಪೋಷಕರಲ್ಲಿ ಸಂತಸ ಮೂಡಿಸಿದೆಯಾದರೂ ಮುಂದಿನ ದಿನಗಳಲ್ಲಿ ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಇದನ್ನು ಓದಿ:

https://basavanadu.com/2022/03/09/vijayaprua-four-students-who-struck-in-war-hit-ukraine-return-safely-to-basava-nadu-parents-happy/

ಈ ಹಿಂದೆ ಉಕ್ರೇನ್‍ನಲ್ಲಿ ಸಿಲುಕಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಹಾಗೂ ಜಿಲ್ಲೆಗೆ ಕರೆತರಲು ಸರಕಾರ ಹಾಗೂ ಜಿಲ್ಲಾಡಳಿತ ನಿರಂತರವಾಗಿ ಅವರ ಸಂಪರ್ಕದಲ್ಲಿದ್ದು, ಪೋಷಕರೊಂದಿಗೆ ಸಭೆ ನಡೆಸಿ ಎಲ್ಲರನ್ನೂ ಅತ್ಯಂತ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಂತಾಗಿದೆ ಎಂದು ಅವರು ತಿಳಿಸಿದರು.

ಇನ್ನು ಮುಂದೆಯೂ ಕೂಡ ಉಕ್ರೇನ್‍ನಿಂದ ಜಿಲ್ಲೆಗೆ ಮರಳಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪಾಲಕರು ಲಿಖಿತ ರೂಪದಲ್ಲಿ ಒಂದು ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರೆ, ಅದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ವಿಷಯದಲ್ಲಿ ಯಾವುದೇ ಅನಗತ್ಯವಾದ ಗೊಂದಲಗಳಿಗೆ ಒಳಗಾಗಬಾರದು.  ಊಹಾಪೋಹಗಳಿಗೆ ಕಿವಿಗೊಡಬಾರದು.  ಆತ್ಮವಿಶ್ವಾಸದಿಂದಿದ್ದು, ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಿ,  ಈ ನಿರೀಕ್ಷಿತ ಘಟನೆಯಿಂದ ಸಹಜವಾಗಿಯೇ ಎಲ್ಲರೂ ಆತಂಕಗೊಳಗಾಗಿದ್ದು, ಧೈರ್ಯದಿಂದ ಇದನ್ನು ಎದುರಿಸೋಣ ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಈ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ವಿಶ್ವಾಸ ಕಳೆದುಕೊಳ್ಳಬಾರದು ಎಂದು ಡಿಸಿ ಪಿ. ಸುನೀಲ ಕುಮಾರ ತಿಳಿಸಿದರು.

ಇದನ್ನು ಓದಿ:

ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ಈ ಸಂದರ್ಭದಲ್ಲಿ ಮಾತನಾಡಿದ ಪೋಷಕರು ಸಂಕಷ್ಟದ ಈ ಸಮಯದಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ತೋರಿದ ಬದ್ಧತೆ ಹಾಗೂ ಕಾಳಜಿಯನ್ನು ಶ್ಲಾಘಿಸಿದರು.  ಜೀವಗಳೇನೋ ಬದುಕಿ ಬಂದಿವೆ, ಆದರೆ ಅವರಿಗೊಂದು ಜೀವನವೂ ಬೇಕು.  ಅದಕ್ಕಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರವಾದ ರೀತಿಯಲ್ಲಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.  ಈ ಮಕ್ಕಳನ್ನು ಯುದ್ಧ ಸಂತ್ರಸ್ತರೆಂದು ಘೋಷಿಸಿ, ಪ್ರಮಾಣ ಪತ್ರ ನೀಡಬೇಕು.  ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳನ್ನು ಉಕ್ರೇನಿಗೆ ಕಳುಹಿಸುವ ಧೈರ್ಯವಿಲ್ಲ,  ಆದ್ದರಿಂದ ಅಲ್ಲಿನ ಶೈಕ್ಷಣಿಕ ವೆಚ್ಚವನ್ನು ಇಲ್ಲಿಯೇ ಭರಿಸಿ, ಕಾಲೇಜುಗಳಲ್ಲಿ ಪ್ರವೇಶ ಒದಗಿಸಬೇಕು.  ವಿದ್ಯಾರ್ಥಿಗಳು ಓದುತ್ತಿರುವ ಸೆಮಿಸ್ಟರ್‍ನಲ್ಲಿಯೇ ಮುಂದುವರೆಯುವಂತಾಗಬೇಕು,  ಬೇಕಿದ್ದರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಮಕ್ಕಳನ್ನು ಕಳುಹಿಸಲು ಸಿದ್ಧವಾಗಿದ್ದೇವೆ ಎಂದು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ, ತಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಅಂತೆಯೇ ವಿದ್ಯಾರ್ಥಿಗಳೂ ಕೂಡ ಸರಕಾರ ಹಾಗೂ ಜಿಲ್ಲಾಡಳಿತ ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಲ್ಲಿ ತೋರಿದ ಬದ್ಧತೆ ಹಾಗೂ ಕಾಳಜಿಯನ್ನು ಪ್ರಶಂಸಿಸಿ, ಈ ಅನಿರೀಕ್ಷಿತ ವಿದ್ಯಮಾನದಿಂದ ನಾವೆಲ್ಲರೂ ಬಹಳ ಆತಂಕಗೊಳಗಾಗಿದ್ದೇವೆ. ಆದರೆ ನಮಗೆ ನಮ್ಮ ದೇಶದಲ್ಲಿಯೇ ಶಿಕ್ಷಣ ಮುಂದುವರೆಸಲು, ಅಲ್ಲಿನ ಶೈಕ್ಷಣಿಕ ವೆಚ್ಚದಷ್ಟೇ ಇಲ್ಲಿಯೂ ಭರಿಸುವಂತೆ, ನಾವು ಓದುತ್ತಿರುವ ತರಗತಿಗಳಲ್ಲಿಯೇ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಭೆಯಲ್ಲಿ ಉಕ್ರೇನ್ ಯುದ್ಧ ಸಂತ್ರಸ್ತ ಜಿಲ್ಲೆಯ ವಿದ್ಯಾರ್ಥಿಗಳಾದ ಶ್ರದ್ಧಾ ನಾಯ್ಕರ, ಪೂಜಾ ಲೋಣಿ, ವೈಭವಿ ಕರ್ನೆ, ಕಾರ್ತಿಕ, ಮಹ್ಮದ್ ಇಸ್ಮಾಯಿಲ್, ಜೈ ಕಾರ್ತಿಕ ಅವಟಿ, ವಿವಿಧಾ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ರೋಹನ್ ಪಾಟೀಲ, ಕಾರ್ತಿಕ ವಸ್ತ್ರದ, ಶೃತಿ ನಾಯ್ಕ, ಸುಚಿತ್ರಾ ಕವಡಿಮಟ್ಟಿ, ಹರ್ಷ ನ್ಯಾಮಗೊಂಡ, ಅಮನ ಧರ್ಮರಾಯ ಮಮದಾಪೂರ, ಪ್ರೀತಿ ನಾಡಗೌಡ ಸೇರಿದಂತೆ ಉಕ್ರೇನ್ ಯುದ್ಧ ಸಂತ್ರಸ್ತ ಜಿಲ್ಲೆಯ ವಿದ್ಯಾರ್ಥಿಗಳ ಪಾಲಕರಾದ ಧರ್ಮರಾಯ ಮಮದಾಪೂರ, ವಿದ್ಯಾಧರ ನ್ಯಾಮಗೊಂಡ, ರಾಜೇಂದ್ರ ಪಾಟೀಲ, ರವೀಂದ್ರ ನಾಯ್ಕ, ಕಾಶೀನಾಥ ಇಟ್ಟಂಗಿಹಾಳ, ಬಸವರಾಜ ನಾಡಗೌಡ, ಶ್ರೀಶೈಲ ವಸ್ತ್ರದ, ಮಹ್ಮದ ನಾಗೂರ, ಮಲ್ಲನಗೌಡ ಕರಡಿಮಟ್ಟಿ, ಬಸವರಾಜ ಅವಟಿ,ಅಪರ್ ಜಿಲ್ಲಾಧಿಕಾರಿ ರಮೇಶ ಕಳಸದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌