ವಿಜಯಪುರ: ದೇಶದ ರಾಜಕೀಯ ವ್ಯವಸ್ಛೆಯಲ್ಲಿ(National Political System) ಕೇವಲ ಎರಡು ರಾಜಕೀಯ ಪಕ್ಷಗಳು(Dual Party) ಅಂದರೆ ದ್ವಿಪಕ್ಷ ಪದ್ಧತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ(Demand) ರಾಷ್ಟ್ರಪತಿ(President) ಮತ್ತು ಪ್ರಧಾನಿಗಳನ್ನು(Prime Minister) ಭೇಟಿ ಮಾಡಿ ಒತ್ತಾಯಿಸಲು ಬಸವ ನಾಡಿನ 63 ವರ್ಷದ ಹಿರಿಯ ಧುರೀಣರೊಬ್ಬರು ಪಾದಯಾತ್ರೆ(Padayatre) ಆರಂಭಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಿಂದ ಆರಂಭವಾದ ಈ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸ್ವತಃ ಶ್ರೀಶೈಲ ಜಗದ್ಗುರುಗಳು, ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಪ್ರೊ. ರಾಜು ಆಲಗರೂ ಸೇರಿದಂತೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೋಂಡಿದ್ದರು.
ವೃತ್ತಿಯಲ್ಲಿ ಕೃಷಿಕರಾಗಿರುವ ಮತ್ತು ಪ್ರವೃತ್ತಿಯಲ್ಲಿ ರಾಜಕೀಯದ ನಂಟೂ ಹೊಂದಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಮೂಲದ ಬಾಪುರಾಯ ಕುಲಪ್ಪ ಲೋಣಿ ಸಧ್ಯಕ್ಕೆ ಲೋಣಿ ಬಿ. ಕೆ. ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ದೇಶದಲ್ಲಿ ದ್ವಿಪಕ್ಷ ಪದ್ಧತಿ ಜಾರಿಗೆ ಬರಬೇಕು. ಆಗ ಮಾತ್ರ ಬಹುಪಕ್ಷಿಯ ವ್ಯವಸ್ಥೆ ತೊಲಗಿ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂದು ಬಾಪುರಾಯ ಕುಲಪ್ಪ ಲೋಣಿ ಪ್ರತಿಪಾದಿಸುತ್ತಲೇ ಬಂದಿದ್ದರು. ಇವರ ಈ ಮಾತನ್ನು ಅಂದಿನಿಂದ ಇಂದಿನವರೆಗೂ ಇವರ ಸ್ನೇಹಿತರು ಮತ್ತು ರಾಜಕೀಯ ಧುರೀಣರು ಕೆಣಕುತ್ತ ಯಾವಾಗ ಪಾದಯಾತ್ರೆ ಮಾಡುತ್ತೀರಿ ಎಂದು ಛೇಡಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ಅಲ್ಲಿದ್ದ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಿದ ಮೇಲೆ ತಮ್ಮ ಮನದಲ್ಲಿರುವ ಬೇಡಿಕೆ ಈಡೇರಿಸುವ ಎಂದು ಪ್ರಾರ್ಥಿಸಿದ್ದಾರೆ. ಅಲ್ಲಿಂದ ಬಂದ ತಕ್ಷಣವೇ ತಮ್ಮ ಸಾಹಸಕ್ಕೆ ಮುಂದಾಗಿದ್ದಾರೆ.
ಈ ಪಾದಯಾತ್ರೆ ಉದ್ಘಾಟನೆಯ ಅಂಗವಾಗಿ ಲೋಣಿ ಬಿ. ಕೆ. ಗ್ರಾಮದಲ್ಲಿ ಕಾಲ ಸುದೀರ್ಘ ಕಾರ್ಯಕ್ರಮವೇ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀಶೈಲ ಜಗದ್ಗರುಗಳು ಮತ್ತು ಜನಪ್ರತಿನಿಧಿಗಳೂ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಬಾಪುರಾಲ ಕುಲಪ್ಪ ಲೋಣಿ ಹಿರಿಯ ಮುತ್ಸದ್ದಿಯಾಗಿದ್ದು, ಅವರು ಈ ವಯಸ್ಸಿನಲ್ಲಿ ಪಾದಯಾತ್ರೆಯ ಮೂಲಕ ರಾಜಕೀಯ ವ್ಯವಸ್ಥೆ ಸುಧಾರಿಸಲು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅವರ ಪಾದಯಾತ್ರೆಗೆ ಶುಭವಾಗಲಿ ಎಂದು ಹೇಳಿದರು.
ಈ ಉದ್ಘಾಟನೆ ಕಾರ್ಯಕ್ರಮದ ಬಳಿಕ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ನಡಿಗೆ ಆರಂಭಿಸಿರುವ ಬಾಪುರಾಯ ಕುಲಪ್ಪ ಲೋಣಿ, ದೇಶದ ರಾಜಕೀಯ ವ್ಯವಸ್ಥೆ ಸುಧಾರಿಸಬೇಕು. ಯಾರೇ ಆಯ್ಕೆಯಾದರೂ ಚಲಾವಣೆಯಾದ ಮತಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಮತ ಪಡೆದಿರಬೇಕು. ಆದರೆ, ಈಗ ಇರುವ ಬಹುಪಕ್ಷೀಯ ಪದ್ಧತಿಯಲ್ಲಿ ನಾಲ್ಕಾರು ಜನ ಚುನಾವಣೆಗೆ ನಿಲ್ಲುತ್ತಾರೆ. ಅವರಲ್ಲಿ ಮತಗಳು ಹಂಚಿ ಹೋಗುತ್ತವೆ. ಈ ಚುನಾವಣೆಯಲ್ಲಿ ಆಯ್ಕೆಯಾದ ಬಹುತೇಕರು ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ. 50ರಷ್ಟೂ ಮತಗಳನ್ನು ಪಡೆಯದೇ ಹಲವಾರು ಬಾರಿ ಶೇ. 20 ಅಥವಾ ಶೇ. 30ರಷ್ಟು ಮತಗಳನ್ನು ಪಡೆದು ಆಯ್ಕೆಯಾಗುತ್ತಾರೆ. ಈ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತವೆ. ಈ ಹಿನ್ನೆಲೆಯಲ್ಲಿ ತಾವು ದೆಹಲಿ ಚಲೋ ಕಾರ್ಯಕ್ರಮ ಕೈಗೊಂಡಿರುವುದಾಗಿ ಪಾದಯಾತ್ರೆಯ ಮಾರ್ಗ ಮಧ್ಯದಲ್ಲಿ ತಿಳಿಸಿದ್ದಾರೆ.
ಮೇ ಮೊದಲ ವಾರದಲ್ಲಿ ತಮ್ಮ 1500 ಕಿ. ಮೀ. ಪಾದಯಾತ್ರೆ ಮುಕ್ತಾಯವಾಗಲಿದ್ದು, ಅಂದು ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆ ಮತ್ತು ರಾಜ್ಯಸಭೆ ಸಂಸದರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಿಸುವಂತೆ ಮನವರಿಕೆ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ.
ಇವರು ನಡೆಸುತ್ತಿರುವ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸೋಣ.