ರಾಹುಲ್, ಪ್ರಿಯಾಂಕಾ ಬಿಜೆಪಿಯ ಸ್ಟಾರ್ ಪ್ರಚಾರಕರು- ಆನಾರೋಗ್ಯದ ಕಾರಣ ಬೇಲ್ ಪಡೆದಿರುವ ಡಿಕೆಶಿ ಪಾದಯಾತ್ರೆ ಮಾಡುವಷ್ಟು ಸದೃಢರಾಗಿದ್ದಾರೆ- ಯತ್ನಾಳ ಟಾಂಗ್

ವಿಜಯಪುರ: ರಾಹುಲ ಗಾಂಧಿ(Rahul Gandhi) ಮತ್ತು ಪ್ರಿಯಾಂಕಾ ಗಾಂಧಿ(Priyanka Gandhi) ಬಿಜೆಪಿಯ(BJP) ಸ್ಟಾರ(Star) ಪ್ರಚಾರಕರು(Campaigner) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಟಾಂಗ್ ನೀಡಿದ್ದಾರೆ.  

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಲಂಬಾಣಿ ತಾಂಡಾ ಸಂಖ್ಯೆ 4ರ ಬಳಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬುದು ಸುಳ್ಳು ಎಂದು ಹೇಳಿದರು.

ಮಧ್ಯಂತರ ಚುನಾವಣೆಯ ಬಗ್ಗೆ ಚರ್ಚೆಯೇ ನಡೆದಿಲ್ಲ.  ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಎ ಐ ಸಿ ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆ ಎಂಬ ಚಿಂತನೆ ಕೇವಲ ನಾಮಕವಾಸ್ತೆ ಎಂಬಂತಿದೆ.  ಅವರು ನಾಮಕಾವಸ್ಥೆ ರಾಜೀನಾಮೆ ನೀಡುತ್ತಾರೆ.   ಆಗ ಕೆಲವು ನಾಯಕರು ಅವರ ಕೈ ಕಾಲು ಹಿಡಿಯುತ್ತಾರೆ.  ವಾರದ ಬಳಿಕ ಅವರೇ ಮತ್ತೇ ಮುಂದುವರೆಯುತ್ತಾರೆ ಎಂದು ಯತ್ನಾಳ ಟಾಂಗ್ ನೀಡಿದರು.

ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಜೆಪಿ ಸ್ಟಾರ್ ಪ್ರಚಾರಕರು

ಅವರು ರಾಜೀನಾಮೆ ನೀಡಬಾರದು.  ಕಾಂಗ್ರೆಸ್ಸಿಗೆ ಅವರ ನೇತೃತ್ವವಿದ್ದರೆ, ಅವರೇ ಬಿಜೆಪಿಯ ಸ್ಟಾರ್ ಪ್ರಚಾರಕರಾದುಚ್ಚಾಕೆಯ  ಸೋನಿಯಾ ಗಾಂಧಿ, ರಾಹುಲ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಷಣ ಮಾಡಿದರೆ ಬಿಜೆಪಿಗೆ ಹೆಚ್ಚು ಮತಗಳು ಬರುತ್ತವೆ.  ನಮಗೆ ಯಾವುದೇ ತೊಂದರೆಯಿಲ್ಲ.  ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲು ಕಂಡಿರುವ ಕಾರಣ ಆ ಹೊಣೆಯನ್ನು ಮರೆಮಾಚಲು ರಾಜೀನಾಮೆ ಪ್ರಹಸನ ಮಾಡುತ್ತಾರೆ.  ಕಾಂಗ್ರೆಸ್ಸಿನಲ್ಲಿ ಬೇರೆ ಮುಖಂಡರಿಗೆ ನಾಯಕ್ತವ ವಹಿಸಿಕೊಳ್ಳಲು ಅವಕಾಶವೇ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ  ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವಾಗಿ ನಾವು ಲಾಬಿ ಮಾಡಲು ಓಡಾಡುವುದಿಲ್ಲ.  ನನ್ನನ್ನು ಮಂತ್ರಿ ಮಾಡಿ ಎಂದು ನಾನು  ಒಮ್ಮೇಯೂ ಸಿಎಂ ಅವರಿಗೆ ಹೇಳಿಲ್ಲ.  ಸಚಿವ ಸಂಪುಟ ಪುನಾರಚನೆ ನೂರಕ್ಕೆ ನೂರರಷ್ಟು ಶತಸಿದ್ದ.  ವಿಧಾನಸಭೆ ಚುನಾವಣೆಗೆ ಒಂದು ವರ್ಷ ಉಳಿದ ಕಾರಣ ಹಿರಿಯ ಸಚಿವರಿಗೆ ಪಕ್ಷದ ಜವಾಬ್ದಾರಿ ಕೊಡಬಹುದು.  ಕೆಲ ಹೊಸ ಯುವಕರಿಗೆ ಒಂದು ವರ್ಷ ಒಳ್ಳೆಯ ಕೆಲಸ ಮಾಡಬೇಕೆಂಬ ಚಿಂತನೆಯಿಜೆ ಎಂದು ಕೇಂದ್ರ ಮಾಜಿ ಸಚಿವರೂ ಆಗಿರುವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಡಿ. ಕೆ. ಶಿವಕುಮಾರ ವಿರುದ್ಧ ವಾಗ್ದಾಳಿ

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ಬಿಜೆಪಿಗೆ ಬ್ರೋಕರ್ ಪಾರ್ಟಿ ಎಂದಿರುವ ಅವರು ಜೈಲಿಗೆ ಹೋಗಿ ಬಂದಿದ್ದಾರೆ.  ಅವರಿಗೆ ಬಿಜೆಪಿ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ? ಬಿಜೆಪಿಗೆ ಬ್ರೋಕರ್ ಎಂದವರಿಗೆ ಕಾಂಗ್ರೆಸ್ ಲೋಫರ್ ಪಾರ್ಟಿ ಎನ್ನುವುದು ಗೊತ್ತಿಲ್ಲ.  ಹಿರಿಯ ಕಾಂಗ್ರೆಸ್ ನಾಯಕರಿಗೆ ಅವಮಾನ ಮಾಡುವುದು ಡಿ. ಕೆ. ಶಿವಕುಮಾರ ಮೂಲ ಸಂಸ್ಕೃತಿಯನ್ನು ತೋರಿಸುತ್ತದೆ.  ಇಂಥವರು ಸಿಎಂ ಆದರೆ ಏನಾಗುತ್ತೆ ಹೇಳಿ.   ಡಿ. ಕೆ. ಶಿವಕುಮಾರ ಅವರಿಗೆ ಆ ದಿನಗಳು ನೆನಪಾಗಿವೆ.  ಆ ದಿನಗಳು ಖಾಯಂ ಆಗಿವೆ.  ಜೈಲಿಗೆ ಹಾಕಿದಾಗ ಬಿಪಿ ಶುಗರ್ ಎಂದು ಹೇಳಿದ್ದರು.  ಪಾದಯಾತ್ರೆ ಮಾಡೋವಾಗ ಶಕ್ತಿ ಎಲ್ಲಿಂದ ಬಂತು? ಜಾಮೀನು ಪಡೆಯುವಾಗ ವಿಪರೀತ ಮಧುಮೇಹ, ಅತೀ ರಕ್ತದೊತ್ತಡ ಇದೆ ಎಂದು ಹೇಳಿದ್ದರು.  ಆರೋಗ್ಯದಿಂದ ಇರುವವರು ಆ ಪ್ರಕರಣ ಮುಗಿಯುವವರೆಗೆ ಹೊರಗಿರಬಾರದು ಎಂಬುದಿದೆ.  ಈಗ ಯಾರಾದರೂ ಪಿಟಿಷನ್ ಹಾಕಿದರೆ ಅವರು ಒಳಗೆ ಹೋಗುತ್ತಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯಗೆ ಕಾಂಗ್ರೆಸ್ಸಿನಲ್ಲಿ ಅವಮಾನವಾಗುತ್ತಿದೆ

ಪಂಚ ರಾಜ್ಯಗಳ ಚುನಾವಣೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಮತಗಳ ಜಪ ಮಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿನಲ್ಲಿ ಭವಿಷ್ಯವಿಲ್ಲವೆಂದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ.  ಕಾಂಗ್ರೆಸ್ಸಿನಲ್ಲಿನ ಕಿರುಕುಳ ತಡೆಯಲು ಅವರಿಗೆ ಆಗುತ್ತಿಲ್ಲ.  ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗೆ ಅವಮಾನ ಆಗುತ್ತಿದೆ.  ಮೇಕೆದಾಟು ನೀರಾವರಿ ಯೋಜನೆಯ ಪಾದಯಾತ್ರೆಯಲ್ಲಿ ಅವಮಾನ ಆಗಿದೆ.  ಪಾದಯಾತ್ರೆಯಲ್ಲಿ ಡಿ. ಕೆ. ಶಿವಕುಮಾರ ಮುಂದಿನ ಸಿಎಂ ಅಭ್ಯರ್ಥೀ ಎಂದು ಘೋಷಣೆ ಹಾಕಿದ್ದಕ್ಕೆ ಬೇಜಾರಾಗಿರಬಹುದು.  ಅವರು ವಿಧಾನಸಭೆಯಲ್ಲಿ ಮಾತನಾಡುವ ಧಾಟಿ ನೋಡಿದರೆ ಹಾಗೆ ಅನ್ನಿಸುತ್ತದೆ.  ಪ್ರತಿಪಕ್ಷದ ನಾಯಕರಾಗಿ ಬಜೆಟ್ ಮೇಲಿನ ವಿಚಾರ ಮಾತನಾಡುವ ವೇಳೆ ಅವರ ಬೆಂಬಲಿಗ ಶಾಕರು ಮಾತ್ರ ಹಾಜರಾಗಿದ್ದರು.  ಶೇ. 50 ರಿಂದ 60 ಶಾಸಕರು ಗೈರು ಹಾಜರಾಗಿದ್ದರು.  ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರನ್ನು ಏಕಾಂಗಿಯನ್ನಾಗಿ ಮಾಡಲಾಗುತ್ತಿದೆ.  ನಿಷ್ಟಾವಂತ ಕಾಂಗ್ರೆಸ್ಸಿನವರೆಂದು ಹೇಳುವವರೇ ಹೀಗೆ ಮಾಡುತ್ತಿದ್ದಾರೆ.  ಇದರಲ್ಲಿ ಸಿದ್ದರಾಮಯ್ಯನವರನ್ನು ಸೈಡ್ ಲೈನ್ ಮಾಡೋ ಷಡ್ಯಂತ್ರ ನಡೆದಿದೆ.  ಹೀಗಾಗಿ ಸಿದ್ಧರಾಮಯ್ಯ ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ಯತ್ನಾಳ ಹೇಳಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ರಾಜ್ಯಕ್ಕೆ ಒಳ್ಳೆಯ ಸಿಎಂ ಬೇಕು

ರಾಜ್ಯಕ್ಕೆ ಒಳ್ಳೆಯ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು.  ಯಾವುದೇ ಪಕ್ಷ ಎನ್ನುವ ಬದಲಾಗಿ ಒಳ್ಳೆಯ ವ್ಯಕ್ತಿ ಸಿಎಂ ಆಗಬೇಕು.  ಒಳ್ಳೆಯವರ ಕೈಲಿ ಸಿಎಂ ಸ್ಥಾನ ಸಿಗಬೇಕು,  ಅಂತಿಂಥವರ ಕೈಲಿ ಸಿಕ್ಕರೆ ರಾಜ್ಯ ಗತಿಯೇನು? ಎಂದು ಯತ್ನಾಳ ಹೆಸರು ಹೇಳದೇ ಸಿಎಂ ಆಗುವ ಕನಸು ಕಾಣುತ್ತಿರುವ ಡಿ. ಕೆ. ಶಿವಕುಮಾರ ಅವರಿಗೆ ಟಾಂಗ್ ನೀಡಿದರು.

ಯಾರಾರೋ ಕೈಗೆ ರಾಜ್ಯ ಸಿಕ್ಕರೆ ಬಿಹಾರವಾಗುತ್ತದೆ.  ಇದೇ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸದನದಲ್ಲಿಯೇ ಮನವಿ ಮಾಡಿದ್ದೇನೆ.  ಕೆಟ್ಟ ಶಕ್ತಿಗಳಿಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದೇನೆ ಎಂದು ಯತ್ನಾಳ ತಿಳಿಸಿದರು.

ದೇಶಾದ್ಯಂತ ಬಿಜೆಪಿ ಪರ ವಾತಾವರಣವಿದೆ

ದೇಶಾದ್ಯಂತ ಬಿಜೆಪಿಗೆ ಪರ ಒಳ್ಳೆಯ ವಾತಾವರಣ ಉಂಟಾಗಿದೆ.  ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದ ಮುಖಂಡರು ಈಗ ಮೌನಕ್ಕೆ ಶರಣಾಗಿದ್ದಾರೆ ಎಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿದ್ದ ಕೆಲವು ಜನ ನಾಯಕರಿಗೆ ಟಾಂಗ್ ನೀಡಿದ ಯತ್ನಾಳ, ಗುಜರಾತ್ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ಚುನಾವಣೆ ಮಾಡಲ್ಲ.  ಇನ್ನೂ ಅವಧಿಯಿದೆ, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ನಿಟ್ಟಿನಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ.  ದೆಹಲಿ ಮಟ್ಟದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ತಮಗೆ ಗೊತ್ತಿಲ್ಲ.  ಕೇಂದ್ರ ಹೈಕಮಾಂಡ, ಪ್ರಧಾನಿ ಹಾಗೂ ಅಮೀತ್ ಶಾ ಅವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಆ ತೀರ್ಮಾನಗಳಿಗೆ ನಾವೆಲ್ಲ ಭದ್ದರಿರುತ್ತೇವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಬೆಜಿಟ್ ನಲ್ಲಿ ಹಿಂದೂಪರ ನಿರ್ಣಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಹಿಂದೂ ಪರ ನಿರ್ಣಯ ತೆಗೆದುಕೊಂಡಿದ್ದಾರೆ.  ಕಾಶಿಯಾತ್ರೆಗೆ ಸಹಾಯ ಧನ ಘೋಷಣೆ ಮಾಡಿದ್ದಾರೆ.  ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು ಸರಕಾರಿ ಹಿಡಿತದಿಂದ ಮುಕ್ತ ಮಾಡಿದ್ದಾರೆ.  ಶ್ರೀಶೈಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸೇರಿದಂತೆ ಹಿಂದೂಪರ ಕೆಲಸ ಮಾಡುತ್ತಿದ್ದಾರೆ.  ಜ್ಯಾತ್ಯತೀತ ಪೊರೆ ಕಳಚಿಕೊಂಡು ಹಿಂದೂ ಪರ ಕೆಲಸ ಮಾಡುತ್ತಿದ್ದಾರೆ.  ಉತ್ತರ ಪ್ರದೇಶದ ಫಲಿತಾಂಶದಂತೆ ರಾಜ್ಯದಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನಡೆಯೋ ಚುನಾವನೆಯಲ್ಲಿ ಬಿಜೆಪಿ ಗೆಲ್ಲುತ್ತದೆ.  ಜಾತಿ ಧೃವೀಕರಣ ದೇಶದಲ್ಲಿ ನಡೆಯುತ್ತಿದ್ದು, ಅದು ರಾಜ್ಯದಲ್ಲಿಯೂ ಆಗುತ್ತದೆ.  ಇತರೆ ರಾಜ್ಯಗಳ ಜಾತಿ ಸಮೀಕರಣದಂತೆ ನಮ್ಮ ರಾಜ್ಯದಲ್ಲಿಯೂ ಜಾತಿ ಸಮೀಕರಣ ಆಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಸಿಎಂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ವಿಚಾರ 

ಮುಖ್ಯಮಂತ್ರಿ ಬಸನರಾಜ ಬೊಮ್ಮಾಯಿ ಎರಡು ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲ.  ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್ ಕೊಡಲ್ಲ.  ಮೋದಿ ಅವರಿಗೆ ಒಮ್ಮೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದನ್ನು ಬಿಟ್ಟರೆ ಮತ್ತೇ ಯಾರಿಗೂ ಎರಡು ಟಿಕೆಟ್ ನೀಡಿಲ್ಲ.  ಸಿಎಂ ಬೊಮ್ಮಾಯಿ ಅವರಾದರೂ ಒಂದು ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ.  ನಮ್ಮ ಪಕ್ಷವೂ ಸಹ ಎರಡು ಕಡೆಗಳಲ್ಲಿ ಸ್ಪರ್ದಿಸಲು ಟಿಕೆಟ್ ನೀಡಲ್ಲ ಎನಿಸುತ್ತದೆ.  ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಬೇರೆ ನಮ್ಮ ನಿಲುವು ಬೇರೆ.  ಗೋವಾದಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಪುತ್ರನಿಗೆ ಟಿಕೆಟ್ ನೀಡಿಲ್ಲ.  ಒಂದು ಮನೆಗೆ ಒಂದೇ ಟಿಕೆಟ್ ನೀಡಬೇಕೆಂದು ನಾವು ಹೇಳುತ್ತೇವೆ.  ಇಲ್ಲಿ ಒಂದೇ ಮನೆಯಲ್ಲಿ ಸಂಸದ, ಶಾಸಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದರೆ ಕಾರ್ಯಕರ್ತರು ಇವರ ಮನೆ ಮುಂದೆ ಗಂಟೆ ಹೊಡೆಯಬೇಕಾ ಎಂದು ಅವರು ಪ್ರಶ್ನಿಸಿದರು.

ಯಡಿಯೂರಪ್ಪಗೆ ಮತ್ತೆ ಯತ್ನಾಳ ಟಾಂಗ್

ಈ ಹಿಂದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಬಿ. ಎಸ್. ಯಡಿಯೂರಪ್ಪ ಅವರು 2023 ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದರು.  ಯಡಿಯೂರಪ್ಪ ಅವರು ಹಿರಿಯರು.  ಅವರಿಗೆ ವಯಸ್ಸಾಗಿದೆ.  ಇನ್ನು ಮೇಲೆ ಆರಾಮಾಗಿರಬೇಕು.  ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ? ಪಕ್ಷದಲ್ಲಿ ಸೆಕೆಂಡ್ ಲೈನ್ ಲೀಡರಶಿಪ್ ಬಂದಿದೆ.  ಅವರ ನೇತೃತ್ವದಲ್ಲಿ ಪಕ್ಷ 100-104 ಸೀಟ್ ಗಳಿಗೆ ಬಂದು ನಿಲ್ಲುತ್ತಿತ್ತು.  ಈ ಬಾರಿ ನಾವೆಲ್ಲಾ ಸೇರಿ 130 ಸೀಟ್ ದಾಟಿಸುತ್ತೇವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೆಕರ, ದ್ರಾಕ್ಷಿ ಬೆಳೆಗಾರ ಎಂ. ಎಸ್. ರುದ್ರಗೌಡ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಲಕ್ಷ್ಮಣ ಜಾಧವ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌