ವಿಜಯಪುರ: ಕೊರೊನಾದಿಂದಾಗಿ(Corona) ವಿದ್ಯಾರ್ಥಿಗಳು(Students) ಮತ್ತು ಅದರಲ್ಲಿಯೂ ಪ್ರಾಥಮಿಕ(Primary) ಮತ್ತು ಪ್ರೌಢ(Secondary) ಶಾಲೆಗಳ(School) ಮಕ್ಕಳು(Children) ಎರಡು ವರ್ಷ ಮನೆಯಲ್ಲಿ ಕುಳಿತು ಆನಲೈನ್ ನಲ್ಲಿಯೇ ಪರೀಕ್ಷೆ ಎದುರಿಸಿದ್ದರು. ಪರಸ್ಪರ ಭೇಟಿಯಂತೂ ಫೋನ್ ಕರೆ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ನಡೆಯುತ್ತಿತ್ತು.
ಅದರಲ್ಲೂ ಭೌತಿಕವಾಗಿ ವಾರ್ಷಿಕ ಪರೀಕ್ಷೆ ಬರೆದು ಸಂಭ್ರಮಿಸುವ ಕ್ಷಣಗಳನ್ನು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲ್ಲಿ. ಯಾವಾಗ ಭೌತಿಕ ತರಗತಿಗಳು ಪ್ರಾರಂಭವಾದವೋ ಅದೇ ಅಂದಿನಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಅಲ್ಲದೇ, ಮಕ್ಕಳೂ ಕೂಡ ಮೊಬೈಲ್ ಜಂಜಾಟದಿಂದ ಹೊರ ಬಂದು ತಮ್ಮ ಸ್ನೇಹಿತರೊಂದಿಗೆ ಬೆರೆತು ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಕಳೆಯುತ್ತ ಸಂತಸ ಪಡುತ್ತಿದ್ದಾರೆ. ಎರಡು ವರ್ಷಗಳ ಬಳಿಕ ಈ ಬಾರಿ ವಾರ್ಷಿಕ ಪರೀಕ್ಷೆ ಭೌತಿಕವಾಗಿ ನಡೆಸಲು ಸರಕಾರ ಅವಕಾಶ ನೀಡಿದ್ದರಿಂದ ಬಹಳಷ್ಟು ವಿದ್ಯಾರ್ಥಿಗಳು ಖುಷ್ ಆಗಿದ್ದಾರೆ.
ವಿಜಯಪುರ ನಗರದ ದರ್ಗಾ ಬಳಿ ಇರುವ ಕೇಂದ್ರೀಯ ವಿದ್ಯಾಲಯದಲ್ಲಿ 8ನೇ ತರಗತಿಯವರೆಗೆ ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂತಸ ಹೇಳತಿರದಂತಿತ್ತು. ಮಕ್ಕಳು ಪರಸ್ಪರ ಗುಲಾಲು ಹಚ್ಚಿ, ಬಣ್ಣ ಬಳಿದು ಹೋಳಿ ಹುಣ್ಣಿಮೆ ಇನ್ನೂ ಐದಾರು ದಿನ ಇರುವಾಗಲೇ ಹೋಳಿ ಹಬ್ಬದ ಬಣ್ಣದಾಟವಾಡಿದರು.
ನಾವು ಚಿಕ್ಕವರಿದ್ದಾಗ ವಾರ್ಷಿಕ ಪರೀಕ್ಷೆ ಮುಗಿದ ನಂತರ ಇಂಕ್ ಪೆನ್ ನಲ್ಲಿದ್ದ ಮಸಿಯನ್ನು ತೆಗೆದು ಪರಸ್ಪರ ಸಿಡಿಸುತ್ತ ಖುಷಿ ಪಡುತ್ತಿದ್ದೇವು. ಆದರೆ, ಈಗ ಇಂಕ್ ಪೆನ್ ಬಹುತೇಕ ಮಾಯವಾಗಿವೆ. ಹಲವರ ಬಳಿ ಇವೆಯಾದರೂ ಅವು ಕೇವಲ ಸಂಗ್ರಹಿಸಿ ಇಟ್ಟುಕೊಳ್ಳಲು ಮಾತ್ರ ಎನ್ನುವಂತಿವೆ.
ಇಂಥ ಪರಿಸ್ಥಿತಿಯ ನಡುವೆ ಈಗ ಮಕ್ಕಳು ವಾರ್ಷಿಕ ಪರೀಕ್ಷೆ ಮುಗಿದು ಮುಂದಿನ ತರಗತಿಗೆ ಬಡ್ತಿ ಪಡೆಯುವ ಖುಷಿಯಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಆನಲೈನ್ ಮೂಲಕ ಪರೀಕ್ಷೆ ಬರೆದು ಪರಸ್ಪರ ಭೇಟಿಯಿಂದ ದೂರಾಗಿದ್ದ ಮಕ್ಕಳು ಪರಸ್ಪರ ನೀರು ಸಿಡಿಸಿ, ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಖುಷಿಪಡುತ್ತಿದ್ದ ಕ್ಷಣಗಳನ್ನು ಕಂಡು ಪೋಷಕರ ಮೊಗದಲ್ಲಿಯೂ ಮಂದಹಾಸ ಮೂಡಿಸಿತ್ತು.
ಮಕ್ಕಳು ವಾರ್ಷಿಕ ಪರೀಕ್ಷೆ ಮುಗಿಸಿದ ಸಂತಸದಲ್ಲಿ ಕುಣಿದು ಕುಪ್ಪಳಿಸುವುದು ಪೋಷಕರ ಮೊಗದಲ್ಲಿಯೂ ಮಂದಹಾಸ ಮೂಡಿಸಲು ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.