ಹಿಜಾಬ್ ಪ್ರಕರಣ: ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹೈಕೋರ್ಟ್(High Court) ತ್ರಿಸದಸ್ಯ ಪೀಠ(Three Judges Bench) ವಸ್ತ್ರಸಂಹಿತೆ(Dress Code) ಪ್ರಕರಣದ(Case) ಕುರಿತು ತೀರ್ಪು(Judgement) ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ(Not Relilegious Practice) ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌‌.

ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಹೈಕೋರ್ಟ್ ಆದೇಶ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಶಾಂತಿಯನ್ನು ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ಜನತೆ, ಎಲ್ಲ ಸಮುದಾಯದ ನಾಯಕರು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕು ಎಂದು ಕಳಕಳಿಯ ವಿನಂತಿ ಮಾಡಿದರು.

ಪರೀಕ್ಷೆ ಗಳಿಂದ ಹೊರಗುಳಿಯದಿರಿ

ಎಲ್ಲಾ ವಿದ್ಯಾರ್ಥಿಗಳು ಹೈಕೊರ್ಟ್ ಆದೇಶವನ್ನು ಪಾಲಿಸಬೇಕು. ನಿಮ್ಮ ಶಿಕ್ಷಣ ಬಹಳ ಮುಖ್ಯ. ಪರೀಕ್ಷೆಗಳಿಂದ ಹೊರಗುಳಿಯದೆ, ಎಲ್ಲರೂ ತರಗತಿಗಳಿಗೆ ಹಾಜರಾಗಬೇಕು. ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಚಿಂತಿಸಬೇಕು ಎಂದು ಸಿಎಂ ಕರೆ ನೀಡಿದರು.

ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ

ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೈಕೋರ್ಟ್ ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿದೆ. ಆದ್ದರಿಂದ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆ ತೆಗೆದುಕೊಂಡರೆ ನಮ್ಮ ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

Leave a Reply

ಹೊಸ ಪೋಸ್ಟ್‌