ಹೋಳಿ ಹಬ್ಬದ ವಿಶೇಷ: ಬಸವ ನಾಡಿನ ಪರಡಿ ತುಂಬುವ ಕಾರ್ಯಕ್ರಮ

ವಿಜಯಪುರ: ಬಸವ ನಾಡು(Basavanadu) ವಿಜಯಪುರ(Vijayapura) ಜಿಲ್ಲೆ ತರಹೇವಾರಿ+Unique) ಸಂಸ್ಕೃತಿ(Culture), ಪರಂಪರೆ(Tradition) ಮತ್ತು ಪುರಾತನ ಆಚರಣೆಗಳಿಗೆ(Celebration) ಹೆಸರುವಾಸಿಯಾಗಿದೆ.

ಹೋಳಿ ಹುಣ್ಣಿಮೆಯ ಅಂಗವಾಗಿ ಪರಡಿ ತುಂಬಿರುವುದು

ಅದರಲ್ಲೂ ಹೋಳಿ ಹಬ್ಬ ಬಂತೆಂದರೆ ಸಾಕು. ಈ ಭಾಗದಲ್ಲಿ ಜಾತ್ಯತೀತವಾಗಿ ಜನ ಸಾಮರಸ್ಯದಿಂದ ಆಚರಣೆಯಲ್ಲಿ ತೊಡಗುತ್ತಾರೆ. ಹೋಳಿ ಹುಣ್ಣಿಮೆಯ ದಿನ ಕಾಮ ದಹನ ಮಾಡುವ ಮೂಲಕ ಅಂದೃ ಮನುಷ್ಯನ‌ ಅರಿಷಡ್ವರ್ಗ ಗುಣಗಳಲ್ಲಿ ಒಂದಾದ ಕಾಮಕ್ಕೆ ಕಾಮಣ್ಣನ ಮೂರ್ತಿ ರೂಪ ನೀಡಿ ದಹಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಹೊಸ ವರ್ಷ ಯುಗಾದಿಯ ಸ್ವಾಗತಕ್ಕಾಗಿ ಹೋಳಿ ಹುಣ್ಣಿಮೆ ಪೂರ್ವ ತಯಾರಿ ಎಂದರೆ ತಪ್ಪಾಗಲಾರದು.

ಈ ಹೋಳಿ ಹುಣ್ಣಿಮೆಯ ದಿನ ಅನಾದಿಕಾಲದಿಂದಲೂ ವಿಶಿಷ್ಟ ಆಚರಣೆಯೊಂದು ಬಸವ ನಾಡಿನಲ್ಲಿ ಇನ್ನೂ ಮುಂದುವರಿದುಕೊಂಡು ಬಂದಿದೆ. ಉತ್ತರ ಕರ್ನಾಟಕದಲ್ಲಿ ತಾಯಿ ಯಲ್ಲವ್ವ ಬಹುತೇಕ ಜನರ ಆರಾಧ್ಯ ದೈವ. ತಾಯಿ ಯಲ್ಲಮ್ಮನ ಓಲೈಕೆಗಾಗಿ ಮನೆಯಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸಲಿ ಎಂದು ವಿಶೇಷ ಪೂಜೆ ಮಾಡುತ್ತಾರೆ. ಜನರು ಈ ಹೋಳಿ ಹುಣ್ಣಿಮೆಯ ದಿನ ಪರಡಿ ತುಂಬುವ ವಿಶಿಷ್ಟ ಆಚರಣೆ ಇನ್ನು ನಡೆಸಿಕೊಂಡು ಬಂದಿದ್ದಾರೆ. ಹೋಳಿ ಹುಣ್ಣಿಮೆ ದಿನ ಜೋಗಮ್ಮಳನ್ನು ಅಂದರೆ ತಾಯಿ ಯಲ್ಲಮ್ಮನ ಆರಾಧಕಿಯನ್ನು ಮನೆಗೆ ಕರೆಯಿಸಿ ತಾಯಿ ರೇಣುಕಾಳ ಭಕ್ತರು ಪರಡಿಯನ್ನು ತುಂಬಿ ವಿಶೇಷ ಪೂಜೆ ಮಾಡುತ್ತಾರೆ. ಈ ಆಚರಣೆಗೂ ಮುನ್ನಾದಿನ ಮನೆಯನ್ನು ಸ್ವಚ್ಛಗೊಳಿಸಿ ಹಾಸಿಗೆ ಹೊದಿಕೆಗಳನ್ನು ತೊಳೆದು ಹಾಕಿ ಸ್ವಚ್ಛತೆ ಕಾಪಾಡುತ್ತಾರೆ. ಹುಣ್ಣಿಮೆಯ ದಿನ ನಸುಕಿನ ಜಾವ ಬೆಳಗ್ಗೆ ಬೇಗನೇ ಎದ್ದು ಯಾವುದೇ ರೀತಿ ಮೈಲಿಗೆ ಆಗದಂತೆ ಎಡೆಯನ್ನು ಅಂದರೆ ನೈವೆದ್ಯರಯನ್ನು ತಯಾರಿಸುತ್ತಾರೆ. ಹುರುಣದ ಹೋಳಿಗೆ, ಕಡಬು, ಅನ್ನ ತರಹೇವಾರಿ ಪಲ್ಯ, ಕುರುಡಗಿ ಅಂದರೆ ಕುರುಕಲು ತಿಂಡಿಗಳು ಸೇರಿದಂತೆ ನಾನಾ ಖಾದ್ಯಗಳನ್ನು ತಯಾರಿಸುತ್ತಾರೆ.

ಎಲ್ಲಾ ಅಡುಗೆಗಳು ತಯಾರಾದ ನಂತರ ಜೋಗಮ್ಮಳನ್ನು ಮನೆಗೆ ಕರೆಯಿಸಿ ಅವರು ತಂದಿರುವ ಕಿರಿದಾದ ಪರಡಿ ಅಂದರೆ ಬುಟ್ಟಿಯಲ್ಲಿ ದೇವರ ನೈವೇದ್ಯಗಾಗಿ ತಯಾರಿಸಿದ ಆಹಾರಗಳನ್ನು ಹಾಕುತ್ತಾರೆ. ಅದರ ಜೊತೆಯಲ್ಲಿ ಈರುಳ್ಳಿ, ಗಜ್ಜರಿ, ಬದನೆಕಾಯಿ ಸೇರಿದಂತೆ ನಾನಾ ತರಕಾರಿಗಳನ್ನು ಇಟ್ಟು ಆರತಿ ಬೆಳಗುತ್ತಾರೆ. ‌ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ಮನೆಗೆ ಬಂದಿರುವ ಜೋಗಮ್ಮ ಮಡಿಯಿಂದ ಸಂಗ್ರಹಿಸಲಾದ ನೀರನಲ್ಲಿ ಬೇವಿನ ತಪ್ಪಲನ್ನು ಅದರಲ್ಲಿ ಎದ್ದಿ ಮನೆಯವರ ಮೇಲೆ ಸಿಂಪಡಿಸುತ್ತ ಶುಭ ಕೋರುತ್ತಾರೆ. ಈ ಕುಟುಂಬದವರಿಗೆ ಒಳಿತಾಗಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತಾರೆ. ಬಳಿಕ ಮನೆಮಂದಿಯಲ್ಲ ಸೇರಿ ಜೋಗಮ್ಮಳಿಗೆ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಅಲ್ಲದೆ ತಾಯಿ ಯಲ್ಲಮ್ಮಳಿಗೆ ನೈವೇದ್ಯಕ್ಕಾಗಿ ಮಾಡಲಾದ ಭಕ್ಷಗಳನ್ನು ನೈವೇದ್ಯ ಅರ್ಪಿಸಿದ ನಂತರ ಜೋಗಮ್ಮಳಿಗೆ ನೀಡಿ ಕೃತಾರ್ಥರಾಗುತ್ತಾರೆ.

ಈ ಸಂದರ್ಭದಲ್ಲಿ ಜೋಗಮ್ಮ ಪರಡಿ ತುಂಬಿಸಿಕೊಂಡು ಮನೆಯಿಂದ ಹೊರ ಹೋಗುವಾಗ ಆ ಮನೆಯಲ್ಲಿ ಹವಳ, ಮುತ್ತು ಬಿದ್ದಿವೆ.  ಬಳಿದುಕೊಳ್ಳಿ ಎಂದು ಆಶೀರ್ವದಿಸಿ ತೆರಳುತ್ತಾರೆ.  ಈ ಆಚರಣೆ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವುದು ವಿಶೇಷವಾಗಿದೆ.

Leave a Reply

ಹೊಸ ಪೋಸ್ಟ್‌