ವಿಜಯಪುರ: ಎಸ್. ಎಸ್. ಎಲ್. ಸಿ(SSLC) ಪರೀಕ್ಷೆ (Exam) ವಿದ್ಯಾರ್ಥಿಗಳ(Students) ಭವಿಷ್ಯದ(Future) ಶಿಕ್ಷಣಕ್ಕೆ ಮಹತ್ವದ ತಿರುವು(Turning) ನೀಡುತ್ತದೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು(Marks) ಪಡೆದು ತೇರ್ಗಡೆಯಾದರೆ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರಘೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಎಸ್. ಎಸ್. ಪಿಯು ಕಾಲೇಜಿನಲ್ಲಿ ಮಾಧ್ಯಮಿಕ ವಿಭಾಗ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ಒಂದು ವೇಳೆ ಅನುತ್ತೀರ್ಣರಾದರೂ ಎದೆಗುಂದದೇ ಜೀವನದಲ್ಲಿ ಧೈರ್ಯದಿಂದ ಮುಂದೆ ಸಾಗಬೇಕು. ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮಾಡಲು ಸಾಕಷ್ಟು ದಾರಿಗಳಿವೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಲ್ಲಿ ವಿಶ್ವಮೆಚ್ಚುವ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಕುರಿತು ಪಠ್ಯಪುಸ್ತಕದಲ್ಲಿ ಒಂದು ಪಾಠವನ್ನು ಸೇರಿಸಲಾಗಿದೆ. ಈ ಮೂಲಕ ಅವರ ಸಾಧನೆ ಗಮನಾರ್ಹವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ದೇವೇಂದ್ರ ಹೆಳವರ ಮಾತನಾಡಿ, ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆ ಕಾಲೇಜ್ ಶಿಕ್ಷಣಕ್ಕೆ ಏಣಿ ಇದ್ದಂತೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇತರ ಚಟುವಟಿಕೆಗಳಿಗಿಂತ ಪರೀಕ್ಷೆಗಳತ್ತ ಗಮನ ಹರಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ವಿಜಯಪುರ ಜಿಲ್ಲೆ ಕೊನೆಯ ಸ್ಥಾನದಲ್ಲಿರುತ್ತಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಎಂ. ಬಿ. ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಸುಧಾರಣೆ ಕ್ರಮಗಳನ್ನು ಕೈಗೊಂಡ ಪರಿಣಾಮ, ಆ ವರ್ಷ ವಿಜಯಪುರ ಜಿಲ್ಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೊದಲ 10 ಸ್ಥಾನಗಳಲ್ಲಿ ಬರಲು ಸಾಧ್ಯವಾಯಿತು ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಪ್ರೊ. ಐ, ಎಸ್, ಕಾಳಪ್ಪನವರ ಮಾತನಾಡಿ, ಬಾಲ್ಯದಿಂದಲೇ ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಿದರೆ ಭವಿಷ್ಯದ ಜೀವನ ಉಜ್ವಲವಾಗುವುದು. ಮೌಲ್ಯ ಹಾಗೂ ಸಂಸ್ಕಾರ ಮನುಷ್ಯನಿಗೆ ಅತ್ಯವಶ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿ ಎಸ್. ಎಸ್. .ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಹಾಜಿ ಕಬಾಡೆ, ನಂದಿನಿ ಕೋಳಿ ಅವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಉಪಪ್ರಾಚಾರ್ಯ ಆರ್. ವೈ, ತೊರವಿ ಸ್ವಾಗತಿಸಿದರು. ಶಿಕ್ಷಕ ಎಂ. ಎಚ್. ಜಂಡೆ ಪರಿಚಯಿಸಿದರು. ದೈಹಿಕ ಶಿಕ್ಷಕ ಕಾಂತು ಒಡೆಯರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂತರ ಶಾಲೆಯ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.