ಮಹೇಶ ವಿ. ಶಟಗಾರ
ವಿಜಯಪುರ: ಇದು ಜನಪ್ರತಿನಿಧಿಯೊಬ್ಬರು(MLA) ಅಧಿಕಾರದಲ್ಲಿದ್ದರೂ(Power) ಮರೆಯದ ಸರಳತೆಗೆ(implicity) ಸಾಕ್ಷಿಯಾದ ಪ್ರಸಂಗ. ಈಗ ಜಿ. ಪಂ. ಸದಸ್ಯ, ಕಾರ್ಪೋರೇಟ್ ಮೇಂಬರ್ ಆದರೂ ದೂರದ ಊರು ಬಿಡಲಿ ಸಮಪದ ಕೆಲಸಗಳಿಗೂ ಹಲವಾರು ಜನ ಕಾರುಗಳಲ್ಲಿ(Cars)ತಿರುಗಾಡುತ್ತಾರೆ. ಆದರೆ, ಈ ಸ್ಟೋರಿ(Story) ಅದೆಲ್ಲಕ್ಕಿಂತ ಭಿನ್ನವಾಗಿದೆ.
ಇವರು ಮೂರನೇ ಬಾರಿ ಶಾಸಕರಾಗಿದ್ದಾರೆ. ಮತಕ್ಷೇತ್ರದಲ್ಲಿ ಕಾರಿನಲ್ಲಿ ತಿರುಗಾಡುತ್ತಾರೆ. ಅದು ಅನಿವಾರ್ಯವೂ ಹೌದು. ಆದರೆ, ದೂರದ ಬೆಂಗಳೂರಿಗೆ ಮಾತ್ರ ಇವರು ಪ್ರಯಾಣ ಮಾಡುವುದು ಸರಕಾರಿ ಬಸ್ಸಿನಲ್ಲಿ. ಈಗ 84 ವರ್ಷದ ಇಳಿ ವಯಸ್ಸಿನ ತಂದೆಯನ್ನೂ ಕೂಡ ಸರಕಾರಿ ಬಸ್ಸಿನಲ್ಲಿಯೇ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಸರಳತೆ ಮೆರೆದಿದ್ದಾರೆ.
ಇವರು ಬೇರಾರೂ ಅಲ್ಲ. ಬಸವ ನಾಡು ವಿಜಯಪುರ ಜಿಲ್ಲೆಯ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ. ವಿಧಾನ ಮಂಡಲ ಅಧಿವೇಶನದ ಅಂಗವಾಗಿ ಬೆಂಗಳೂರಿಗೆ ತೆರಳಿದರು. ಜೊತೆಯಲ್ಲಿ 84 ವರ್ಷದ ತಂದೆ ಬಾಳಪ್ಪ ಅವರನ್ನೂ ಕರೆದೊಯ್ದರು. 2008 ಮತ್ತು 2013ರಲ್ಲಿ ಸತತವಾಗಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018ರಲ್ಲಿ ಪರಾಭವಗೊಂಡರೂ 2021ರ ಉಪಚುನಾವಣೆಯಲ್ಲಿ 31200ಕ್ಕೂ ಹೆಚ್ಚು ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿ ಮೂರನೇ ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿಗೆ ಪ್ರಯಾಣಿಸಲು ಶಾಸಕ ರಮೇಶ ಭೂಸನೂರ ಆಯ್ಕೆ ಮಾಡುವುದು ಸರಕಾರಿ ನಾನ್ ಎಸಿ ಸ್ಸರಕಾರಿ ಬಸ್. ಸರಕಾರಿ ಬಸ್ ಎಂಬ ಯಾವುದೇ ಏಚುಪೇಚು ಇವರಿಗಿಲ್ಲ.
ನಾವು ಚಿಕ್ಕವರಿದ್ದಾಗ ನಮ್ಮ ತಂದೆ ನಮ್ಮನ್ನು ಪರೂರಿಗೆ ಕೆಲಸ ಕಾರ್ಯಗಳಿಗಾಗಿ, ನಾನಾ ಕಾರ್ಯಕ್ರಮಗಳಿಗಾಗಿ ಹಾಗೂ ಆಸ್ಪತ್ರೆಗಾಗಿ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಕ್ಷಣಗಳ ಈಗಲೂ ನೆನಪಾಗುತ್ತವೆ. ಆದರೆ, ಈಗ ಶಾಸಕ ರಮೇಶ ಭೂಸನೂರ ತಮ್ಮ ತಂದೆಯನ್ನು ಬಸ್ಸಿನಲ್ಲಿ ಕರೆದುಕೊಂಡು ಪ್ರಯಾಣಿಸಿದ್ದಾರೆ. ಈಗ ಬೇಸಿಗೆ ಆರಂಭವಾಗಿದೆ. ನಮ್ಮ ಕಡೆ ಬಿಸಿಲಿನ ಝಳ ಹೆಚ್ಚಾಗಿರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ತಂದೆಗೆ ಕಫ ಮತ್ತೀತರ ಪರೀಕ್ಷೆಗಳನ್ನು ಮಾಡಿಸಲು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಬಸವ ನಾಡು ವೆಬ್ ಗೆ ಶಾಸಕರು ತಿಳಿಸಿದರು.
ರೈಲಿನಲ್ಲಿ ಸಂಚರಿಸಬೇಕಾದರೆ ಪ್ರಯಾಣಕ್ಕೆ ಹೆಚ್ಚು ಸಮಯ ಬೇಕು. ಸಂ. 4.55ಕ್ಕೆ ಬಿಡುವ ರೈಲು ಮರುದಿನ ಬೆ. 7.25ಕ್ಕೆ ಬೆಂಗಳೂರು ತಲಪುತ್ತದೆ. ಆದರೆ, ಸರಕಾರಿ ಬಸ್ಸು ರಾ. 8.06ಕ್ಕೆ ಹೊರಟು ಮರುದಿನ ಬೆ. 6.30ಕ್ಕೆ ಬೆಂಗಳೂರು ರೀಚ್ ಆಗುತ್ತದೆ. ಬಸ್ಸಿನಲ್ಲಿ ತೆರಳುವುದರಿಂದ ಸಂಜೆ ಮೂರು ಗಂಟೆ ಕಾಲ ಮತಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಶಾಸಕರು ತಿಳಿಸಿದರು.
ರಾತ್ರಿ ಬಸ್ಸಿನಲ್ಲಿ ಪ್ರಯಾಣಕ್ಕೆ ಕಾರಣ
ತಾವು ರಾತ್ರಿ ಸಂಚರಿಸುವಾಗ ಸರಕಾರಿ ಬಸ್ಸನ್ನೆ ಆಯ್ಕೆ ಮಾಡಿಕೊಳ್ಳಲು ಕಾರಣವನ್ನು ರಮೇಶ ಭೂಸನೂರ ಬಹಿರಂಗ ಪಡಿಸಿದರು. 2008ರಲ್ಲಿ ಚುನಾವಣೆ ಮತ ಎಣಿಕೆ ದಿನ ಶಿರಡಿಯಿಂದ ವಾಪಸ್ಸಾಗುವಾಗ ಇವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಲ್ಲದೇ, ಮೊದಲ ಬಾರಿಗೆ ಶಾಸಕರಾಗಿದ್ದಾಗ ರಾತ್ರಿ ಬೆಂಗಳೂರಿನಿಂದ ಅಂದಿನ ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರ ಜೊತೆ ವಿಜಯಪುರಕ್ಕೆ ವಾಪಸ್ಸಾಗುವಾಗ ಚಿತ್ರದುರ್ಗದ ಬಳಿ ಇವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಕಾಲಿಗೆ ಪೆಟ್ಟಾಗಿತ್ತು. ಅಂದಿನಿಂದ ಬೆಂಗಳೂರು ಪ್ರಯಾಣಕ್ಕೆ ಇವರು ಸರಕಾರಿ ಬಸ್ಸನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತುಂಬಾ ಅನಿವಾರ್ಯವಿದ್ದರೆ ಮಾತ್ರ ಅದೂ ಕೂಡ ಹಗಲು ಹೊತ್ತಿನಲ್ಲಿ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವುದಾಗಿ ಶಾಸಕ ರಮೇಶ ಭೂಸನೂರ ತಿಳಿಸಿದರು.
ಬಾಳಪ್ಪ ಭೂಸನೂರ ಹೇಳಿದ್ದು
ಶಾಸಕರ ತಂದೆ ಬಾಳಪ್ಪ ಭೂಸನೂರ ವಯಸ್ಸು 84 ಆಗಿದ್ದರೂ ಇನ್ನೂ ಗಟ್ಟುಮುಟ್ಟಾಗಿದ್ದಾರೆ. ಕಣ್ಣಿಗೆ ಕನ್ನಡಕ ಬಳಸಲ್ಲ. ಬಿಪಿ, ಶುಗರ್ ಇಲ್ಲ. ಪ್ರತಿದಿನ ಆಲಮೇಲ ತಾಲೂಕಿನ ಬೀಮಾ ತೀರದ ದೇವಣಗಾಂವನಲ್ಲಿ ಹೊಲಕ್ಕೆ ಕೃಷಿ ಕೆಲಸ ಮಾಡಲು ನಡೆದುಕೊಂಡೇ ತಿರುಗಾಡುತ್ತಾರೆ.
ಈಗ ಮಗ ಶಾಸಕನಾಗಿದ್ದರೂ ಅವರಿಗೆ ಹಂಗುಬಿಂಗಿಲ್ಲ. ರೈಲಿನಲ್ಲಿ ಪ್ರಯಾಣಿಸಬೇಕು ಎಂದುಕೊಂಡಿದ್ದೆ. ಆದರೆ, ಮಗ ಬಸ್ಸಿನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾನೆ. ರಾತ್ರಿ ಒಂದೆರಡು ಬಾರಿ ಎಚ್ಚರವಾಗುತ್ತದೆ. ಆಗ ಬಸ್ಸನ್ನು ಐದಾರು ನಿಮಿಷ ನಿಲ್ಲಿಸಿದಾಗ ಐಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ರೈಲು ಸೂಕ್ತ ಎಂದುಕೊಂಡಿದ್ದೇನೆ. ಆದರೆ, ಸಮಯದ ಉಳಿತಾಯಕ್ಕಾಗಿ ಮಗ ರಮೇಶ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಬಾಳಪ್ಪ ಭೂಸನೂರ ಬಸವ ನಾಡು ವೆಬ್ ಜೊತೆ ತಮ್ಮ ಅನುಭವ ಹಂಚಿಕೊಂಡರು.
ಶಾಸಕ ರಮೇಶ ಭೂಸನೂರ ಅವರಿಗೆ ಬಿಪಿ ಇದೆ. ಅದು ಜನಪ್ರತಿನಿಧಿಯಾದವರಿಗೆ ಕೆಲಸ ಕಾರ್ಯಗಳ ಒತ್ತಡದಿಂದಾಗಿ ಬರುವ ಸಹಜ ಕಾಯಿಲೆ ಎನ್ನಬಹುದು. ಆದರೆ, ಶಾಸಕರ ತಂದೆ ಬಾಳಪ್ಪ ಭೂಸನೂರ ಅವರಿಗೆ ಬಿಪಿ ಮತ್ತು ಶುಗರ್ ಯಾವುದೂ ಇಲ್ಲ. ಅದ್ಯಾವುದೂ ಅವರಿಗೆ ಬಾರದಿರಲಿ.
ಶಾಸಕ ರಮೇಶ ಭೂಸನೂರ ಅವರ ಸರಳತೆ ಹೀಗೆಯೇ ಮುಂದುವರೆಯಲಿ. ಸಿಂದಗಿ ಮತಕ್ಷೇತ್ರದ ಜನರಿಗೆ ಶಾಸಕರಿಂದ ಇನ್ನೂ ಹೆಚ್ಚಿಗೆ ಕೆಲಸ ಕಾರ್ಯಗಳು ಆಗುವಂತಾಗಲಿ ಎಂಬುದು ಬಸವ ನಾಡು ವೆಬ್ ಆಶಯವಾಗಿದೆ.