ವಿಜಯಪುರ: ತಾಯಿಯೊಬ್ಬಳು ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಅಪರೂಪದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾನದಾರ ಎಂಬ ಮಹಿಳಡ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಮುಂಚೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಸ್ ಎಸ್ ಎಲ್ ಸಿ ಖಾಸಗಿ ಪರೀಕ್ಷೆಗಳನ್ಬು ಈ ಬಾರಿ ತಾಲೂಕು ಕೇಂದ್ರದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಹಿಳೆ ಸುಮಾರು 30 ರಿಂದ 35 ಕಿ. ಮೀ. ದೂರದಲ್ಲಿರುವ ಕೊಡಗಾನೂರಿನಿಂದ ಬಂದು ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಇಂಟರನ್ಯಾಷನಲ್ ಸ್ಕೂಲಿನಲ್ಲಿ ತೆರೆಯಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದರು.
ಪರೀಕ್ಷಾ ನಿಯಮಗಳಂತೆ ಪರೀಕ್ಷೆ ಸಮಯದಲ್ಲಿ ಮಗುವನ್ನು ಪರೀಕ್ಷಾ ಕೇಂದ್ರದ ಹೊರಗಡೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆ ಉಮಾ ಶಾರದಳ್ಳಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕಿ ನದಾಫ ಅವರ ಆರೈಕೆಯಲ್ಲಿ ಬಿಟ್ಟು ಪರೀಕ್ಷೆ ಬರೆದರು.
ಪರೀಕ್ಷೆ ಬರೆಯುವಾಗ
ಆಗಾವಗ ಪರೀಕ್ಷೆಯಿಂದ ಹೊರಗೆ ಬಂದು ಮಗುವಿಗೆ ಎದೆ ಹಾಲು, ನೀರು ಕುಡಿಸಿ ಸಮಾಧಾನ ಪಡಿಸಿ ಮತ್ತೆ ಕೊಠಡಿಯೊಳಗೆ ಬಂದು ಪರೀಕ್ಷೆ ಬರೆಯುತ್ತಿದ್ದರು. ಆಶಾ ಮತ್ತು ಸ್ಕೌಟ್ಸ್ ಸಿಬ್ಬಂದಿ ಪರೀಕ್ಷೆ ಮುಗಿಯುವವರೆಗೂ ಮಗುವಿನ ಲಾಲನೆ, ಪಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಗುವಿನ ತಾಯಿಯಾಗಿ ಸಂಸಾರದ ನೊಗ ಹೊತ್ತಿರುವ ಈ ಮಹಿಳೆ ಅವ್ವಳ ಜವಾಬ್ದಾರಿಯ ಜೊತೆಗೆ ವಿದ್ಯಾಭ್ಯಾಸದ ಬಗ್ಗೆ ಹೊಂದಿರುವ ಆಸಕ್ತಿ ಇತರರಿಗೆ ಸ್ಪೂರ್ತಿ ನೀಡುವಂತಿದೆ. ಈ ತಾಯಿಗೆ ಹ್ಯಾಟ್ಸಾಫ್ ಹೇಳಲೇಬೇಕು.