ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ವತಿಯಿಂದ ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ

ವಿಜಯಪುರ: ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಜನತೆ ರೋಸಿ ಹೋಗಿದ್ದು, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ಜಿಲ್ಲಾದ್ಯಂತ ಅಲ್ಲಲ್ಲಿ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಲಾಯಿತು.

ವಿಜಯಪುರ ನಗರದ ಖಾದಿ ಗ್ರಾಮೋದ್ಯೋಗ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲೆಂಡರ್‍ಗಳು ಮತ್ತು ಮೋಟರ ಸೈಕಲ್‍ಗಳನ್ನು ಅಡ್ಡ ಮಲಗಿಸಿ ಅವುಗಳಿಗೆ ಹಾರ ಹಾಕಿ ಹಲಿಗೆಯನ್ನು ಬಾರಿಸುತ್ತ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹನ ಮಾಡಿದರು.

ನಗರದ ಜುಮ್ಮಾ ಮಸೀದಿ ಬಳಿ ಮುಖಂಡ ವಸಂತ ಹೊನಮೋಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ ಹಮೀದ ಮುಶ್ರಿಫ್, ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ತೈಲ ಹಾಗೂ ಗ್ಯಾಸ್ ಬೆಲೆಗಳನ್ನು ತಟಸ್ಥವಾಗಿರಿಸಿದ್ದ ಕೇಂದ್ರ ಸರಕಾರ ಚುನಾವಣೆ ಮುಗಿದ ನಂತರ ಈಗ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲೆಂಡರ್ ಬೆಲೆಗಳನ್ನು ಪ್ರತಿದಿನ ಏರಿಸುತ್ತಿದೆ.  ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ಜನರ ಜೀವನ ದುಸ್ತರವಾಗಿದೆ.  ಕೇಂದ್ರದ ಮೋದಿ ಸರಕಾರ ಜನರನ್ನು ಮತ್ತೊಮ್ಮೆ ವಂಚಿಸಿದೆ.  ಇದು ಮೋದಿ ಸರಕಾರ ಸಂಪೂರ್ಣ ಜನವಿರೋಧಿ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಗ್ಯಾಸ್ ಬೆಲೆ ಹೆಚ್ಚಳದಿಂದಾಗಿ ಜನರ ಸುಲಿಗೆ ನಡೆಸಿದಂತಾಗುತ್ತಿದೆ.  ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ ಪ್ರಾರಂಭ ಮಾಡಿದ್ದೇವೆ.  ಸಾಮಾನ್ಯ ಜನರಿಗೆ ಮನವರಿಕೆ ಯಾಗುವವರೆಗೂ ನಾವು ಈ ಅಭಿಯಾನವನ್ನು ನಡೆಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪುರ, ಕಲ್ಲಪ್ಪ ಫಾರಶೆಟ್ಟಿ ಅರುಣ ಭಜಂತ್ರಿ, ರವಿ ಜಾದವ, ಧನರಾಜ ಎ, ಮಲ್ಲು ತೊರವಿ, ತಿಪ್ಪಣ್ಣ ಕಮಲದಿನ್ನಿ, ಈರಪ್ಪ ಕುಂಬಾರ, ಇರಫಾನ ಶೇಖ, ಮಹಿಬುಬ ಮಧಬಾವಿ. ಶಕೀಲ ಸುತಾರ. ಮಂಜುನಾಥ ನೀಡೂಣಿ. ಶಂಕರ ಮೊಧಿ. ಮಂಜುನಾಥ ಪುಜಾರಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌