ವಿಜಯಪುರ: ನಗರದಲ್ಲಿ ಕನ್ನಡ(Kannada) ಸಾಹಿತ್ಯ(Literature) ಸಮ್ಮೇಳನದಲ್ಲಿ(Conference) ಮರಾಠಿ ಹಾಡಿನ ನೃತ್ಯ(Marathi Song Dance) ಆಯೋಜನೆಯಿಂದ ಸಿಟ್ಟಾದ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರಿಗೆ ಖಡಕ್ಕಾಗಿ ಪತ್ರ ಬರೆದ ಘಟನೆ ನಡೆದಿದೆ. ಈ ಪತ್ರದಿಂದ ಎಚ್ಚೆತ್ತುಕೊಂಡ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ವಿಷಾಧ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 26 ಮತ್ತು 27ರಂದು ನಡೆದಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮರಾಠಿ ಲಾವಣಿ ನೃತ್ಯ ಆಯೋಜನೆ ಮಾಡಲಾಗಿತ್ತು. ವಿಜಯಪುರ ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವತಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದಳು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ನೃತ್ಯಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದರು. ಇದು ಕನ್ನಡ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಸಿಟ್ಟಾದ ಕನ್ನಡ ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಅವರಿಗೆ ದೂರು ನೀಡಿದ್ದರು.
ಈ ವಿಷಯ ತಿಳಿಯುತ್ತಲೇ ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರಿಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡು ಸ್ಪಷ್ಟನೆ ಕೇಳಿದ್ದಾರೆ. ವೇದಿಕೆಯ ಮೇಲೆಯೇ ಮರಾಠಿ ನೃತ್ಯಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಮಹೇಶ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮರಾಠಿ ಡಾನ್ಸ್ ನಡೆಯುತ್ತಿದ್ದರೈ ನೋಡುತ್ತ ಕುಳಿತ ಮುಖಂಡರ ವಿರುದ್ಧೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು 106 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಪ್ಪು ಚುಕ್ಕೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಸೃಷ್ಟಿಸುವ ದಾಂದಲೇ ನಿಮಗೆ ಗೊತ್ತಿಲ್ಲವೇ ಎಂದು ತರಾಟೆ ತೆಗೆದುಕೊಂಡಿರುವ ಅವರು, ಈ ಘಟನೆ ನಡೆದು ಹಲವು ದಿನಗಳು ಕಳೆದರೂ ಈವರೆಗೂ ವಿಷಾದ ವ್ಯಕ್ತ ಪಡೆಸದಿರುವುದಕ್ಕೆ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರನ್ನು ಮಹೇಶ ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗಲಾದರೂ ಮಾಧ್ಯಮಗಳ ಎದುರು ವಿಷಾದ ವ್ಯಕ್ತಪಡಿಸಲು ಪತ್ರದಲ್ಲಿ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ಪತ್ರದ ಮೂಲಕ ತಕ್ಷಣವೇ ಧೀರ್ಘ ವಿವರಣೆ ನೀಡುವಂತೆಯೂ ಸೂಚನೆ ನೀಡಿದ್ದಾರೆ. ಇಂಥ ಘಟನೆ ಮರುಕಳಿಸಿದರೆ ಕಸಾಪ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹೇಶ ಜೋಶಿ ಅವರು ಹಾಸಿಂಪೀರ ವಾಲೀಕಾರ ಅವರಿಗೆ ಬರೆದ ಪತ್ರದ ಸಂಪೂರ್ಣ ಸಾರಾಂಶ
ಗೆ,
ಶ್ರೀ ಹಾಸಿಂಪೀರ್ ವಾಲೀಕಾರ್ ಅವರು,
ಅಧ್ಯಕ್ಷರು, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ವಿಜಯಪುರ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕದ ಸಂವರ್ಧನೆಗಾಗಿ ಕಟಿಬದ್ಧವಾಗಿರುವ ಸಂಸ್ಥೆ, ಕನ್ನಡದ ಉಳಿವಿಗಾಗಿ ಕಳೆದ 106 ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿದೆ.
ನೀವು ನಡೆಸಿದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯವನ್ನು ಆಯೋಜಿಸಿದ್ದೀರಿ. ವೇದಿಕೆ ಮೇಲೆ ಕುಳಿತವರ ಸಮ್ಮುಖದಲ್ಲೇ ನೃತ್ಯ ಪ್ರದರ್ಶನ ನಡೆದಿದೆ. ಆದರೆ ಅಲ್ಲಿದ್ದ ಯಾವ ಗಣ್ಯ ವ್ಯಕ್ತಿಯೂ ಇದನ್ನು ಪ್ರತಿಭಟಿಸದೆ ಕುಳಿತಿರುವುದು ಕಾಣುತ್ತದೆ. ಇಡೀ ನಾಡಿನಾದ್ಯಂತ ಈ ನೃತ್ಯದ ತುಣುಕು ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳ ಮೂಲಕ ಬಿತ್ತರಗೊಳ್ಳುತ್ತಿದೆ. ನನಗೆ ಸಾವಿರಾರು ಸಂದೇಶಗಳು ಬಂದಿದ್ದು, ತಮ್ಮ ಈ ಬೇಜವಾಬ್ದಾರಿಯು ಕಸಾಪಕ್ಕೆ ಮುಜುಗರ ಉಂಟು ಮಾಡಿದೆ.
ಮರಾಠಿ ಭಾಷಿಕರು ಬೆಳಗಾವಿಯ ಗಡಿಯಲ್ಲಿ ಇನ್ನಿಲ್ಲದ ದಾಂಧಲೆ ಸೃಷ್ಟಿಸುತ್ತಿರುತ್ತಾರೆ. ಸದಾ ಕನ್ನಡಿಗರನ್ನು ಕೆಣಕುತ್ತ ಶಾಂತಿ ಮತ್ತು ಶಿಸ್ತನ್ನು ಉಲ್ಲಂಘಿಸುತ್ತಿರುತ್ತಾರೆ. ಉಂಡ ಮನೆಗೆ ಕನ್ನ ಹಾಕುವ ಪ್ರವೃತ್ತಿ ಅವರದು. ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆ ಪವಿತ್ರವಾದುದು. ಅದನ್ನು ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು. ಇಂತಹ ಕೃತ್ಯಗಳು ಮರುಕಳಿಸಬಾರದು. ಎಚ್ಚರದ ನಡ ನಿಮ್ಮದಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಬಾರದು. ಯಾವ ರೀತಿಯಲ್ಲಾದರೂ ನೀವು ಇದಕ್ಕೆ ತಪ್ಪಿ ನಡೆದರೆ ನಿಮ್ಮ ಮೇಲೆ ಪರಿಷತ್ತಿನ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳಬೇಕಾಗುತ್ತದೆ.
ನೀವು ಮರಾಠಿ ನೃತ್ಯ ಆಯೋಜಿಸಿದ್ದು ಪರಿಷತ್ತಿನ ಶತಮಾನಕ್ಕೂ ಮೀರಿದ ಇತಿಹಾಸದಲ್ಲಿ ಕಪ್ಪುಚುಕ್ಕೆ. ಮಾಧ್ಯಮದವರು, ಕನ್ನಡಪರ ಸಂಘಟನೆಗಳವರು ಈ ಕುರಿತು ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ. ನೀವು ಈ ಕುರಿತು ತಕ್ಷಣ ವಿμÁದ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿ. ನೀವು ಮಾಡಿರುವ ಕಾರ್ಯ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಕೂಡಲೇ ಈ ಕುರಿತು ದೀರ್ಘ ವಿವರಣೆಯನ್ನು ಪರಿಷತ್ತಿಗೆ ಕೂಡಲೇ ಮಿಂಚಂಚೆ ಮೂಲಕ ಕಳುಹಿಸಲು ಸೂಚಿಸಿದೆ.
ವಂದನೆಗಳು.
ನಿಮ್ಮ ವಿಶ್ವಾಸಿ
(ನಾಡೋಜ ಡಾ. ಮಹೇಶ ಜೋಶಿ)
ಅಧ್ಯಕ್ಷರು.
ಘಟನೆಗೆ ವಿಷಾಧ ವ್ಯಕ್ತಪಡಿಸಿರ ಹಾಸಿಂಪೀರ ವಾಲಿಕಾರ
ರಾಜ್ಯಾಧ್ಯಕ್ಷರಿಂದ ಖಡಕ್ ಪತ್ರ ಬರುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡಿರುವ ಹಾಸಿಂಪೀರ ವಾಲಿಕಾರ ಅವರು, ಮಾಧ್ಯಮ ಪ್ರಕಟಣೆ ನೀಡಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮನರಂಜನೆಯ ಕಾರ್ಯಕ್ರಮದಲ್ಲಿ ಕಲಾವಿದೆ ಮರಾಠಿ ಲಾವಣಿ ನೃತ್ಯ ಮಾಡಿದ್ದು ನನ್ನ ಲೋಪವಾಗಿದೆ ಆದ್ದರಿಂದ ಕನ್ನಡ ನಾಡಿನ ಜನತೆಗೆ ಇದರಿಂದ ನೊವಾಗಿದ್ದು ನಾನು ವಿಷಾಧ ವ್ಯಕ್ತಪಡಿಸಿದ್ದೆನೆ.
ಇಂತಹ ತಪ್ಪುಗಳು ಇನ್ನೊಮ್ಮೆ ಆಗದಂತೆ ಎಚ್ಚರಿಕೆ ವಹಿಸುತ್ತೆನೆ ಕಸಾಪ ಎಲ್ಲರ ಸ್ವತ್ತಾಗಿದೆ ಎಲ್ಲರ ಸಲಹೆ ಮಾರ್ಗದರ್ಶ ಸದಾ ಇರಲಿ. ಈ ನೃತ್ಯದಿಂದ ಕನ್ನಡ ಮನಸ್ಸುಗಳಿಗೆ ನೊವಾಗಿದೆ ದಯಮಾಡಿ ನಾನು ವಿನಮ್ರವಾಗಿ ವಿಷಾಧ ಹೇಳುತ್ತೇನೆ ಎಂದು ವಿಜಯಪುರ ಕನ್ನಡ ಸಾಹಿತ್ಯ ಪರಿಷತ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.