ವಿಜಯಪುರ: ಶ್ರೀ ಆದಿ(Shree Adi) ಜಗದ್ಗುರು(Jagadguru) ಪಂಚಾಚಾರ್ಯರ(Panchacharya) ಯುಗಮಾನೋತ್ಸವ(Yugamanotsava), ಅಖಿಲ ಭಾರತ ವೀರಶೈವ(All India Veerashaiva Conference) ಶಿವಾಚಾರ್ಯರ ಸಮ್ಮೇಳನ ಏ. 6 ರಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗ ಮಠದ ಮಠಾಧೀಶರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರ ಕುರಿತು ಬರೆದಿರುವ ಲೇಖನ ಇಲ್ಲಿದೆ.
ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಹುಕ್ಕೇರಿ
ಸಾತ್ವಿಕ ವ್ಯಕ್ತಿತ್ವದವರು, ತಾತ್ವಿಕ ವಿಚಾರದವರು, ಮಾತೃ ಹೃದಯಗಳು, ಮಮತಾಮಯಿ ಗಳು, ತಮ್ಮ ಹೃದಯದ ತುಂಬಾ ಪ್ರೀತಿಯನ್ನೇ ಹೊತ್ತುಕೊಂಡವರು, ನಮ್ಮ ಶಿವಾಚಾರ್ಯರಲ್ಲಿಯೇ ಅಗ್ರಗಣ್ಯರು ಆಗಿರುವ ಸಿಂದಗಿಯ ಸಾರಂಗಮಠದ ಪರಮಪೂಜ್ಯ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು.
ನಮಗೆ ಬಾಲ್ಯದಿಂದಲೂ ಅವರನ್ನು ಕಂಡರೆ ಅಪಾರ ಗೌರವ. ಏಕೆಂದರೆ ಅಂದು ಮಕ್ಕಳ ಶಿಕ್ಷಣಕ್ಕಾಗಿ ತಮಗೆ ಇರುವ ಮಠವನ್ನೆ ಕೊಟ್ಟವರು. ಯಾರೇ ಬರಲಿ ಎಲ್ಲರೊಂದಿಗೆ ಬೆರೆಯುವ, ತತ್ವವನ್ನು ಅರಿಯುವ ಅಪರೂಪದ ಗುರುಗಳು. ಸ್ವಾಮಿಗಳಿಗಾಗಿ ಶಿಬಿರವನ್ನು ಮಾಡಿದವರು. ಇಂದು ನಾವೆಲ್ಲರೂ ಹೆಮ್ಮೆ ಪಡುವಂಥ ಅಪರೂಪದ ಕಾರ್ಯವನ್ನು ಮಾಡುತಿದ್ದಾರೆ. ಪಂಚಾಚಾರ್ಯರ ಯುಗಮಾನೋತ್ಸ, ಇದಕ್ಕೆ ನಾವು ಎಷ್ಟು ಕೃತಜ್ಞತೆಯಿಂದ ಇದ್ದರೂ ಕೂಡ ಕಡಿಮೆಯೇ.
ಸಿದ್ಧಾಂತ ಶಿಖಾಮಣಿಯನ್ನು ರಚಿಸಿದ ಶಿವಯೋಗಿ ಶಿವಾಚಾರ್ಯರ ಹೆಸರನ್ನು ಹೇಳುತಿದ್ದೆವಷ್ಟೇ ಆದರೆ ತಾವು ಹಾಗೆ ಮಾಡಲಿಲ್ಲ, ಅವರ ಹೆಸರಿನಿಂದ ಸಿದ್ಧಾಂತಶಿಖಾಮಣಿಯ ವಿಚಾರದಲ್ಲಿ ಕಾರ್ಯವನ್ನು ಮಾಡಿರುವ ವ್ಯಕ್ತಿಗಳಿಗೆ ‘ಶಿವಯೋಗಿ ಶಿವಾಚಾರ್ಯ ಶ್ರೀ ಪ್ರಶಸ್ತಿ’ ನೀಡುವುದರ ಜೊತೆಜೊತೆಗೆ ಒಂದು ಲಕ್ಷ ನಗದು ಹಣವನ್ನು ಇಟ್ಟು ಗೌರವಿಸುವ ಕಾರ್ಯಕ್ಕೆ ಮುಂದಾಗಿರುವ ತಮ್ಮ ಮುಂದಾಲೋಚನೆಯ ಕಾರ್ಯಕ್ಕೆ ನಾವು ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ. ತಾವು ತುಂಬಾ ಸಾತ್ವಿಕರು. ನಮಗೆ ನಿಮ್ಮೊಂದಿಗೆ ಏನು ಮಾತನಾಡಬೇಕು ಎನ್ನುವುದು ತಿಳಿಯುತ್ತಿಲ್ಲ, ಆದರೆ ನಿಮ್ಮನ್ನು ಮನಃಪೂರ್ವಕವಾಗಿ ಗೌರವಿಸುತ್ತೇನೆ. ಮನಪೂರ್ವಕವಾಗಿ ನಿಮ್ಮನ್ನು ಪ್ರೀತಿಸುತ್ತೇವೆ. ನಮಗೆ ಹೆಮ್ಮೆಯೆನಿಸುತ್ತದೆ, ನಿಮ್ಮಂತ ಅಪರೂಪದ ಗುರುಗಳಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುವುದರ ಮುಖಾಂತರ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ ಎನ್ನುವ ಭಾವನೆ ನಮ್ಮದು. ತಾವು ತುಂಬಾನೆ ಸಾತ್ವಿಕರು ನಿಮಗೆ ಕೋಟಿ ಕೋಟಿ ಕೋಟಿ ನಮನಗಳು ಗುರುಗಳೆ. ನಾನು ಕೂಡ ಬರುತ್ತೇನೆ. ನಿಮ್ಮ ಆ ಒಂದು ಕಾರ್ಯವನ್ನು ನಮ್ಮ ಬದುಕಿನಲ್ಲಿಯೂ ಮಾದರಿಯಾಗಿ ತೆಗೆದುಕೊಳ್ಳುತ್ತೇವೆ. ಎನ್ನುವ ಮಾತು ನಮ್ಮಲ್ಲಿ.
ಸುಸಂಸ್ಕೃತ ಮನೆತನದ ತಂದೆ ಎನ್ ಚನ್ನಯ್ಯಸ್ವಾಮಿ ತಾಯಿ ಶಾರದಾದೇವಿಯವರ ಉದರದಲ್ಲಿ ಅಗಷ್ಟ 22, 1959ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಂದೆ-ತಾಯಿ ಆಶ್ರಯದಲ್ಲಿ ಪಡೆದರು. ಮಾಧ್ಯಮಿಕದಿಂದ ಎಂ.ಎ.ವರೆಗೆ ಧಾರವಾಡ ಮುರುಘಾಮಠದ ಶ್ರೀ ಮಹಾಂತಪ್ಪಗಳ ಆಶ್ರಯದಲ್ಲಿ ಸಂಸ್ಕಾರ ಹೊಂದಿ ಸಮಾಜಮುಖಿಯಾಗಿ ಬೆಳೆಯತೊಡಗಿದರು.18-11-1989ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ತಮ್ಮ ಗುರುಗಳಾದ ಶ್ರೀ ಚನ್ನವೀರಸ್ವಾಮಿಗಳು, 1969ರಲ್ಲಿ ಸ್ಥಾಪಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯನ್ನು ಎಲ್ ಕೆ ಜಿಯಿಂದ ಪಿ.ಜಿ.ವರೆಗೆ ಬೆಳೆಸಿದರು. ಪೂಜ್ಯರು ತಮ್ಮನ್ನು ಪೂರ್ಣಪ್ರಮಾಣದಲ್ಲಿ ಕ್ರಿಯಾಶೀಲಗೊಳಿಸಿಕೊಂಡು ಸಮಾಜವನ್ನು ಉದ್ಧಾರಮಾಡುವ ಹೊಣೆಹೊತ್ತರು. ಅವರು ಕತ್ತಲೆ ಕವಿದಿದ್ದ ಸಮಾಜವನ್ನು ಶುದ್ಧ ಮತ್ತು ಸಮೃದ್ಧ ನೆಲೆಯತ್ತ ಕೊಂಡೊಯ್ದದ್ದು ಅವರ ಸಾಧನೆಯ ಸತ್ಪಲ. ಸಮಗ್ರ ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ ಯತಿವರ್ಯ. ಅವರು ನಿಜವನರಿದ ನಿಶ್ಚಿಂತರು. ಪೂಜ್ಯರ ಬದುಕೇ ಒಂದು ಬಯಲ. ಅಹಂ, ಅಭಿಮಾನಗಳಿಗೆ ಇಂಬಿಲ್ಲದ ಅನುಭವದ ಮಕರಂದ, ಅನುಭಾವದ ಅಮೃತ ನುಡಿಗಳು. ಹಮ್ಮು ಬಿಮ್ಮುಗಳನ್ನು ಮೀರಿ ನಿಂತಂತಹ ನಿಗರ್ವಿಗಳು.
ಸಮಾಜಮುಖಿ ಆಲೋಚನೆ ಹಾಗೂ ಸಮಾಜೋಧಾರ್ಮಿಕ ಚಟುವಟಿಕೆಗಳನ್ನು, ಅನನ್ಯ ಗುರುಸೇವೆಯನ್ನು ಮನಗಂಡ ಶ್ರೀಶೈಲ ಪೀಠದ ಇಂದಿನ ಜಗದ್ಗುರುಗಳು ಗುರುಕುಲ ಭಾಸ್ಕರ ಪ್ರಶಸ್ತಿಯನ್ನು, ಕಾಶೀ ಪೀಠದ ಜಗದ್ಗುರುಗಳು ಶಿವಾಚಾರ್ಯರತ್ನ ಪ್ರಶಸ್ತಿಯನ್ನು ದಯಪಾಲಿಸಿದ್ದಾರೆ.
ಅತ್ಯುನ್ನತ ಸಾಧನೆ ಗೈದ ವಿಜ್ಞಾನಿ, ಶಿಕ್ಷಣತಜ್ಞ, ಕೃಷಿವಿಜ್ಞಾನಿ, ಸಮಾಜ ಸೇವಕರನ್ನು ಗುರುತಿಸಿ ಶ್ರೀಮಠದ ವತಿಯಿಂದ ಪ್ರತಿ ವರ್ಷ ಒಬ್ಬರಿಗೆ ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಭಾಸ್ಕರ ಪ್ರಶಸ್ತಿಯನ್ನು 2016ರಿಂದ ನೀಡುತ್ತಲಿದ್ದಾರೆ. ಈಗಾಗಲೇ ನ್ಯಾನೊ ತಂತ್ರಜ್ಞ ಪ್ರೊ. ಸಿ. ಎನ್. ಆರ್. ರಾವ್, ಬಾಹ್ಯಾಕಾಶ ವಿಜ್ಞಾನಿ ಯು. ಆರ್. ರಾವ್, ಇಸ್ರೊ. ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ, ಕೃಷಿ ವಿಜ್ಞಾನಿ ಡಾ. ಎಸ್. ಎ. ಪಾಟೀಲ ಮೊದಲಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರತಿ ವರ್ಷ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಆ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಸಹಾಯ ಪಡೆದ ಅನೇಕರು ಇಂಜಿನಿಯರಾಗಿ, ಡಾಕ್ಟರರಾಗಿ, ಶಿಕ್ಷಕರಾಗಿ ಉನ್ನತ ಮಟ್ಟದ ಹುದ್ದೆಯಲ್ಲಿದ್ದಾರೆ. ಪೂಜ್ಯರು ಮಾಡಿರುವ, ಮಾಡುತ್ತಿರುವ ಕಾಯಕ ಬಹುಶ್ರುತವುಳ್ಳದ್ದು. ಅವರ ಕುರಿತಾಗಿ ಬರೆದರೆ ಉತ್ಕೃಷ್ಟ ಗ್ರಂಥವಾದೀತು. ಅಂತಹ ಅಪರೂಪದ ಕಾಯಕಯೋಗಿ ನೂರ್ಕಾಲು ಬಾಳಲಿ.