ವಿಜಯಪುರ: ಜಾಗತಿಕರಣ(Globalisation), ಆಧುನಿಕರಣದ(Modernisation) ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿ(Culture) ಮತ್ತು ಆಚಾರಗಳನ್ನು ಮರೆಯಬಾರದು. ಜಗತ್ತಿಗೆ ಸಂಸ್ಕೃತಿಯನ್ನು ಮತ್ತು ಹಬ್ಬಗಳ(Festival) ವಿಶೇಷತೆಯನ್ನು(Speciality) ಪರಿಚಯಿಸಿದವರು ಭಾರತೀಯರು. ನಮ್ಮ ಹಬ್ಬಗಳನ್ನು ವಿದೇಶಿಗರೂ ಕೂಡಾ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜಿ. ರೋಡಗಿ ಹೇಳಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಮಹಿಳಾ ವೇದಿಕೆಗಳು ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ-2022 ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಕಳೆದ ವರ್ಷದ ಎಲ್ಲ ಕಹಿಗಳನ್ನು ಮರೆತು ಜೀವನದ ಪ್ರತಿ ಹೆಜ್ಜೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಸಂತೋಷವನ್ನು ನೀಡುವ ಉದಾರತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬದಲಾವಣೆ ಜಗದ ನಿಯಮ. ಬದಲಾಣೆಗೆ ನಾವು ಹೊಂದಿಕೊಂಡು ಬದುಕಿನಲ್ಲಿ ನಾವು ಹೊಸತನ ತಂದುಕೊಳ್ಳಬೇಕು. ಉಗಾದಿಯ ಈ ಸಂದರ್ಭದಲ್ಲಿ ಕಹಿಯನ್ನು ನುಂಗಿ ಸಿಹಿಯನ್ನು ಹಂಚೋಣ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕನ್ನು ಸುಂದರವಾಗಿಸೋಣ ಪ್ರೊ. ಎಸ್. ಜಿ. ರೋಡಗಿ ಹೇಳಿದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಎಸ್. ತೋಳನೂರ ಮಾತನಾಡಿ, ಉಗಾದಿಯು ಕೇವಲ ಮನುಷ್ಯರಿಗೆ ಹಬ್ಬವಾಗಿರದೇ ಪ್ರಕೃತಿಗೆ ಸಂಭ್ರಮಿಸುವ ಹಬ್ಬವಾಗಿದೆ. ಹೊಸ ಯೋಜನೆ, ಹೊಸ ವಿಚಾರಗಳೊಂದಿಗೆ ಜೀವನವನ್ನು ಸಾರ್ಥಕಗೊಳಿಸೋಣ. ಕಹಿ ಮತ್ತು ಸಿಹಿಯನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಬೇಕು ಎಂದು ಹೇಳಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಐ. ಹಿರೇಮಠ ಮಾತನಾಡಿ, ವಿದ್ಯೆ, ಅಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸೋಣ. ಶಾಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುವುದು ಒಳ್ಳೆಯ ಬೆಳಗವಣಿಗೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಚಾರ್ಯ ಪ್ರೊ. ವಿ. ಎಸ್. ಬಗಲಿ, ಐ ಕ್ಯೂ ಎಸ್ ಸಿ ಸಂಯೋಜಕಿ ಡಾ.ಭಾರತಿ ಮಠ, ಮಹಿಳಾ ವೇದಿಕೆ ಮುಖ್ಯಸ್ಥೆ ಡಾ. ಮಹಾನಂದ ಪಾಟೀಲ, ಪ್ರೊ. ಐ. ಬಿ. ಚಿಪ್ಪಲಕಟ್ಟಿ, ದೈಹಿಕ ನಿರ್ದೇಶಕ ದಿಲೀಪಗೌಡ ಪಾಟೀಲ, ಪ್ರೊ. ಈರಣ್ಣ ಜಾಬಾ, ಪ್ರೊ. ಅನ್ನಪೂರ್ಣ ತುಪ್ಪದ, ಕಾಲೇಜು ಕಛೇರಿ ಮುಖ್ಯಸ್ಥ ಎಸ್. ಪಿ. ಕನ್ನೂರ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮೀಳನಾಡು ರಾಜ್ಯಗಳ ಸಾಂಪ್ರದಾಯಿಕ ಉಡುಗೆಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಬೇವು ಬೆಲ್ಲವನ್ನು ಹಂಚಿಕೊಂಡು ಉಗಾದಿ ಹಬ್ಬವನ್ನು ಸಂಭ್ರಮಿಸಿದರು.
ಶಿವಪ್ರಸಾದ ಚಿಕ್ಕಪಟ ಪ್ರಾರ್ಥಿಸಿದರು. ಕುಮಾರಿ ಸ್ನೇಹಾ ಬೆನಕಟ್ಟಿ ಸ್ವಾಗತಿಸಿದರು. ಕುಮಾರಿ ಶ್ವೇತಾ ಜೈನ ನಿರೂಪಿಸಿದರು. ಕುಮಾರಿ ಶೃತಿ ಮಾಳಿ ವಂದಿಸಿದರು.