ವಿಜಯಪುರ: ಆಜಾಂ(Azan) ಹೆಸರಿನಲ್ಲಿ(Name) ಧ್ವನಿವರ್ಧಕಗಳ(Loud Speakers) ಬಳಕೆ(Use) ಕುರಿತು ಸರಕಾರ(Government) ಅನುಸರಿಸುತ್ತಿರುವ ಮಾನದಂಡ ಎಲ್ಲ ಸಮುದಾಯದವರ ಲೌಡ್ ಸ್ಪೀಕರ್ ಬಳಕೆಗೂ ಅನ್ವಯಿಸಬೇಕು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಮುಖಂಡರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.
ಧ್ವನಿವರ್ಧಕಗಳಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದ್ದರೆ ಯಾವುದೇ ಧರ್ಮದವರಾಗಲಿ ಲೌಡ್ ಸ್ಪೀಕರ್ ಧ್ವನಿಯನ್ನು ಕಡಿಮೆ ಮಾಡುವ ಮೂಲಕ ಸಹಬಾಳ್ವೆ ನಡೆಸಬೇಕು. ಜಿಲ್ಲೆಯಲ್ಲಿಯೂ ಧ್ವನಿವರ್ಧಕ ಬಳಕೆಯ ಕುರಿತು ಜಿಲ್ಲಾಡಳಿತ ಮಸೀದಿಗಳಿಗೆ ನೋಟೀಸ್ ಜಾರಿ ಮಾಡಿದೆ. ಸೌಂಡ್ ಬಳಕೆ ಇಂತಿಷ್ಟೇ ಡೆಸಿಬಲ್ ಇರಬೇಕು ಎಂದು ನಿಗದಿ ಪಡಿಸಿದೆ. ಆದರೆ, ಈ ಧ್ವನಿವರ್ಧಕದ ಶಬ್ದದ ಅಳತೆಯನ್ನು ಮಾಡುವವರು ಯಾರು? ಪರಿಸರ ಮಾಲಿನ್ಯ, ಧ್ವನಿ ಮಾಲಿನ್ಯದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು ಜಿಲ್ಲಾಡಳಿತ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ವಿಜಯಪುರ ಮಸೀದಿಗಳ ಆಡಳಿತ ಮಂಡಳಿಗಳು ಸರಕಾರ ನಿಗದಿಪಡಿಸಿದಕ್ಕಿಂತ ಕಡಿಮೆ ಮಾಪನದಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ಮಠ, ಮಂದಿರಗಳ ಧ್ವನಿ ವರ್ಧಕದ ಶಬ್ದವನ್ನೂ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ ಅವರು , ಇದನ್ನು ಯಾರೂ ತಪ್ಪಾಗಿ ಅರ್ಥೈಸಬಾರದು. ಈ ಕುರಿತು ನಾವು ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಂ ಹಿರಿಯ ಮುಖಂಡರೊಂದಿಗೆ ಚರ್ಚಿಸುತ್ತ ಬಂದಿದ್ದೇವೆ. ಇಸ್ಲಾಂ ಧರ್ಮದಲ್ಲಿ ಒಂದು ನಿಯಮವಿದೆ. ನಿಮ್ಮ ನೆರೆಹೊರೆಯವರ ಜೊತೆ ಸಹೋದರರಂತೆ ಬಾಳು. ನಿಮ್ಮ ನೆರೆಹೊರೆಯವರಿಗೆ ಹೊರೆಯಾಗದಂತೆ ಬಾಳು. ನೆರೆಹೊರೆಯವರಿಗೆ ನಿನ್ನಿಂದ ಸಮಸ್ಯೆ ಆಗುತ್ತಿದ್ದರೆ ಅದನ್ನು ಸರಿಪಡಿಸಿಕೋ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ನೀನು ಮುಸ್ಲಿಮನೇ ಅಲ್ಲ ಎಂದು ಧರ್ಮದಲ್ಲಿ ಹೇಳಲಾಗಿದೆ. ಈ ಕುರಿತು ಸಮಾಜದಲ್ಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಸಮಾಜದಲ್ಲಿ ಯಾವ ಸಮುದಾಯದವರು ಯಾರಿಗೂ ತೊಂದರೆಯಾಗದಂತೆ ವರ್ತಿಸಬೇಕು. ನೆರೆಹೊರೆಯವರು ಒಂದೇ ಆಗಿರಬೇಕು ಎಂದು ಅವರು ಹೇಳಿದರು.
ರಾಜ್ಯ ಸರಕಾರ, ಬಿಜೆಪಿ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಬಿಜೆಪಿ ಮುಖಂಡರು ಕೇವಲ ಹಿಜಾಬ್, ಹಲಾಲ್, ಅಜಾನ್, ಜಟ್ಕಾ ಆಜಾಂ ಕುರಿತು ಹೆಚ್ಚಿಗೆ ಚರ್ಚೆ ಹುಟ್ಟು ಹಾಕುತ್ತಿದ್ದಾರೆ. ಬೆಲೆಏರಿಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದಿನಬಳಕೆಯ ವಸ್ತುಗಳು, ಗೃಹ ಬಳಕೆ ವಸ್ತುಗಳು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯನ್ನು ತಡೆಯುತ್ತಿಲ್ಲ. ಬೆಲೆಯೇರಿಕೆ ಮರೆಮಾಚಲು ಬಿಜೆಪಿ ವಿವಾದಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದೆ. 12 ದಿನಗಳಲ್ಲಿ ಪೆಟ್ರೋಲ್ ಬೆಲೆ ರೂ. 12 ರಷ್ಟು ಹೆಚ್ಚಾಗಿದೆ. ಕಬ್ಬಿಣದ ಬೆಲೆ ರೂ. 80 ಹೆಚ್ಚಾಗಿದೆ. ಅಗತ್ಯ ವಸ್ತುಗಳ ಅಭಾವ ಸೃಷ್ಟಿಯಾಗಿದೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಆನಲೈನ್ ಕ್ಲಾಸ್ ನಿಂದಾಗಿ ಶಿಕ್ಷಣ ಹಾಳಾಗಿದೆ. ಅದನ್ಬು ಸರಿ ಮಾಡುವುದನ್ನು ಬಿಟ್ಟು ಹಿಜಾಬ್ ಹೆಸರಿನಲ್ಲಿ ಅಹಿಂದ ವರ್ಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.
ಹಿಜಾಬ್ ವಿಚಾರದ ಕುರಿತು ಹೈಕೋರ್ಟ್ ನೀಡಿರುವ ಆದೇಶವನ್ನು ಸರಕಾರ ತನ್ನ ಅನಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದೆ. ವಿನಾಕಾರಣ ಮುಸ್ಲಿಂ ಸಿಬ್ಬಂದಿಯನ್ನು ಅಮಾನತು ಮಾಡಲಾಗುತ್ತಿದೆ. ಕೆಲವು ಮತೀಯ ಸಂಘಟನೆಗಳು ಬಂದ್ ಕರೆ ನೀಡಿದ್ದವು. ಅದು ಸಮರ್ಥೀನೀಯ ಅಲ್ಲ. ಆದರೆ, ಇದೇ ನೆಪದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಸರಕಾರ ಸಂವಿಧಾನದ ಆದೇಶ ಉಲ್ಲಂಘಿಸಿ ಕೋಮು ಸಾಮರಸ್ಯ ಹಾಳು ಮಾಡುತ್ತ ಮತಬ್ಯಾಂಕ್ ರಾಜಕಾರಣದಲ್ಲ ಗಮನ ಹರಿಸಿದೆ. ಪರೀಕ್ಷಾ ಸಮಯದಲ್ಲಿ ಭಯದ ವಾತಾವರಣ ಸೃಷ್ಠಿಸಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಕಾವಿ ಬಗ್ಗೆ ಗೌರವವಿದೆ. ಆದರೆ, ಹಲಾಲ್ ಮತ್ತೀತರ ವಿಚಾರಗಳನ್ನು ಇಟ್ಟುಕೊಂಡು ಮುಸ್ಲಿಂ ವ್ಯಾಪಾರಿಗಳನ್ನು ಮತ್ತು ಅವರ ಉತ್ಪನ್ನಗಳನ್ನು ಖರೀದಿಸದಂತೆ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೆಲವರು ತ್ಯಾಗದ ಸಂಕೇತವಾಗಿರುವ ಕಾವಿ ಧರಿಸಿ ರಾಜಕೀಯ ಮಾಡುವ ಬದಲು ಕಾವಿ ಬದಿಗಿಟ್ಟು ರಾಜಕೀಯ ಮಾಡಲಿ ಎಂದು ಹೇಳಿದರು.
ಕೆಲವು ಸಂಘಟನೆಗಳವು ಈ ದೇಶ ನಮ್ಮದು ಎನ್ನುತ್ತಾರೆ. ಈ ದೇಶ ಎಲ್ಲರಿಗೂ ಸೇರಿದೆ. ಹಿಂದೂ ಮತ್ತು ಮುಸ್ಲಿಮರೂ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಷ್ಟೇಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ಕೆಲವರು ಜಾಣಮೌನ ವಹಿಸಿದ್ದಾರೆ. ನಾಗರಿಕ ಸಮಾಜ ಇದನ್ನು ಖಂಡಿಸಿ ಧ್ವನಿ ಎತ್ತಲಿ. ಡಿಜೆಗೂ ಕಡಿವಾಣ ಹಾಕುವ ಅವಶ್ಯಕತೆಯಿದೆ. ರಾತ್ರಿ ವೇಳೆ ದೊಡ್ಡದಾಗಿ ಪಟಾಕಿ ಸಿಡಿಸುವುದಕ್ಕೂ ಕಡಿವಾಣ ಹಾಕಬೇಕು ಎಂದು ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ಮುಖಂಡರಾದ ಅಕ್ರಂ ಮಾಶ್ಯಾಳಕರ ಉಪಸ್ಥಿತರಿದ್ದರು.