ರಾಯಚೂರು ಜಿಲ್ಲೆಯಲ್ಲಿ 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ- ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ಡಿಬಾರ, ಕೇಸ್ ದಾಖಲು, ಹಲವರಿಗೆ ಶಿಕ್ಷೆ

ವಿಜಯಪುರ: ರಾಯಚೂರು+Raichur) ಜಿಲ್ಲೆಯಲ್ಲಿ(District) ಬುಧವಾರ(Wednesday) ಸಮಾಜ ವಿಜ್ಞಾನ(Social Science) ಪ್ರಶ್ನೆ ಪತ್ರಿಕೆ(Question Paper) ಸೋರಿಕೆಯಾಗಿತ್ತು.  ಈಗ ಅದರ ಲಿಂಕ್ ವಿಜಯಪುರ ಜಿಲ್ಲೆಯಲ್ಲಿ ಪತ್ತೆಯಾಯ್ತು. 

ಹೌದು.  ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದ್ದು, ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

ಸೋರಿಕೆಯಾಗಿದ್ದ ಪ್ರಶ್ನೆ ಪತ್ರಿಕೆಗಳು.

ಬುಧವಾರ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಮೊಲೈಲ್ ವಾಟ್ಸಾಪ್ ನಲ್ಲಿ ಹರಿದಾಡಿತ್ತು.  ಆದರೆ, ಇದರ ಜಾಡು ಕಂಡು ಹಿಡಿಯುವುದು ಅಧಿಕಾರಿಗಳಿಗೆ ತಲೆನೋವಾಗಿತ್ತು.  ಪರೀಕ್ಷೆ ಮುಗಿಯುವ ಮೊದಲೇ ವೈರಲ್ ಆಗಿದ್ದ ಈ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು.  ಆಗ ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ಪ್ರಶ್ನೆ ಪತ್ರಿಕೆ ಒಟ್ಟು ಎಂಟು ಪುಟಗಳಲ್ಲಿ ಮೂರು ಪುಟಗಳು ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ಸೋರಿಕೆ ಮಾಡಿರುವುದನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ದೃಢ ಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ವಿಜಯಪುರ ಡಿಡಿಪಿಐ ಎನ್. ವಿ. ಹೊಸೂರ, ಮುದ್ದೇಬಿಹಾಳ ತಾಲೂಕಿನ ಢವಳಗಿ ಎಂಬಿಪಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.  ಪ್ರಶ್ನೆ ಸೋರಿಕೆಯಾಗಲು ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.  ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕರಿಸಿದ ರೂಢಗಿ ಗ್ರಾಮದ ಸರಕಾರಿ ಆರ್ ಎಂ ಎಸ್ ಎ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ ಕುಂದರಗಿಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ.  ಅಲ್ಲದೇ, ಈ ವಿದ್ಯಾರ್ಥಿಯು ಕಿಟಕಿಯ ಮೂಲಕ ಪ್ರಶ್ನೆಪತ್ರಿಕೆಯನ್ನು ಮೊಬೈಲಿನಲ್ಲಿ ಚಿತ್ರೀಕರಿಸಿದ ವ್ಯಕ್ತಿಯ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಿಕ್ಷಣ ಕಾಯಿದೆ 1983 ಮತ್ತು 2017ರ ತಿದ್ದುಪಡಿ ಕಾಯ್ದೆ ಅನ್ವಯ ಬಿಇಓ ಎಚ್. ಜಿ. ಮಿರ್ಜಿ ಅವರು ಎಫ್ ಐ ಆರ್ ದಾಖಲಿಸಿದ್ದಾರೆ.

ಅಷ್ಟೇ ಅಲ್ಲ, ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಕೊಠಡಿಯ ಮೇಲ್ವಿಚಾರಕ ಮಡಿಕೇಶ್ವರ ಗ್ರಾಮದ ಸತ್ ಸಂಸ್ಕಾರ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕ ಬಿ. ಎಸ್. ಪೋಲೇಸಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಆ ಕುರಿತ ಪತ್ರವನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಿಗೆ ನೀಡಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಸೂಚಿಸಿದ್ದಾರೆ.

ಅಲ್ಲದೇ, ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿದ್ದ ಬಿದರಕುಂದಿ ಆರ್ ಎಂ ಎಸ್ ಎ ಆದರ್ಶ ಶಾಲೆಯ ಶಿಕ್ಷಕಿ ಎಸ್. ಎಲ್. ಸೋಂಪೂರ ಅವರನ್ನು ಪರೀಕ್ಷಾ ಕರ್ತವ್ಯದಿಂದ ಬಿಡುಗಡೆ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.  ಮುಖ್ಯ ಅಧೀಕ್ಷಕ ಎಂಬಿಪಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಬಿ. ಎಸ್. ಪಾಟೀಲ ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕ ಜಮ್ಮಲದಿನ್ನಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಶಿಕ್ಷಕ ವೈ. ವಿ. ಕನ್ನೂರ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ.  ಅವರ ಜಾಗದಲ್ಲಿ ಕ್ರಮವಾಗಿ ಜಮ್ಮಲದಿನ್ನಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಬಿ. ಎಂ. ಬಸವಂತಪುರ ಮತ್ತು ಕೋಳೂರು ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್. ಎನ್. ರಾಠೋಡ ಅವರನ್ನು ನೇಮಕ ಮಾಡಲಾಗಿದೆ.

ಕರ್ತವ್ಯದಿಂದ ಬಿಡುಗಡೆ ಮಾಡಿರುವ ಇಬ್ಬರಿಗೂ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ.  ಈ ಸದರಿ ಪರೀಕ್ಷಾ ಕರ್ತವ್ಯಕ್ಕೆ ನೇಮಕವಾಗಿದ್ದ ಎಲ್ಲ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿ ಅವರ ಜಾಗದಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಜಿಟಿ, ಟಿಜಿಟಿ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಈ ಪ್ರಶ್ನೆ ಪತ್ರಿಕೆ ಪರೀಕ್ಷೆ ಪೂರ್ವದಲ್ಲಿ ಈ ಕೇಂದ್ರದಿಂದ ಸೋರಿಕೆಯಾಗಿಲ್ಲ.  ಆದರೆ, ಪರೀಕ್ಷೆ ಆರಂಭವಾಗಿ ಎರಡು ಗಂಟೆಗಳ ನಂತರ ಅನಾಮಧೆಯ ವ್ಯಕ್ತಿಯೊಬ್ಬ ಪ್ರಶ್ನೆ ಪತ್ರಿಕೆಯ ಮೂರು ಪುಟಗಳ ಫೋಟೋ ತೆಗೆದುಕೊಂಡಿದ್ದಾನೆ ಎಂದು ವಿದ್ಯಾರ್ಥಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.  ಹೀಗಾಗಿ ವಾಟ್ಸಾಪ್ ನಲ್ಲಿ ಹರಿದಾಡಿದ್ದ ಎಂಟು ಪುಟಗಳನ್ನು ಪರಿಶೀಲಿಸಿದಾಗ ಮೂರು ಪುಟಗಳು ಮಾತ್ರ ವಿಜಯಪುರ ಜಿಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿವೆ.  ಉಳಿದ ಐದು ಪುಟಗಳು ಈ ಕೇಂದ್ರಕ್ಕೆ ಸಂಬಂಧಿಸಿಲ್ಲ.

ಈ ಘಟನೆಯ ಹಿನ್ನೆಲೆಯಲ್ಲಿ ಮುಂಬರುವ ಪರೀಕ್ಷೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಪರೀಕ್ಷಾ ಗೌಪ್ಯತೆಯನ್ನು ಕಾಪಾಡಿ ನಿಯಮಾನುಸಾರ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ವಿ. ಎನ್. ಹೊಸೂರ ಅವರಿಗೆ ಸೂಚನೆ ನೀಡಲಾದಿದೆ.  ಅಲ್ಲದೇ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಬುಧವಾರ ನಡೆದಿದ್ದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಯ ವೇಳೆ ಪರೀಕ್ಷೆ ಪ್ರಾರಂಭಗೊಂಡ ಒಂದು ಗಂಟೆಯಲ್ಲೇ ಪ್ರಶ್ನೆಪತ್ರಿಕೆ ರಾಯಚೂರು ಜಿಲ್ಲೆ ಮುದಗಲ್ಲಿನಲ್ಲಿ ಬಹಿರಂಗಗೊಂಡು ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದುದನ್ನು ಇಲ್ಲಿ ಗಮನಿಸಬಹುದಾಗಿದೆ.

Leave a Reply

ಹೊಸ ಪೋಸ್ಟ್‌