ವಿಜಯಪುರ: ತಾವು ಸಚಿವರಾಗಲು(Minister) ಬಿ. ವೈ. ವಿಜಯೇಂದ್ರ(B. Y. Vijayendra) ಅಡ್ಡಗಾಲು(Hurdle) ಹಾಕಿದ್ದಾರೆ ಎಂಬ ಮಾತುಗಳಿಗೆ ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಬಳಿಕ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆ ವಿಚಾರದ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಅವರು ಏನು ನಿರ್ಣಯ ಮಾಡುತ್ತಾರೋ ಗೊತ್ತಿಲ್ಲ. ಸಚಿವ ಸಂಪುಟ ಬದಲಾವಣೆ ಮಾಡುತ್ತಾರೋ? ಅಥವಾ ಪುನರ್ ರಚನೆ ಮಾಡುತ್ತಾರೋ? ಯಾವುದೂ ಸ್ಪಷ್ಟವಾದ ಸಂದೇಶ ಕೇಂದ್ರದಿಂದ ಬಂದಿಲ್ಲ. ಈಗ ನಾವು ಏನೇ ಮಾತನಾಡಿದರೂ ಅದು ಊಹಾಪೂಹ ಆಗುತ್ತದೆ. ಪಕ್ಷದ ಕಾರ್ಯಕಾರಿಣಿ ಬಳಿಕ ಒಟ್ಟಾರೆ ಒಳ್ಳೆ ಬೆಳವಣಿಗೆ ಆಗುತ್ತದೆ ಎಂದ ಯತ್ನಾಳ ಹೇಳಿದರು.
ದೆಹಲಿ ಪ್ರಯಾಣ, ತಾವು ಸಚಿವರಾಗಲು ವಿಜಯೇಂದ್ರ ಅಡ್ಡಗಾಲು ವಿಚಾರ
ವೈಯಕ್ತಿಕ ಹಾಗೂ ಕಾರ್ಯಕಾರಿಣಿ ಕೆಲಸದ ನಿಮಿತ್ಯ ನಾನು ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಲಾಬಿ ಮಾಡುವುದಕ್ಕೆ ನಾನು ದೆಹಲಿಗೆ ಹೋಗಿಲ್ಲ. ಈ ಮೊದಲೂ ಶಾಸಕ ಅರವಿಂದ ಬೆಲ್ಲದ ಜೊತೆ ನಾನು ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಹೋಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಾವು ಸಚಿವನಾಗಲು ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಹೈಕಮಾಂಡ್ ಎಂತಿಂಥವರನ್ನು ಮನೆಯಲ್ಲಿ ಕೂಡಿಸಿದೆ. ಇನ್ನು ವಿಜಯೇಂದ್ರ ಯಾವ ಗಿಡದ ತಪ್ಪಲು? ನನ್ನಿಂದಲೇ ಬಿಜೆಪಿ ಎನ್ನುವವರನ್ನೇ ಮನೆಯಲ್ಲಿ ಕೂಡಿಸಿದ್ದಾರೆ. ವಿಜಯೇಂದ್ರ ಮೊನ್ನೆ ಮೊನ್ನೆ ನಮ್ಮ ಮುಂದೆಯೇ ಹುಟ್ಟಿದ ಹುಡುಗ. ಬಿಜೆಪಿಯಲ್ಲಿ ಇನ್ನು ಮುಂದೆ ವಂಶಪಾರಂಪರೆಗೆ ಅವಕಾಶವಿಲ್ಲ. ಪರಿವಾರ ವಾದ್ ಬಿಜೆಪಿಯಲ್ಲಿ ನಡೆಯಲ್ಲ ಎಂದು ಎಂದು ಪ್ರಧಾನ ಮಂತ್ರಿಗಳು ನಾಲ್ಕೈದು ಬಾರಿ ಹೇಳಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೇಟ್ ಕೊಡುವ ಕಾಲ ಬಿಜೆಪಿಯಲ್ಲಿ ಹೋಯ್ತು. ಮೊನ್ನೆ ಉತ್ತರ ಪ್ರದೇಶದಲ್ಲಿ ಈ ಪ್ರಯೋಗ ಆಗಿದೆ. ಅಪ್ಪನ ಜಾಗ ನನಗೆ ಬೇಕು, ಅಪ್ಪನ ಜಾಗ ನನಗೆ ಕೊಡಿ ಎನ್ನುವುದು ಇನ್ನು ಮುಂದೆ ಯಾವುದೂ ಉಳಿಯುವುದಿಲ್ಲ ಎಂಬ ವಿಶ್ವಾಸ ನನಗಿದೆ. ಆ ಭ್ರಮೆಯಲ್ಲಿ ಇರುವುದಕ್ಕಿಂದ ಈಗೇನಾದರೂ ಉದ್ಯೋಗ ಮಾಡಿಕೊಂಡಿದ್ದರೆ ಅದರಲ್ಲಿ ಮುಂದುವರೆಯುವುದು ಒಳ್ಳೆಯದು ಎಂದು ಅವರು ಹೇಳಿದರು.
ಮುಸ್ಲಿಮರ ವಿರುದ್ಧ ಅಭಿಯಾನ ವಿಚಾರ
ರಾಜ್ಯದಲ್ಲಿ ಹಿಜಾಬ್ ನಿಂದ ಹಿಡಿದು ಮುಸ್ಲಿಂರ ಕ್ಯಾಬ್ ಗಳನ್ನು ದೇವಸ್ಥಾನಗಳಿಗೆ ಬಳಸಬಾರದು ಎಂಬುದರ ಜಾಗೃತಿ ವಿಚಾರ ಕುರಿತು ಮಾತನಾಡಿದ ಅವರು, ಇದು ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ನಡೆದುಕೊಂಡಿದ್ದಾರೆ. ಹಿಜಾಬ್ ವಿಚಾರದಲ್ಲಿ ಸಂವಿಧಾನವನ್ನೂ ಒಪ್ಪುವುದಿಲ್ಲ. ಕೋರ್ಟ್ ಆದೇಶವನ್ನೂ ಒಪ್ಪುವುದಿಲ್ಲ ಎಂದರೆ ಅವರಿಗೆ ನಮ್ಮ ದೇಶದ ಮೇಲೆ ಗೌರವ ಇಲ್ಲ ಎಂದರ್ಥ. ಹೀಗಾಗಿ ಹಿಂದೂಗಳಲ್ಲಿ ಸಹಜವಾಗಿಯೇ ಆ ಭಾವನೆ ಬಂದಿದೆ. ದೇಶದ ಬಗ್ಗೆ ಚಿಂತೆ ಮಾಡುವ ಮುಸ್ಲಿಮರು ಇಂಥ ವಿಚಾರಗಳಿಗೆ ಅಂತ್ಯ ಹಾಡಬೇಕಿದೆ. ಇದಕ್ಕೆಲ್ಲ ಅಂತ್ಯವಾಗಬೇಕಾದರೆ ಮುಸ್ಲಿಂ ರಿಂದ ಪಾಸಿಟಿವ್ ವಿಚಾರ ಬರಬೇಕಿದೆ. ಈ ವಿಚಾರದಲ್ಲಿ ಹಿಂದೂಗಳಿಂದ ಯಾವುದೇ ತಪ್ಪಾಗಿಲ್ಲ ಎಂದು ಯತ್ನಾಳ ಸಮರ್ಥಿಸಿಕೊಂಡರು.
ಬೆಂಗಳೂರಿನಲ್ಲಿ ಯುವಕನ ಕೊಲೆ ವಿಚಾರ
ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡು ವಿಚಾರದ ಕುರಿತು ಪ್ರತ್ರಿಕ್ರಿಯೆ ನೀಡಿದ ಶಾಸಕರು, ಚಂದ್ರು ಹತ್ಯೆಯೇ ವಿವಾದಾಸ್ಪದವಾಗಿದೆ. ಆತನ ಹತ್ಯೆ ಯಾಕಾಗಿದೆ ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಅದಕ್ಕೆ ಸಿಐಡಿ ಗೆ ಕೊಡಬೇಕೋ? ಅಥವಾ ಸಿಬಿಐ ಗೆ ಕೊಡಬೇಕೋ? ಈ ವಿಚಾರದ ವಾಸ್ತವಿಕತೆ ಬಗ್ಗೆ ಸಿಎಂ ಹೇಳಿದ್ದಾರೆ. ಸಂಪೂರ್ಣವಾಗಿ ಆ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಧಾರವಾಡದಲ್ಲಿ ಗಲಾಟೆ ವಿಚಾರ
ಧಾರವಾಡ ನಗರದ ನುಗ್ಗಿಕೇರೆ ಆಂಜನೇಯ ದೇವಸ್ಥಾನದಲ್ಲಿ ಹಿಂದೂಗಳಿಂದ ಮುಸ್ಲಿಂ ವ್ಯಾಪಾರಸ್ಥರ ಅಂಗಡಿ ಧ್ವಂಸ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಆಕ್ಷನ್ ಗೆ ರಿಯಾಕ್ಷನ್ ಆಗಿದೆ ಎಂದು ಹೇಳಿದರು.
ಹಿಂದೂ, ಮುಸ್ಲಿಂ ಎಲ್ಲರೂ ದೇಶದಲ್ಲಿ ಬಾಳಬೇಕಾಗಿದೆ. ಹಿಂದೂಗಳ ಭಾವನೆಗಳಿಗೆ ನೋವಾಗುವಂತೆ ಕೆಲ ಮುಸ್ಲಿಂ ಲೀಡರ್ ಗಳು ಮಾತನಾಡುವ ಕಾರಣ ಜನರಲ್ಲಿ ಆಕ್ರೋಶವಿದೆ. ಅದಕ್ಕಾಗಿ ಕ್ರಿಯೆಗೆ ಪ್ರತಿಕ್ರಿಯೆ ಆಗುತ್ತಿದೆ ಎಂದು ಅವರು ಆರೋಪಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಬೇಡಿಕೆ ವಿಚಾರ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಂಚಮಸಾಲಿ 2ಎ ಮೀಸಲಾತಿ, ಎಸ್. ಟಿ. ಮೀಸಲಾತಿ ಹೆಚ್ಚಳ ಹಾಗೂ ಇತರೇ ಸಮಾಜಗಳಿಗೆ ಶೀಘ್ರದಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದು ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಕುರಿತು ಸಮಗ್ರ ವರದಿಯನ್ನು ತರಿಸಿಕೊಂಡು ಸರ್ವ ಪಕ್ಷಗಳ ಸಭೆ ಕರೆದು ನಿರ್ಣಯ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಇನ್ನೊಂದು ತಿಂಗಳಲ್ಲಿ ಎಸ್. ಟಿ. ಮೀಸಲಾತಿ ಹೆಚ್ಚಳ ಜೊತೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಚರ್ಚೆ ಮಾಡಿ ಸಿಎಂ ನಿರ್ಧರಿಸಲಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಾವು ಸರಕಾರಕ್ಕೆ ಗಡುವು ನೀಡಿದ್ದೆವು. ಸಿಎಂ ಅವರು ಸದನದಲ್ಲಿ ಸ್ಪಷ್ಟ ಭರವಸೆ ನೀಡಿದ ಕಾರಣ ನಾವು ಕಾಯುತ್ತಿದ್ದೇವೆ. ಈ ಹೋರಾಟದ ವಿಚಾರದಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ. ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮಾಜಗಳ ಮೀಸಲಾಗಿ ಸಮಗ್ರ ಪುನರ್ ರಚನೆ ಆಗಬೇಕು ಎಂದು ಸಿಎಂ ಹೇಳಿದ್ದಾರೆ. ಅಲ್ಲದೇ, ಈ ಕುರಿತು ಮಾಜಿ ಸಿಎಂ ಗಳಾದ ಎಸ್. ಸಿದ್ರಾಮಯ್ಯ, ಎಚ್. ಡಿ. ಕುಮಾರಸ್ವಾಮಿ, ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆದಷ್ಟು ಬೇಗ ನಮ್ಮ ಬೇಡಿಕೆ ಇಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಮತ್ತು ಇತರರು ಉಪಸ್ಥಿತರಿದ್ದರು.