ಮಾತುಗಳ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸಮಾಜವನ್ನು ಉಪಯೋಗಿಸುವ ನಾಯಕರನ್ನು ತಮ್ಮ ಮಾತಿನ ಮೂಲಕ ತಿವಿದ ಸಂಗಮೇಶ ಬಬಲೇಶ್ವರ

ವಿಜಯಪುರ: ಕೆಪಿಸಿಸಿ ಮುಖಂಡ(KPCC Leader) ಮತ್ತು ಪಂಚಮಸಾಲಿ(Panchamasali) ಮೀಸಲಾತಿ(Reservation) ಹೋರಾಟ ಸಮಿತಿಯ ಯುವ ನಾಯಕ(Youth Leader) ಸಂಗಮೇಶ ಬಬಲೇಶ್ವರ (Sangamesh Babaleshwar) ಮಾತುಗಳೆಂದರೆ ಅದರಲ್ಲಿ ಅರ್ಥದ ಜೊತೆಗೆ ಅಪಾರಾರ್ಥಗಳು ಇರುತ್ತವೆ.  ಯಾರಿಗೆ ಯಾವ ರೀತಿ ಸಂದೇಶ ತಲುಪಿಸಬೇಕೋ ಅದನ್ನು ಅವರದೇ ಆದ ಶೈಲಿಯಲ್ಲಿ ಮುಟ್ಟಿಸುತ್ತಾರೆ. 

ಈಗ ಪ್ರಸ್ತುತ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಸಮಾಜದ ಅಗ್ರಗಣ್ಯ ನಾಯಕರ ವರ್ತನೆ, ಸ್ವಾರ್ಥ, ಪರಾರ್ಥಗಳ ಕುರಿತು ಸಂಗಮೇಶ ಬಬಲೇಶ್ವರ ತಮ್ಮದೇ ಆದ ಶೈಲಿಯಲ್ಲಿ ತಿವಿದು ತಿದ್ದಿಕೊಳ್ಳುವಂತೆ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಕೈ ಮುಗಿದು ಮಾತನಾಡಿದರು

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆ ಅನಾವರಣ ಹಾಗೂ ವಿಜಯಪುರ ಜಿಲ್ಲೆಯ ಪಿಂಚಮಸಾಲಿ 2ಎ ಮೀಸಲಾತಿಗೆ ಹಕ್ಕೋತ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮಂತೆ ಸಮಾಜದ ಇತರ ಜನರ ಮನಸ್ಸಿನಲ್ಲಿರುವ ಭಾವನೆಗಳನ್ನು ತೆರೆದಿಟ್ಟರು.

ಪಂಚಮಸಾಲಿ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರು ಮತ್ತು ನಾಯಕರನ್ನು ಸ್ವಾಮೀಜಿಗಳ ಸಮ್ಮುಖದಲ್ಲಿಯೇ ಕೈ ಮುಗಿದು ತಮ್ಮ ಮಾತಿನ ಮೂಲಕವೇ ತಿವಿದು ಮಾತನಾಡಿದರು.

ಕೆಲವು ನಾಯಕರು ಪಂಚಮಸಾಲಿ ಸಮಾಜವನ್ನು ತಮ್ಮ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.  ಇದು ತರವಲ್ಲ ಎಂದು ನಯವಾಗಿಯೇ ಹೇಳಿದ ಅವರು, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಎಷ್ಟೋಂದು ಸಂಘಟಿತವಾಗಿದೆ ಎಂಬುದನ್ನು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರುಗಳ 2ಎ ಮೀಸಲಾತಿ ಹೋರಾಟದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

 

ಚೆನ್ನಮ್ಮ ಕೇವಲ ಪಂಚಮಸಾಲಿ ಸಮುದಾಯದ ಆಸ್ತಿಯಲ್ಲ.  ಪಂಚಮಸಾಲಿ ಸಮಾಜದವರು ಎಲ್ಲ ಸಮಾಜದವರೊಂದಿಗೆ ಹಾಲು ಸಕ್ಕರೆಯಂಥ ಬಾಂಧವ್ಯವನ್ನು ಹೊಂದಿದ್ದಾರೆ.  ಕೂಡಲ ಸಂಗಮ ಬಸವಜ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಐತಿಹಾಸಿಕ ಹೋರಾಟದ ಫಲವಾಗಿ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.  ಆದರೆ, ನಮ್ಮ ಪಂಚಮಸಾಲಿ ಸಮಾಜದ ನಾಯಕರಿಗೆ ಸಿಟ್ಟು ಬಹಳ ಜಾಸ್ತಿ ಇದೆ.  ಪಂಚಮಸಾಲಿಗಳೆಂದರೆ ಎಲ್ಲರೂ ಗೌಡರೇ.  ಈ ಹಿಂದೆ ನಾನು ಯುವ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದಾಗ ಇಂಡಿ ಶಾಸಕ ರವಿಕಾಂತ ಪಾಟೀಲ ಅವರು ಎಚ್. ಡಿ. ಕುಮಾರಸ್ವಾಮಿ ಅವರ ಬಳಿಗೆ ಬಂದಿದ್ದರು.  ಆಗ ಅವರು ಬೇಡಿಕೆಯ ಪತ್ರವೊಂದನ್ನು ರವಿಕಾಂತ ಪಾಟೀಲ ಕುಮಾರಸ್ವಾಮಿ ಅವರಿಗೆ ನೀಡಿದರು.  ಈ ಕೆಲಸ ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ ರವಿಕಾಂತ ಪಾಟೀಲ ಅವರು ಅದೇ ಸ್ಥಳದಲ್ಲಿ ಬೇಡಿಕೆಯ ಪತ್ರವನ್ನು ಹರಿದು ಹಾಕಿ ಅಲ್ಲಿಂದ ತಮ್ಮ ಕಾರಿನಲ್ಲಿ ನಿರ್ಗಮಿಸಿದರು.  ಪಂಚಮಸಾಲಿಗಳು ಸಿಟ್ಟಿನ ಸ್ವಭಾವದವರಾಗಿದ್ದರೂ, ಅವರಷ್ಟು ಹೃದಯವಂತರು ಜಗತ್ತಿನಲ್ಲಿ ಯಾರೂ ಸಿಗಲ್ಲ ಎಂದು ಅವರು ಹೇಳಿದರು.

ಪಂಚಮಸಾಲಿ ಪಾಟೀಲರ ಮಧ್ಯೆ ಹೊಂದಾಣಿಕೆ ಇಲ್ಲ

ಶಾಸಕ ಯತ್ನಾಳ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಇರಬಹುದು.  ಪಾಟೀಲರ ಮಧ್ಯೆ ಹೊಂದಾಣಿಕೆ ಆಗುವುದಿಲ್ಲ.  ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಿ ಬರುವುದಿಲ್ಲ.  ಇದರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಸಮಾಜ ಹಾಳಾಗಿದೆ.  ಮೊದಲು ಇವರನ್ನು ಒಗ್ಗೂಡಿಸುವ ಕೆಲಸವನ್ನು ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಡಲಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.  ಈ ಹಿಂದೆ ಇಂಡಿ ಸಮಾವೇಶದಲ್ಲಿ ಇದೇ ರೀತಿ ಪ್ರತಿಷ್ಠೆ, ಗೌಡಕಿಯನ್ನು ತೋರಿಸಿ ಆ ಕಾರ್ಯಕ್ರಮದ ಮಾಧುರ್ಯವನ್ನು ಹಾಳು ಮಾಡಿದರು.  ಅದು ಆಗಬಾರದು.  ಇದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಪ್ರಾಮಾಣಿಕ ಪರಿಶ್ರಮಕ್ಕೆ ಮಾಡಿದ ಅವಮಾನ ಎಂದು ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕು.  ನಮ್ಮ ಅಹಂಕಾರವನ್ನು ಯಾವಾಗ ಬಿಡುತ್ತೀರೋ ಆವಾಗ ಈ ಸಮಾಜಕ್ಕೆ ಒಂದು ಹೊಸ ದಿಕ್ಕು ಸಿಗುತ್ತದೆ.  ನೀವು ಯಾಕೆ ಟೀಕೆ ಮಾಡಲು ವೇದಿಕೆಯನ್ನು ಬಳಸಿಕೊಳ್ಳುತ್ತೀರಿ? ನಿಮಗೆ ಅಸಮಾಧಾನವಿದ್ದರೆ ಅವರವರ ಮನೆಯ ಮುಂದೆ ವೇದಿಕೆ ಹಾಕಿ ಬಗೆಹರಿಸಿಕೊಳ್ಳಿ.  ಆದರೆ, ಪೂಜ್ಯರ ಸಮ್ಮುಖದಲ್ಲಿ ಕೇವಲ ಸಮಾಜದ ಮೀಸಲಾತಿಗೋಸ್ಕರ ಚರ್ಚೆಯಾಗಬೇಕು.  ಪೂಜ್ಯರ ಗೌರವವನ್ನು ಹೆಚ್ಚಿಸುವ ವರ್ತನೆ ನಮ್ಮ ನಾಯಕರಲ್ಲಿ ಇರಬೇಕು ಎಂದು ಸಂಗಮೇಶ ಬಬಲೇಶ್ವರ ಮಾರ್ಮಿಕವಾಗಿ ಹೇಳಿದರು.

ಹಿರಿಯ ನಾಯಕರ ವರ್ತನೆಯಿಂದ ನಮ್ಮಂಥ ಎರಡನೇ ಹಂತದ ನಾಯಕರಿಗೆ ಸಾಕು ಸಾಕಾಗಿ ಹೋಗಿದೆ.  ನಮಗೆ ಗುರು ಎಂದರೆ ತಾಯಿ.  ನಿಮ್ಮ ಹೃದಯವಂತಿಕೆಯ ತಾಯ್ತನಕ್ಕೆ ತಲೆ ಬಾಗ್ತೀವಿ.  ಆದರೆ, ವೈಯಕ್ತಿಕ ಅಹಂ ಹೊಂದಿದ ನಾಯಕರನ್ನು ಸ್ವೀಕರಿಸಲು ಆತ್ಮಸಾಕ್ಷಿ ಕೆಣಕುತ್ತದೆ.  ಅದನ್ನು ನಾವು ಒಪ್ಪುವುದಿಲ್ಲ.  ಸ್ವಾಮೀಜಿಗಳ ಸಮ್ಮುಖದಲ್ಲಿ ಮನಬಿಚ್ಚಿ ಮಾತನಾಡುತ್ತಿದ್ದೇನೆ.  ನಮಗೆ ತಾಯಿಯ ಪ್ರೀತಿ ಕೊಟ್ಟವರು ಸ್ವಾಮೀಜಿಗಳು.  ಶ್ರೀಗಳ ಜೊತೆ 24 ಗಂಟೆ ಕೆಲಸ ಮಾಡಬೇಕು ಎನಿಸುತ್ತದೆ.  ಆದರೆ, ಕೆಲವರ ಅಹಂಕಾರ, ದುರಹಂಕಾರ ನೋಡಿದರೆ ನಮಗೂ ಆತ್ಮಸಾಕ್ಷಿ ಒಪ್ಪುವುದಿಲ್ಲ.  ನಾವೆಲ್ಲರೂ ನಿಮ್ಮ ಜೊತೆ ದುಡಿಯುತ್ತೇವೆ.  ನೀವು ಸಮಾಜಕ್ಕಾಗಿ ನಿಮ್ಮ ಬದುಕನ್ನು ಸಮರ್ಪಣೆ ಮಾಡಬೇಕು.  ಎಲ್ಲರೂ ಭಾಷಣ ಮಾಡುವವರೇ ಆಗಿದ್ದಾರೆ.  ಸ್ವಾಮೀಜಿಗಳ ಹೋರಾಟದಿಂದಾಗಿ ಇವತ್ತು ಎಲ್ಲ ಮುಖ್ಯಮಂತ್ರಿಗಳು ಕಣ್ಣು ತೆರೆದು ನೋಡುವಂತಾಗಿದೆ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.

ಸಿಎಂ ಬೊಮ್ಮಾಯಿ ಅವರ ಓಲೈಕೆ ನಿಲ್ಲಿಸಬೇಕು, ಸಮಾಜ ಯಾರಪ್ಪನ ಸ್ವತ್ತೂ ಅಲ್ಲ

ಪಂಚಮಸಾಲಿ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ಅವರ ಓಲೈಕೆ ಮಾಡುವುದನ್ನು ನಿಲ್ಲಿಸಬೇಕು.  ಸಿಎಂ ಮೀಸಲಾತಿ ನೀಡದಿದ್ದರೆ, ಅವರು ರಾಜೀನಾಮೆ ನೀಡುವವರೆಗೆ ಮತ್ತು ನಮ್ಮ ಸಮಾಜಕ್ಕೆ ನ್ಯಾಯ ಸಿಗುವವರೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಬೇಕು.  ಅದಕ್ಕೆ ನಾವು ಸಿದ್ಧರಿದ್ದೇವೆ.

ಸಮಾಜ ಯಾರಪ್ಪನ ಸ್ವತ್ತೂ ಅಲ್ಲ.  ಯಾರೂ ಸರ್ವಾಧಿಕಾರಿಯೂ ಅಲ್ಲ.  ಈ ಸಮಾಜ ತಾಯಿ ಹೃದಯದ ಸಮಾಜ.  ಪಂಚಮಸಾಲಿ ಸಮಾಜದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಯುವಕ ಚೆನ್ನಮ್ಮರ ವಂಶಸ್ಥನಾಗಿದ್ದಾನೆ.  ನಮಗೂ ಸ್ವಾಭಿಮಾನವಿದೆ.  ನಮ್ಮಲ್ಲೂ ಶಕ್ತಿಯಿದೆ.  ಇದನ್ನು ಸ್ವಾಮೀಜಿಗಳ ಪಾದಕ್ಕೆ ಧಾರೆಯೆರೆದು ಶರಣಾಗುತ್ತೇವೆ.  ಪೂಜ್ಯರೇ ಯಾರು ತಮ್ಮ ಅಹಂಕಾರ, ವೈಯಕ್ತಿಕ ಸ್ವಾರ್ಥವನ್ನು ತಮ್ಮ ಮನೆಯಲ್ಲಿಟ್ಟು ಬಂದು ಸಮಾಜದ ಕೆಲಸ ಮಾಡುತ್ತಾರೋ ಅವರಿಗೆ ಆದ್ಯತೆ ನೀಡಿ ಎಂದು ಅವರು ಆಗ್ರಹಿಸಿದರು.

ಪೂಜ್ಯರು ಸಮಾಜಕ್ಕಾಗಿ ಎಲ್ಲವನ್ನೂ ಮಾಡಿ ಏನನ್ನೂ ಮಾಡದ ರೀತಿಯಲ್ಲಿ ಸಮಾಜಕ್ಕೆ ಸಮರ್ಪಿತರಾಗಿದ್ದಾರೆ.  ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ.  ಯಾರು ಮುಖ್ಯ ವಾಹಿನಿಗೆ ಬರ್ತಾರೋ ಅವರಲ್ಲಿ ಆತ್ಮಸಾಕ್ಷಿ ಇರಬೇಕಾಗುತ್ತದೆ.  ನೈತಿಕತೆ ಇರಬೇಕಾಗುತ್ತದೆ.  ಬರೀ ಚಪ್ಪಾಳೆ ಹೊಡಿಸಿಕೊಳ್ಳುವವರು ಬೇಕಾಗಿಲ್ಲ.  ಪ್ರಾಮಾಣಿಕವಾಗಿ ಈ ಸಮಾಜದ ಬಗ್ಗೆ ಕಳಕಳಿಯಿರುವ ನಾಯಕರು ಎಲ್ಲ ಹಂತಗಳಲ್ಲಿಯೂ ವಿಜೃಂಭಿಸಬೇಕು. ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಸಮಾಜದಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿ ಬೆಳಿಗ್ಗೆ ಎದ್ದು ಮುಖ್ಯಮಂತ್ರಿ ಬಳಿಗೆ ಹೋಗಿ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುವವರ ಬ್ಗಗೆ ನಾವೆಲ್ಲ ಎಚ್ಚರದಿಂದ ಇರಬೇಕು.  ಆಗ ಮಾತ್ರ ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ಮೀಸಲಾತಿ ಸಿಕ್ಕೆ ಸಿಗುತ್ತದೆ.  ಆ ಕೂಗು ವಿಧಾನಸೌಧದ ವರೆಗೂ ಮುಟ್ಟಬೇಕಾಗುತ್ತದೆ.   ಅದರ ಬದಲು ದೊಡ್ಡ ದೊಡ್ಡ ಭಾಷಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಡಾ. ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಡಾ. ಸಾರ್ವಭೌಮ ಬಗಲಿ, ವಿಜಯಾನಂದ ಕಾಶಪ್ಪನವರ, ಪ್ರೊ. ರಾಜು ಆಲಗೂರ, ವಿಠ್ಠಲ ಕಟಕದೊಂಡ, ಮುಖಂಡರಾದ ಉಮೇಶ ಕಾರಜೋಳ, ವಿಠ್ಠಲಗೌಡ, ಎಂ. ಆರ್. ಪಾಟೀಲ ಬಳ್ಳೊಳ್ಳಿ, ಶ್ರೀಮಂತ ಇಂಡಿ, ರುದ್ರಗೌಡ, ಶಶಿಧರ ಸಾತಲಗಾಂವ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌